ADVERTISEMENT

ಶಿವಮೊಗ್ಗ | ನೀನಾಸಂ: ಕಲೆಗಳ ಸಂಗಡ ಮಾತುಕತೆ ಅ. 2ರಿಂದ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2024, 20:23 IST
Last Updated 16 ಆಗಸ್ಟ್ 2024, 20:23 IST

ಶಿವಮೊಗ್ಗ: ಹೆಗ್ಗೋಡಿನ ನೀನಾಸಂ ಸಂಸ್ಥೆಯಲ್ಲಿ ಅ. 2ರಿಂದ 6ರವರೆಗೆ 5 ದಿನಗಳ ಕಾಲ ‘ಕಲೆಗಳ ಸಂಗಡ ಮಾತುಕತೆ’ ಕಾರ್ಯಕ್ರಮ ಆಯೋಜಿಸಲಾಗಿದೆ.

ಎರಡೂವರೆ ದಶಕಗಳಿಂದ ಪ್ರತಿವರ್ಷ ಚಲನಚಿತ್ರ– ಸಂಸ್ಕೃತಿ ಶಿಬಿರ ಆಯೋಜಿಸುತ್ತಿರುವ ನೀನಾಸಂ ಎರಡು ವರ್ಷಗಳಿಂದ ಅದರ ಪರಿಷ್ಕೃತ ರೂಪವಾದ ‘ಕಲೆಗಳ ಸಂಗಡ ಮಾತುಕತೆ’ ಕಾರ್ಯಕ್ರಮ ಆಯೋಜಿಸುತ್ತಿದೆ.

ನಿರ್ದಿಷ್ಟ ವಿಷಯಗಳ ಕುರಿತ ಉಪನ್ಯಾಸ, ಗೋಷ್ಠಿ, ಸಂವಾದಗಳು ಇರುವುದಿಲ್ಲ. ಬದಲಿಗೆ ರಂಗಭೂಮಿ, ಸಾಹಿತ್ಯ, ಸಂಗೀತ, ಸಿನೆಮಾ, ಚಿತ್ರಕಲೆ ಮೊದಲಾದ ಕಲಾ ಪಠ್ಯಗಳ ಪ್ರಸ್ತುತಿ ಮತ್ತು ಅವನ್ನು ಕುರಿತ ಚರ್ಚೆಗಳು ಇರುತ್ತವೆ. 5 ದಿನ ಸಂಜೆ ‘ತಿರುಗಾಟ’ ಮತ್ತು ನೀನಾಸಂ ನಾಟಕಗಳೂ ಸೇರಿದಂತೆ ಕಲಾ ಪ್ರಯೋಗಗಳ ಉತ್ಸವ ಸಾರ್ವಜನಿಕರಿಗೆ ತೆರೆದಿರುತ್ತದೆ.

ADVERTISEMENT

ಈ ಮಾತುಕತೆಗೆ ಕರ್ನಾಟಕ ಮತ್ತು ಹೊರಗಿನ ಬೇರೆಬೇರೆ ರಾಜ್ಯಗಳ ಕಲಾವಿದರು, ವಿದ್ವಾಂಸರು, ಲೇಖಕರು ಉಪನ್ಯಾಸಕರಾಗಿಯೂ ಬರುತ್ತಾರೆ. ಆಸಕ್ತರನ್ನು ಸೀಮಿತ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಳ್ಳಲಾಗುತ್ತದೆ. ಹಾಗೆ ಬರುವವರು ಐದೂ ದಿನ ಪೂರ್ಣಾವಧಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಅಗತ್ಯ. ಭಾಗಶಃ ಪಾಲ್ಗೊಳ್ಳಲು ಅವಕಾಶ ಇಲ್ಲ. ಹೆಚ್ಚಿನ ವಿವರಗಳು ಮತ್ತು ನೋಂದಣಿಗಾಗಿ www.ninasam.org ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.