ADVERTISEMENT

ಹಾಲಿನ ದರ ಹೆಚ್ಚಳಕ್ಕೆ ವಿರೋಧ

ರೈತರ ಹೆಸರಿನಲ್ಲಿ ಗ್ರಾಹಕರಿಂದ ಹಣ ಸುಲಿಗೆ; ಸರ್ಕಾರದ ವಿರುದ್ಧ ಆರೋಪ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2024, 14:10 IST
Last Updated 16 ಸೆಪ್ಟೆಂಬರ್ 2024, 14:10 IST

ಶಿವಮೊಗ್ಗ: ಹಾಲು ಉತ್ಪಾದಿಸುವ ರೈತರಿಗೆ ಲಾಭ ಸಿಗುವಂತೆ ಮಾಡಲು ಹಾಲಿನ ದರ ₹ 5 ಹೆಚ್ಚಳ ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು ಗ್ರಾಹಕರಿಗೆ ಭಾರಿ ಹೊರೆಯಾಗಲಿದೆ. ಯಾವುದೇ ಕಾರಣಕ್ಕೂ ಸರ್ಕಾರ ಹಾಲಿನ ದರ ಏರಿಕೆ ಮಾಡಬಾರದು ಎಂದು ವಿಧಾನ ಪರಿಷತ್‌ ಸದಸ್ಯ ಡಿ.ಎಸ್‌. ಅರುಣ್‌ ಆಗ್ರಹಿಸಿದರು.

ಹಾಲಿನ ಪ್ರೋತ್ಸಾಹ ಧನ ₹ 865 ಕೋಟಿ ಹಣವನ್ನು ಸರ್ಕಾರ ಬಾಕಿ ಉಳಿದುಕೊಂಡಿದೆ. ಇದನ್ನು ನೀಡುತ್ತಿಲ್ಲ. ಆದರೆ ಇದೀಗ ರೈತರ ಹೆಸರಿನಲ್ಲಿ ಗ್ರಾಹಕರಿಗೆ ಸುಲಿಗೆ ಮಾಡಲು ಸರ್ಕಾರ ಮುಂದಾಗಿದೆ. ಮೊದಲು ಬಾಕಿ ಉಳಿಸಿಕೊಂಡಿರುವ ಹಣ ನೀಡಲಿ ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.

ಜಾನುವಾರುಗಳಿಗೆ ಮೇವು ಸಿಗುತ್ತಿಲ್ಲ. ಹಿಂಡಿ, ಬೂಸಾ ದರ ಏರಿಕೆಯಾಗಿದೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಲೆ ಏರಿಕೆ ಗ್ಯಾರಂಟಿಯಾಗಿದೆ. ಹಾಲು ಉತ್ಪಾದಕರಿಗೆ ನೀಡಬೇಕಿರುವ ಬಾಕಿ ಹಣ ನೀಡುವ ಬದಲಾಗಿ ಸತಾಯಿಸಲಾಗುತ್ತಿದೆ. ಚುನಾವಣೆಯಲ್ಲಿ ಭರವಸೆ ನೀಡಿದ್ದ ಪ್ರಣಾಳಿಕೆಯನ್ನೇ ಕಾಂಗ್ರೆಸ್‌ ಮರೆತಿದೆ ಎಂದು ಹೇಳಿದರು.

ADVERTISEMENT

ಕಳೆದ ಜೂನ್‌ ತಿಂಗಳಲ್ಲಿ ಲೀಟರ್‌  ಹಾಲಿಗೆ ₹ 5 ಜಾಸ್ತಿ ಮಾಡಲಾಗಿದೆ. ಹೀಗೆ ಹೆಚ್ಚಿಸಿರುವ ದರಕ್ಕೆ 50 ಮಿಲಿ ಹಾಲು ಹೆಚ್ಚುವರಿಯಾಗಿ ನೀಡುವುದಾಗಿ ಸರ್ಕಾರ ತಿಳಿಸಿತ್ತು. ಆದರೆ ಇದೀಗ ಹೆಚ್ಚುವರಿ ಹಾಲು ನೀಡುವುದು ಬಹುತೇಕ ನಿಲ್ಲಿಸಲಾಗಿದೆ. ಅದನ್ನು ಪರೀಕ್ಷೆ ಮಾಡಲು ಗ್ರಾಹಕರಿಗೆ ಕಷ್ಟವಾಗುತ್ತಿದೆ ಎಂದು ಹೇಳಿದರು. 

ಕೃಷಿಗೆ ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರ ರೈತ ಉತ್ಪಾದಕ ಸಂಘಗಳನ್ನು ಆರಂಭಿಸಲು ಯೋಜನೆ ರೂಪಿಸಿದೆ.  ರಾಜ್ಯದಲ್ಲಿ 750 ಸಂಘಗಳನ್ನು ತೆರೆಯಲು ಅವಕಾಶವಿದೆ. ಸರ್ಕಾರ ಆದರೆ ಇದುವರೆಗೂ 480 ಎಪಿಓಗಳನ್ನು ಆರಂಭಿಸಿದೆ. ಇವುಗಳಿಗೆ ಸರ್ಕಾರ ಧನ ಸಹಾಯ ₹ 54 ಕೋಟಿ ಹಣ ನೀಡಬೇಕಿದೆ. ಆದರೆ ಕೇವಲ ₹1.16 ಕೋಟಿ ಹಣ ಧನ ಸಹಾಯ ನೀಡಲಾಗಿದೆ ಎಂದರು. 

ಶಾಸಕ ಎಸ್.ಎನ್. ಚನ್ನಬಸಪ್ಪ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಸಿದ್ಧಲಿಂಗಪ್ಪ, ಉಪಾಧ್ಯಕ್ಷ ಗಣೇಶ್ ಬಿಳಕಿ, ಕುಮಾರ್ ನಾಯ್ಡು, ಕುಮಾರ್, ಕೆ.ವಿ. ಅಣ್ಣಪ್ಪ, ಚಂದ್ರಶೇಖರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.