ತೀರ್ಥಹಳ್ಳಿ: ‘ಹಲವು ದಶಕಗಳ ಅರಣ್ಯ ಹಕ್ಕು ಹೋರಾಟವನ್ನು ಕೇಂದ್ರ, ರಾಜ್ಯ ಸರ್ಕಾರಗಳು ಕಡೆಗಣಿಸಿವೆ. ಸರ್ಕಾರ ಅರಣ್ಯ, ಕಂದಾಯ ಭೂಮಿಯನ್ನು ಮರು ವರ್ಗೀಕರಣ ಮಾಡಬೇಕು’ ಎಂದು ತಾಲ್ಲೂಕು ರೈತ ಸಂಘದ ಸಭೆಯಲ್ಲಿ ಸೋಮವಾರ ರೈತರು ಒತ್ತಾಯಿಸಿದರು.
ಭೂಮಿ ವರ್ಗೀಕರಣಕ್ಕೆ ಸರ್ಕಾರ ನಿರ್ಲಕ್ಷ್ಯ ತೋರಬಾರದು. ಜಿಲ್ಲಾಧಿಕಾರಿ, ಅರಣ್ಯ ಸಂರಕ್ಷಣಾಧಿಕಾರಿ ಸೇರಿ ಎಲ್ಲ ಅಧಿಕಾರಿಗಳು ಸಂಬಳಕ್ಕೆ ಇರುವ ನೌಕರರು. ಆಡಳಿತಶಾಹಿ ದರ್ಪ ತೋರಿಸುವುದನ್ನು ಸಹಿಸಲು ಆಗುವುದಿಲ್ಲ. ರಾಜಕಾರಣಿಗಳು ಕಾನೂನು ಸಮಸ್ಯೆಗಳನ್ನು ಸುಪ್ರಿಂಕೋರ್ಟ್‌ಗೆ ಮನದಟ್ಟು ಮಾಡಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಆ. 19ರಂದು ಪ್ರತಿಭಟನೆ ಹಮ್ಮಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಿದರು.
‘ಮಲೆನಾಡು ಸ್ವಾಯತ್ತ ನಾಡು ಬೇಡಿಕೆ ಮುಂದಿಡುವ ಕಾಲ ದೂರವಿಲ್ಲ. ಇಲ್ಲಿನ ರೈತರು ಹಡ್ಡೆ, ಹಕ್ಲು, ಬ್ಯಾಣ ಉಳಿಸಿದ್ದಾರೆ. ಅವೈಜ್ಞಾನಿಕ ಅಭಿವೃದ್ಧಿ ಕಾಮಗಾರಿ ಮುಂದಿಟ್ಟು ಪ್ರಹಾರ ನಡೆಸುವುದನ್ನು ನಿಲ್ಲಿಸಬೇಕು. ರಾಜಕಾರಣಿಗಳು ಮತಗಿಟ್ಟಿಸಿಕೊಳ್ಳುವ ಕಣ್ಣೊರೆಸುವ ತಂತ್ರ ಮುಂದುವರಿಸಿದರೆ ಹುಷಾರ್’ ಎಂದು ಎಚ್ಚರಿಸಿದರು.
‘ಅರಣ್ಯ ಇಲಾಖೆ ಎಂಪಿಎಂ ಹೆಸರಿನಲ್ಲಿ ರೈತರು ರಕ್ಷಿಸಿದ ದೇವರಕಾಡು, ಹಡ್ಡೆಗಳನ್ನು ಒತ್ತುವರಿ ಮಾಡಿದೆ. ಸಹಜ ಅರಣ್ಯವನ್ನು ಸುಟ್ಟು ನಾಶ ಮಾಡಿ ಅಕೇಶಿಯಾ ನೆಡುತೋಪು ನಿರ್ಮಿಸಿದೆ. ನಿಜವಾದ ಕಳ್ಳರು, ಒತ್ತುವರಿದಾರರು ಯಾರೆಂಬುದು ನಮಗೆ ಗೊತ್ತಿದೆ. ಮೊದಲು ನೆಡುತೋಪು ನಿರ್ಮೂಲನೆ ಮಾಡಬೇಕು. ಮಾನವ ಹಸ್ತಕ್ಷೇಪವಿಲ್ಲದ ಕಾಡು ರಚನೆಯಾಗಬೇಕು’ ಎಂದು ಹೇಳಿದರು.
