ADVERTISEMENT

ಶಿವಮೊಗ್ಗ | ಸಿದ್ಧಾಂತದ ಸಂಘರ್ಷವಿದ್ದರೂ ಲಂಕೇಶ್ ಮೇರು ವ್ಯಕ್ತಿ

ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 5:57 IST
Last Updated 26 ಜೂನ್ 2022, 5:57 IST
ಶಿವಮೊಗ್ಗದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಬಿ.ಚಂದ್ರೇಗೌಡ ಅವರ ‘ಲಂಕೇಶ್ ಜೊತೆ’ ಪುಸ್ತಕವನ್ನು ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಬಿಡುಗಡೆ ಮಾಡಿದರು
ಶಿವಮೊಗ್ಗದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಬಿ.ಚಂದ್ರೇಗೌಡ ಅವರ ‘ಲಂಕೇಶ್ ಜೊತೆ’ ಪುಸ್ತಕವನ್ನು ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಬಿಡುಗಡೆ ಮಾಡಿದರು   

ಶಿವಮೊಗ್ಗ: ‘ಸಿದ್ಧಾಂತಗಳ ಸಂಘರ್ಷವಿದ್ದರೂ, ವೈಯಕ್ತಿಕವಾಗಿ, ಬರಹಗಳ ಮೂಲಕ ಲಂಕೇಶ್ ಅವರು ನಮ್ಮಂತಹ ಯುವಕರ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದರು’ ಎಂದು ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ ಹೇಳಿದರು.

ನಗರದಲ್ಲಿ ಶನಿವಾರ ಪತ್ರಕರ್ತ ಬಿ.ಚಂದ್ರೇಗೌಡ ಅವರು ರಚಿಸಿರುವ ‘ಲಂಕೇಶ್ ಜೊತೆ‘ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

‘ಬದುಕಿನ ಪ್ರತಿ ಘಟನೆಗಳನ್ನೂ ವಿಭಿನ್ನವಾಗಿ ನೋಡುವ, ವಿಶ್ಲೇಷಿಸುವ, ಟೀಕಿಸುವ ಗುಣ ಲಂಕೇಶ್ ಅವರಲ್ಲಿ ಕರಗತವಾಗಿತ್ತು ಎಂದು ಸ್ಮರಿಸಿದರು. ಪ್ರಸ್ತುತ ಕಾಲಘಟ್ಟದಲ್ಲಿ ಒಂದು‌ ಸಣ್ಣ ಟೀಕೆ ಸಹ ಪರಸ್ಪರ ಮುಖ ತಿರುಗಿಸುವ, ದ್ವೇಷ ಹರಡುವ ಕೆಲಸ ಮಾಡುತ್ತಿದೆ. ಲಂಕೇಶ್ ಅಂತಹ ಹತ್ತು ಹಲವು ಟೀಕೆ ಮಾಡಿದಾಗಲೂ ಸಮಾಜ ಸ್ಥಿತಪ್ರಜ್ಞೆಯಿಂದ ಸ್ವೀಕರಿಸುತ್ತಿತ್ತು’ ಎಂದು ಗತ ಘಟನೆಗಳನ್ನು ಮೆಲುಕು ಹಾಕಿದರು.

ADVERTISEMENT

‘ಹಲವು ಕ್ಷೇತ್ರಗಳಲ್ಲಿನ ಪ್ರಯೋಗಗಳ ನಂತರ ಪತ್ರಿಕೋದ್ಯವನ್ನು ಲಂಕೇಶ್ ತಮ್ಮ ಕಾರ್ಯಕ್ಷೇತ್ರ ಮಾಡಿಕೊಂಡು ಯಶಸ್ಸು ಕಂಡರು. ಅವರ ಮೊದಲ ಕೃತಿ ಉಮಾಪತಿಯ ಸ್ಕಾಲರ್ ಶಿಪ್ ಯಾತ್ರೆ ಅವರ ಇಡೀ ಬದುಕಿನ ಹೆಜ್ಜೆಯ ದಿಕ್ಸೂಚಿಯಾಗಿತ್ತು’ ಎಂದು ಪುಸ್ತಕದ ಬಗ್ಗೆ ಮಾತನಾಡಿದ ಪ್ರಾಧ್ಯಾಪಕ ಡಾ.ದಾದಾಪೀರ್ ನವಿಲೇಹಾಳ್ ಹೇಳಿದರು.

‘ತುರ್ತು ಪರಿಸ್ಥಿತಿಯ ಲಾಭ ಪಡೆದ ಪುರೋಹಿತ ಶಾಹಿಗಳು ಅದನ್ನು ರಾಜಕೀಯ ಅಧಿಕಾರದ‌ ದಾರಿಯಾಗಿಸಿಕೊಂಡರು. ಅದರ ಫಲವಾಗಿಯೇ ಇಂದು ಅಘೋಷಿತ ತುರ್ತು ಪರಿಸ್ಥಿತಿ ಎದುರಿಸುತ್ತಿದ್ದೇವೆ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಸ್ವಜನಪಕ್ಷಪಾತದಿಂದ ದೂರವಿದ್ದ ಲಂಕೇಶ್‌ ಮೂಲಭೂತವಾದವನ್ನು ಸದಾ ವಿರೋಧಿಸುತ್ತಿದ್ದರು. ಮುಸ್ಲಿಮರ ತಳಮಳಗಳಿಗೆ ಪರಿಹಾರ ಒದಗಿಸುತ್ತಿದ್ದರು ಎಂದು ಹೇಳಿದರು.

ಮಿಲಿಂದ್ ಎಜುಕೇಶನ್ ಟ್ರಸ್ಟ್, ಹೊಂಗಿರಣ ಸಂಸ್ಥೆ ಹಾಗೂ ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಸಹಯೋಗದಲ್ಲಿ ಸಮಾರಂಭ ಆಯೋಜಿಸಲಾಗಿತ್ತು.

ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಕೃತಿಯ ಲೇಖಕ ಬಿ. ಚಂದ್ರೆಗೌಡ, ವಕೀಲರಾದ ಎಲ್.ಎಚ್. ಅರುಣ್ ಕುಮಾರ್, ಹೊಂಗಿರಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸಾಸ್ವೆಹಳ್ಳಿ ಸತೀಶ್ ಹಾಜರಿದ್ದರು. ಚಂದ್ರಹಾಸ ಹಿರೇಮಳಲಿ ಸ್ವಾಗತಿಸಿದರು. ಉಪನ್ಯಾಸಕ ಬಿ. ಎಲ್. ರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.