ADVERTISEMENT

ಆಪರೇಷನ್ ಕಾಂಗ್ರೆಸ್ ಆಗಲು ಸಾಧ್ಯವಿಲ್ಲ

ಈಶ್ವರಪ್ಪ ಅಭಿಮತ

​ಪ್ರಜಾವಾಣಿ ವಾರ್ತೆ
Published 20 ಮೇ 2019, 20:14 IST
Last Updated 20 ಮೇ 2019, 20:14 IST

ಶಿವಮೊಗ್ಗ:ಈ ಹಿಂದೆ ದೇಶದಲ್ಲಿ ಕೇವಲ ಬೆರಳೆಣಿಕೆಯಷ್ಟು ಸ್ಥಾನಗಳನ್ನು ಗೆಲ್ಲುತ್ತಿದ್ದ ಬಿಜೆಪಿ ಇದೀಗ ಬಲಿಷ್ಠವಾಗಿ ಬೆಳೆದು ಗೆಲುವನ್ನು ರೂಢಿ ಮಾಡಿಕೊಂಡಿದೆ. ದೇಶದಲ್ಲಿ ಬಿಜೆಪಿಗೆ ಪರ್ಯಾಯ ಪಕ್ಷವೇ ಇಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇಶದ ಎಲ್ಲ ಭಾಗಗಳಲ್ಲೂ ಎನ್‌ಡಿಎ ಗೆಲ್ಲಲಿದ್ದು, ಈ ಬಾರಿ ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗಲಿದ್ದಾರೆ ಎಂಬುದು ವಿವಿಧ ಸಮೀಕ್ಷೆಗಳಿಂದ ತಿಳಿದು ಬಂದಿದೆ. ದೇಶದ ರಕ್ಷಣೆಗಾಗಿ ಜನರು ಮೋದಿ ಕೈ ಹಿಡಿದಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಘಟನೆ ಮೂಲಕ ಈ ಬಾರಿ ಬಿಜೆಪಿ ನೇತೃತ್ವದ ಎನ್‌ಡಿಎ ದೇಶದ ಎಲ್ಲ ಭಾಗಗಳಲ್ಲಿ ತನ್ನ ಅಸ್ತಿತ್ವ ಸ್ಥಾಪಿಸುತ್ತಿರುವುದು ಖುಷಿಯ ವಿಚಾರ.ರಾಜ್ಯದ 28 ಸೀಟುಗಳ ಪೈಕಿ ಬಿಜೆಪಿ 22ಕ್ಕೂ ಹೆಚ್ಚು ಸ್ಥಾನ ಗೆಲ್ಲುವುದಾಗಿ ಸಮೀಕ್ಷೆ ಹೇಳುತ್ತಿವೆ. ಶಿವಮೊಗ್ಗದಲ್ಲೂ ಬಿ.ವೈ.ರಾಘವೇಂದ್ರ ಗೆಲ್ಲುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.

ADVERTISEMENT

ರಾಜಕೀಯ ಧ್ರುವೀಕರಣ: ಲೋಕಸಭೆ ಚುನಾವಣೆ ನಂತರ ರಾಜ್ಯದಲ್ಲಿ ರಾಜಕೀಯ ಧ್ರುವೀಕರಣ ಉಂಟಾಗಲಿದೆ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಈಶ್ವರಪ್ಪ ಅಭಿಪ್ರಾಯಪಟ್ಟರು.

ಮುಖ್ಯಮಂತ್ರಿ ಸೀಟಿಗೆ ಟವಲ್‌: ‘ಲೋಕಸಭೆ ಚುನಾವಣೆ ಬೆನ್ನಲ್ಲೇ ರಾಜ್ಯದ ಮುಖ್ಯಮಂತ್ರಿ ಕುರ್ಚಿಯ ಮೇಲೆ ಸಿದ್ದರಾಮಯ್ಯ, ಖರ್ಗೆ ಸೇರಿದಂತೆ ಕಾಂಗ್ರೆಸ್‌ನ ಅನೇಕರು ಟವಲ್ ಹಾಕಿದ್ದಾರೆ. ಆ ಕುರ್ಚಿ ಖಾಲಿ ಇದೆ ಎಂದು ತಾನೂ ಮುಖ್ಯಮಂತ್ರಿ ಆಗಬೇಕು ಎಂಬಂತೆ ಅನೇಕ ನಾಯಕರಲ್ಲಿ ಸ್ಪರ್ಧೆ ಏರ್ಪಟ್ಟಿದೆ.ಜೆಡಿಎಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರೇವಣ್ಣ ಹೆಸರು ಕೇಳಿಬಂದರೆ, ಹಿರಿಯ ಶಾಸಕ ಬಸವರಾಜ ಹೊರಟ್ಟಿ ಮೈತ್ರಿಯಲ್ಲಿ ಗೊಂದಲ ಇರುವುದರಿಂದ ಸರ್ಕಾರವನ್ನೇ ವಿಸರ್ಜಿಸಬೇಕು ಎನ್ನುವ ಮೂಲಕ ಸರ್ಕಾರ ಹೆಚ್ಚು ದಿನ ಇರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ’ ಎಂದರು.

ರಾಜ್ಯದಲ್ಲಿ ಆಪರೇಷನ್ ಕಾಂಗ್ರೆಸ್ ಆಗಲು ಸಾಧ್ಯವಿಲ್ಲ. ಬಿಜೆಪಿ ಶಾಸಕರು ಹುಲಿಗಳಿದ್ದಂತೆ. ಅವರನ್ನು ಮುಟ್ಟಲು ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.