‘ಮೂಲ ನಿವಾಸಿಗಳಿಗೆ ಹಕ್ಕುಪತ್ರ, ಆಧಾರ್ ಕಾರ್ಡ್, ಪಡಿತರ ಕಾರ್ಡ್, ಮತದಾನದ ಹಕ್ಕು ಇವೆ. ನಮ್ಮ ಭೂಮಿಯ ಹಕ್ಕು ಹೋಗುವುದಾದರೆ ನಮ್ಮಿಂದ ಆಯ್ಕೆಯಾದ ಎಲ್ಲ ಜನಪ್ರತಿನಿಧಿಗಳನ್ನು ಒಳಗೊಂಡ ವಿಧಾನಸಭೆ, ಲೋಕಸಭೆ, ರಾಜ್ಯಸಭೆ, ವಿಧಾನ ಪರಿಷತ್ತನ್ನು ವಿಸರ್ಜಿಸಬೇಕು’ ಎಂದು ಆಗ್ರಹಿಸಿದರು.
‘ಅರಣ್ಯ ಸಚಿವ ಈಶ್ವರ ಖಂಡ್ರೆ ಜೀವನಾಧಾರ ಸಣ್ಣ, ಮಧ್ಯಮ ಒತ್ತುವರಿದಾರರ ಪರವಾಗಿದ್ದಾರೆ. ಶಿವಮೊಗ್ಗದಲ್ಲೇ ವಾಣಿಜ್ಯ ಉದ್ದೇಶದ ಒತ್ತುವರಿ ತೆರವಿಗೆ ಮಾತ್ರ ಸೂಚನೆ ನೀಡಿದ್ದಾರೆ. ಮೂಲತಃ ರೈತರಾದ ಅರಣ್ಯ ಅಧಿಕಾರಿಗಳು ಖಾಕಿ ಬಟ್ಟೆ ಧರಿಸಿ ರಾಕ್ಷಸರಾದರೆ ಸಹಿಸಲು ಆಗುವುದಿಲ್ಲ’ ಎಂದು ಹೋರಾಟಕ್ಕೆ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಬೆಂಬಲ ಸೂಚಿಸಿದರು.
ಸಭೆಯಲ್ಲಿ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೋಡ್ಲು ವೆಂಕಟೇಶ್, ಕಾರ್ಯದರ್ಶಿ ಹೊರಬೈಲು ರಾಮಕೃಷ್ಣ, ಮುಖಂಡರಾದ ಕಂಬಳಿಗೆರೆ ರಾಜೇಂದ್ರ, ನೆಂಪೆ ದೇವರಾಜ್, ಶಿವಾನಂದ ಕರ್ಕಿ, ಶ್ರೀಧರ್ ಕಲ್ಲಹಳ್ಳ, ಬಿ.ಗಣಪತಿ, ನಿಶ್ಚಲ್ ಜಾದೂಗಾರ್, ಪ್ರಶಾಂತ್ ಕುಕ್ಕೆ, ಕಡ್ತೂರು ದಿನೇಶ್, ಕೀಗಡಿ ಕೃಷ್ಣಮೂರ್ತಿ, ಹಾರೊಗೊಳಿಗೆ ವಿಶ್ವನಾಥ, ಕಡಿದಾಳು ತಾರಾನಾಥ್, ಟಿ.ಎಲ್. ಸುಂದರೇಶ್, ಮಂಗಳಾ ಗೋಪಿ, ಸುರೇಂದ್ರ ಯಡೂರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.