ADVERTISEMENT

ಲಿಫ್ಟ್ ಕಾಮಗಾರಿಗೆ ವಿರೋಧ

ಸೊರಬ ಪಟ್ಟಣದಲ್ಲಿ ನಿರುಪಯುಕ್ತಗೊಂಡಿವೆ ವಾಣಿಜ್ಯ ಮಳಿಗೆಗಳು

ರಾಘವೇಂದ್ರ ಟಿ.
Published 6 ಡಿಸೆಂಬರ್ 2022, 6:05 IST
Last Updated 6 ಡಿಸೆಂಬರ್ 2022, 6:05 IST
ಸೊರಬ ಪಟ್ಟಣದಲ್ಲಿರುವ ಪುರಸಭೆ ವಾಣಿಜ್ಯ ಸಂಕೀರ್ಣ.
ಸೊರಬ ಪಟ್ಟಣದಲ್ಲಿರುವ ಪುರಸಭೆ ವಾಣಿಜ್ಯ ಸಂಕೀರ್ಣ.   

ಸೊರಬ: ಪಟ್ಟಣದ ಹೃದಯ ಭಾಗದಲ್ಲಿ ಸರ್ಕಾರವು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳನ್ನು ಸಾರ್ವಜನಿಕರ ಉಪಯೋಗಕ್ಕೆ ನೀಡದೆ ನಿರುಪಯುಕ್ತಗೊಂಡಿವೆ. ಇದರ ನಡುವೆ ಕಟ್ಟಡಕ್ಕೆ ₹ 50 ಲಕ್ಷ ವೆಚ್ಚದಲ್ಲಿ ಲಿಫ್ಟ್ ಅಳವಡಿಸುತ್ತಿರುವ ಕಾಮಗಾರಿಎರಡು ವರ್ಷ ಕಳೆದರೂ ಪೂರ್ಣಗೊಳ್ಳದ್ದರಿಂದ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ವಾಣಿಜ್ಯ ಮಳಿಗೆ ಜಾಗದಲ್ಲಿ ಈ ಹಿಂದೆ ಬಸ್ ನಿಲ್ದಾಣವಿತ್ತು. ಹೊಟ್ಟೆಪಾಡಿಗಾಗಿ ಸಣ್ಣಪುಟ್ಟ ಗೂಡಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ಬೀದಿಬದಿಯ ವ್ಯಾಪಾರಿಗಳನ್ನು ತೆರವುಗೊಳಿಸಿ, 2009ರಲ್ಲಿ ಪುರಸಭೆ ಆಡಳಿತವು ಅಪಾರ ವೆಚ್ಚದಲ್ಲಿ ಹೈಟೆಕ್ ವಾಣಿಜ್ಯ ಮಳಿಗೆ ನಿರ್ಮಿಸಿತ್ತು. ಆದರೆ, ಮಳಿಗೆಗಳು ವ್ಯಾಪಾರಸ್ಥರಿಗೂ, ಜನರಿಗೂ ಅನುಕೂಲ ಕಲ್ಪಿಸುವ ಬದಲು ನಿರುಪಯುಕ್ತಗೊಂಡಿವೆ.

ವಾಣಿಜ್ಯ ಕಟ್ಟಡದ ನೆಲ ಅಂತಸ್ತಿನಲ್ಲಿರುವ ಮಳಿಗೆಗಳಿಗೆ ₹ 8,000 ಬಾಡಿಗೆ ನಿಗದಿಪಡಿಸಿದ್ದು, ಅದೇ ದರವನ್ನು ಮೊದಲನೇ ಅಂತಸ್ತಿನ ಮಳಿಗೆಗಳಿಗೂ ನಿಗದಿಪಡಿಸಲಾಗಿದೆ. ಬಾಡಿಗೆ ದುಬಾರಿ ಎನ್ನುವ ಕಾರಣಕ್ಕೆ ಯಾರೂ ಮಳಿಗೆ ಬಾಡಿಗೆಗೆ ಪಡೆದು ವ್ಯಾಪಾರ ಮಾಡಲು ಮುಂದಾಗುತ್ತಿಲ್ಲ. ಪರಿಣಾಮವಾಗಿ ಮೊದಲ ಅಂತಸ್ತಿನಲ್ಲಿರುವ ಮಳಿಗೆಗಳು ನಿರ್ವಹಣೆ, ಸ್ವಚ್ಛತೆ ಇಲ್ಲದೆ ಪಾಳು ಬಿದ್ದಿವೆ. ನಿರುಪಯುಕ್ತ ಆಗಿರುವ ವಾಣಿಜ್ಯ ಕಟ್ಟಡದ ಸದ್ಬಳಕೆಯ ಆಲೋಚನೆ ಮಾಡದೇ, ಮೊದಲ ಅಂತಸ್ತಿಗೆ ಸಂಪರ್ಕ ಕಲ್ಪಿಸಲು ಲಿಫ್ಟ್ ಅಳವಡಿಸಲಾಗುತ್ತಿದೆ. ಆ ಕಾಮಗಾರಿ ಪೂರ್ಣಗೊಂಡಲ್ಲಿ ಸಾರ್ವಜನಿಕರು ಮಳಿಗೆ ಖರೀದಿಸಬಹುದು. ಆದರೆ, ಅದನ್ನೂ ನಿರ್ಲಕ್ಷಿಸಲಾಗಿದೆ.

