ADVERTISEMENT

₹ 70 ಲಕ್ಷ ದೇಣಿಗೆ ನೀಡಿದ ಹಳೆ ವಿದ್ಯಾರ್ಥಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2023, 23:00 IST
Last Updated 15 ಏಪ್ರಿಲ್ 2023, 23:00 IST
ಆನಂದಪುರದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ರೇಕ್ಯೂ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಊಟದ ಸಭಾಂಗಣ ನಿರ್ಮಾಣಕ್ಕೆ ಸಂಸ್ಥೆಯ ಸಿಇಒ ಪ್ರಕಾಶ್ ರುಕ್ಮಯ್ಯ ಭೂಮಿಪೂಜೆ ನೆರವೇರಿಸಿದರು
ಆನಂದಪುರದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ರೇಕ್ಯೂ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಊಟದ ಸಭಾಂಗಣ ನಿರ್ಮಾಣಕ್ಕೆ ಸಂಸ್ಥೆಯ ಸಿಇಒ ಪ್ರಕಾಶ್ ರುಕ್ಮಯ್ಯ ಭೂಮಿಪೂಜೆ ನೆರವೇರಿಸಿದರು   

ಆನಂದಪುರ (ಶಿವಮೊಗ್ಗ ಜಿಲ್ಲೆ): ಸಾಗರ ತಾಲ್ಲೂಕಿನ ಆನಂದಪುರದ ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಯೊಬ್ಬರು
ತಮ್ಮದೇ ಸಂಸ್ಥೆಯನ್ನು ಕಟ್ಟಿ ಉನ್ನತ ಸ್ಥಾನಕ್ಕೆ ತಲುಪಿದ್ದು, ತಮಗೆ ಶಿಕ್ಷಣ ನೀಡಿದ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.

ಬೆಂಗಳೂರಿನ ರೇಕ್ಯೂ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ
ಪ್ರಕಾಶ್ ರುಕ್ಮಯ್ಯ ಅವರು ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಈಗಿನ ಕರ್ನಾಟಕ ಪಬ್ಲಿಕ್ ಸ್ಕೂಲ್) ಓದಿದ್ದರು. ಈಗ ಅದೇ ಶಾಲೆಗೆ ಹೈಟೆಕ್ ಸ್ಪರ್ಶ ನೀಡುತ್ತಿದ್ದಾರೆ.

₹ 70 ಲಕ್ಷದ ವೆಚ್ಚದಲ್ಲಿ ಆಧುನಿಕ ಸೌಲಭ್ಯಗಳಿರುವ ಸುಸಜ್ಜಿತ ಊಟದ ಸಭಾಂಗಣ ನಿರ್ಮಿಸಿಕೊಡಲು ಮುಂದಾಗಿದ್ದಾರೆ. ಸಭಾಂಗಣ ನಿರ್ಮಾಣ ಕಾಮಗಾರಿಗೆ ಅವರು ಶನಿವಾರ ಭೂಮಿಪೂಜೆ ನೇರವೇರಿಸಿದ್ದಾರೆ.

ADVERTISEMENT

ಈ ಮೊದಲು,ಪ್ರಕಾಶ್‌ ಅವರು ₹ 4 ಲಕ್ಷ ವೆಚ್ಚದಲ್ಲಿ ಅನ್ನ ತಯಾರಿಸುವ ಬಾಯ್ಲರ್‌ಗಳು, ₹ 14 ಲಕ್ಷ ವೆಚ್ಚದಲ್ಲಿ ಅಡುಗೆ ಕೊಠಡಿ ಹಾಗೂ ಧ್ವಜಸ್ತಂಭವನ್ನು ನಿರ್ಮಿಸಿಕೊಟ್ಟಿದ್ದರು. ಜೆರಾಕ್ಸ್, ಪ್ರಿಂಟಿಂಗ್ ಯಂತ್ರವನ್ನೂ ಶಾಲೆಗೆ ಕೊಡುಗೆ ನೀಡಿದ್ದರು. ಈ ಶಾಲೆಯಲ್ಲಿ ಎಲ್‌ಕೆಜಿಯಿಂದ ದ್ವಿತೀಯ ಪಿಯುವರೆಗೆ ಒಟ್ಟು 1,200 ವಿದ್ಯಾರ್ಥಿಗಳು ಓದುತ್ತಿದ್ದಾರೆ.

‘ಶಾಲೆಯಲ್ಲಿ ಓದಿದ ಎಲ್ಲ ವಿದ್ಯಾರ್ಥಿಗಳಿಗೆ ತಮ್ಮ ಶಾಲೆಯ ಅಭಿವೃದ್ಧಿ ಮಾಡಬೇಕು ಎಂಬ ಮನೋಭಾವ ಬರುವುದಿಲ್ಲ. ಆದರೆ, ಪ್ರಕಾಶ್ ಅವರು ಮಕ್ಕಳ ಏಳಿಗೆಗಾಗಿ ಹೃದಯ ವೈಶಾಲ್ಯ ತೋರಿರುವುದು ಹೆಮ್ಮೆಯ ವಿಷಯ’ ಎಂದು ಶಾಲೆಯ ಉಪ ಪ್ರಾಂಶುಪಾಲ ಈಶ್ವರಪ್ಪ ಮೆಚ್ಚುಗೆ
ವ್ಯಕ್ತಪಡಿಸಿದರು.

ವೀರಾಂಜನೇಯ ಸೇವಾ ಟ್ರಸ್ಟ್ ಅಧ್ಯಕ್ಷ ಹಾಲಪ್ಪ, ಶಿಕ್ಷಕರಾದ ಶಾಂತಕುಮಾರಿ, ಇಂದಿರಾ,
ಶ್ರೀನಿವಾಸ್ ಸಿಂಗ್, ಟೀಕಪ್ಪ, ಎಂಜಿನಿಯರ್ ಪವನ್, ಪ್ರಕಾಶ್ ಅವರ ಸಹೋದರ ಜಗನ್ನಾಥ್ ಸಮಾರಂಭದಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.