ADVERTISEMENT

ಮಳಿಗೆಗಳು ನಿರುಪಯುಕ್ತ ಆಗಿರುವಾಗ ಲಿಫ್ಟ್ ಅಳವಡಿಸುವ ಅಗತ್ಯ ಇರಲಿಲ್ಲ. ಇದರಿಂದ ಸಾರ್ವಜನಿಕರ ಹಣ ದುರುಪಯೋಗ ಆಗಲಿದೆ ಎಂದು ಸ್ಥಳೀಯರು ದೂರಿದ್ದಾರೆ.

ವಾಣಿಜ್ಯ ಮಳಿಗೆಗಳಿಗೆ ನಗರ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಬಾಡಿಗೆ ದರವನ್ನು ನಿಗದಿಪಡಿಸಲಾಗಿದೆ. ಪಟ್ಟಣ ಪ್ರದೇಶದಲ್ಲಿ ಅಷ್ಟೊಂದು ವ್ಯಾಪಾರ– ವಹಿವಾಟು ಇಲ್ಲದಿರುವುದರಿಂದ ನಿರ್ವಹಣೆ ಕಷ್ಟ. ಜಿಲ್ಲಾಧಿಕಾರಿಯು ಕನಿಷ್ಠ ಬಾಡಿಗೆ ದರ ನಿಗದಿ ಮಾಡಿದರೆ ಮಧ್ಯಮ ವರ್ಗದ ವ್ಯಾಪಾರಸ್ಥರು ಮಳಿಗೆಗಳನ್ನು ಹರಾಜು ಪಡೆದು ವ್ಯಾಪಾರ ನಡೆಸಲು ಸಾಧ್ಯವಾಗಲಿದೆ. ಇದರಿಂದ ಪುರಸಭೆಗೂ ಆದಾಯ ದೊರೆಯಲಿದೆ ಎಂದು ಸಲಹೆ ನೀಡಿದ್ದಾರೆ.

ಕೋಟ್‌...

ಈ ಹಿಂದೆ ಏಕಾಏಕಿ ನಮ್ಮನ್ನು ತೆರವುಗೊಳಿಸಿದ್ದರಿಂದ ಬದುಕು ಬೀದಿಗೆ ಬಿದ್ದಿದೆ. ಬಸ್ ನಿಲ್ದಾಣದ ಮುಂಭಾಗದಲ್ಲಿರುವ ವಾಣಿಜ್ಯ ಮಳಿಗೆಯಲ್ಲಿ ಕನಿಷ್ಠ ಬಾಡಿಗೆ ಪಡೆದು ವ್ಯಾಪಾರ ಮಾಡಲು ಅವಕಾಶ ಕಲ್ಪಿಸಿಕೊಡಲಿ.

ಖಾಲಿದ್ ಎ.ಕೆ., ಹಣ್ಣಿನ ವ್ಯಾಪಾರಿ

ಜನಸಾಮಾನ್ಯರ ಹಿತ ಕಾಯುವಲ್ಲಿ ಕ್ಷೇತ್ರದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ವಿಫಲವಾಗಿದ್ದಾರೆ. ಕನಿಷ್ಠ ಬಾಡಿಗೆ ನಿಗದಿಪಡಿಸಿದರೆ ವ್ಯಾಪಾರಿಗಳಿಗೂ ಸಹಾಯವಾಗಲಿದೆ. ಪುರಸಭೆಗೂ ಆದಾಯ ಬರಲಿದೆ.

ಕೆ. ಮಂಜುನಾಥ್, ಜನಪರ ಹೋರಾಟಗಾರ

ವಾಣಿಜ್ಯ ಮಳಿಗೆಗಳ ಬಾಡಿಗೆ ದರವನ್ನು ಮೇಲಧಿಕಾರಿಗಳು ನಿಗದಿಪಡಿಸಬೇಕು. ನಂತರದಲ್ಲಿ ಹರಾಜು ಮೂಲಕ ಸ್ಥಳೀಯ ವ್ಯಾಪಾರಸ್ಥರಿಗೆ ಹಂಚಿಕೆ ಮಾಡಿಕೊಡಲಾಗುವುದು.

ಗಿರೀಶ್, ಪುರಸಭೆ ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.