ADVERTISEMENT

ಶಿವಮೊಗ್ಗ | ಪಂಚತಂತ್ರ-2 ಕಾರ್ಯ ‘ಭಾರ’; ಪಂಚಾಯಿತಿ ತತ್ತರ

ಸಾಫ್ಟ್‌ವೇರ್ ಸಮಸ್ಯೆಗೆ ಗ್ರಾಮೀಣರು ಹೈರಾಣ, ಇ–ಸ್ವತ್ತು ವಿತರಣೆಯೂ ವಿಳಂಬ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2024, 5:27 IST
Last Updated 6 ಅಕ್ಟೋಬರ್ 2024, 5:27 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ತುಮರಿ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹ ಮತ್ತು ನಾಗರಿಕ ಸೇವೆಗಳಿಗೆ ವೇಗ ನೀಡಲು ರಾಜ್ಯ ಸರ್ಕಾರ ಅಭಿವೃದ್ಧಿಪಡಿಸಿದ್ದ ಪಂಚತಂತ್ರ 2.0 ತಂತ್ರಾಂಶ ಜನಸ್ನೇಹಿಯಾಗುವ ಬದಲು ನಿತ್ಯದ ಕಾರ್ಯಭಾರಕ್ಕೆ ಕಂಟಕವಾಗಿದೆ. ಇನ್ನೊಂದೆಡೆ ಇ– ಸ್ವತ್ತು ಕಡ್ಡಾಯ ನಿಯಮಾವಳಿ ಇಡೀ ಗ್ರಾಮ ಪಂಚಾಯಿತಿ ಆಡಳಿತವನ್ನೇ ಕಟ್ಟಿ ಹಾಕಿದೆ.

‘ಇ-ಸ್ವತ್ತು’ ಹೊಸ ಸಾಫ್ಟ್‌ವೇರ್‌ ಅಪ್‌ಡೇಟ್‌ ಮಾಡಿದರೂ ಹಳೆಯ ಸಮಸ್ಯೆ ಮುಂದುವರಿದಿದೆ. ಇದರಿಂದ 9/11 ಅರ್ಜಿ ಸಲ್ಲಿಕೆ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಸಾಧ್ಯವಾಗುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಅಂತರ್ಜಾಲ ಸಮಸ್ಯೆಯೂ ಇ-ಸ್ವತ್ತು ಬಳಕೆಗೆ ಮತ್ತಷ್ಟು ತೊಡಕಾಗಿದೆ.

ADVERTISEMENT

ಪಂಚತಂತ್ರ-1 ತಂತ್ರಾಂಶ–2ಕ್ಕೆ ಉನ್ನತೀಕರಣಗೊಂಡ ನಂತರ ನಾಗರಿಕ ಸೇವೆ, ತೆರಿಗೆ ಸಂಗ್ರಹ, ದಾಖಲೆ ವಿತರಣೆಗೆ ಕಡ್ಡಾಯವಾಗಿ ಅದನ್ನೇ ಬಳಸಲಾಗುತ್ತಿದೆ. ಆದರೆ ತಂತ್ರಾಂಶ ಅಪೇಕ್ಷಿಸುವ ಅಗತ್ಯ ದಾಖಲೆಗಳನ್ನು ಹೊಂದಿಸಲು ಸಾರ್ವಜನಿಕರಿಗೆ ಆಗುತ್ತಿಲ್ಲ. ಗ್ರಾಮ ಪಂಚಾಯಿತಿ ಆಡಳಿತದಿಂದಲೂ ಸಾರ್ವಜನಿಕರಿಗೆ ಸೂಕ್ತ ದಾಖಲೆ ಸಿಗುತ್ತಿಲ್ಲ. ಇದರ ಜೊತೆಗೆ, ಸರ್ವರ್‌ ಸಂಪರ್ಕದ ವ್ಯತ್ಯಯ, ಆನ್‌ಲೈನ್‌ ನೆಟ್‌ವರ್ಕಿಂಗ್‌ ಸಮಸ್ಯೆಯಿಂದಾಗಿ ಪಂಚತಂತ್ರ-2 ತಂತ್ರಾಂಶಕ್ಕೆ ವರ್ಷ ಕಳೆದರೂ ಗ್ರಾಮ ಪಂಚಾಯಿತಿ ಆಡಳಿತ ಒಗ್ಗಿಕೊಂಡಿಲ್ಲ.

ಹತ್ತಾರು ಬಾರಿ ಅಲೆದಾಟ:

‘ವಿವಿಧ ಕೆಲಸಕ್ಕೆ ಹತ್ತಾರು ಬಾರಿ ಅಲೆದರೂ ಸಮಯಕ್ಕೆ ದಾಖಲೆಗಳು ಸಾರ್ವಜನಿಕರ ಕೈಗೆ ಸಿಗುತ್ತಿಲ್ಲ. ವಾಣಿಜ್ಯ, ವ್ಯಾಪಾರ, ವಸತಿಯೇತರ ವ್ಯವಹಾರದ ಲೈಸೆನ್ಸ್‌, ನಿರಾಕ್ಷೇಪ ಪತ್ರದ ದಾಖಲೆಗಳನ್ನು ಇ-ಸ್ವತ್ತು ದಾಖಲೆ ಇಲ್ಲದೆ ಪಡೆಯುವುದು ಸಾಧ್ಯವೇ ಇಲ್ಲದ ಪರಿಸ್ಥಿತಿ ಸಾರ್ವಜನಿಕರಿಗೆ ಎದುರಾಗಿದೆ. ಕರೂರು ಹೋಬಳಿಯ 4 ಗ್ರಾಮ ಪಂಚಾಯಿತಿಗಳಲ್ಲಿ ಇ–ಸ್ವತ್ತು ಅರ್ಜಿಗಳು ವರ್ಷದಿಂದ ಕೊಳೆಯುತ್ತಿವೆ’ ಎಂದು ಬರುವೆ ಗ್ರಾಮದ ಜಯಂತ್ ಹೇಳುತ್ತಾರೆ.

ಪಂಚಾಯಿತಿಗಳಿಗೆ ಆದಾಯ ಕೊರತೆ:

ಪ್ರತಿಯೊಂದು ಸೇವೆಗೆ ಇ–ಸ್ವತ್ತು ದಾಖಲೆ ಕಡ್ಡಾಯ ನಿಯಮಾವಳಿಯು ಪಂಚಾಯಿತಿ ವರ್ಗದ ನಿದ್ದೆಗೆಡಿಸಿದೆ. ‘ಗ್ರಾಮ ಪಂಚಾಯಿತಿ ತೆರಿಗೆ ವ್ಯಾಪ್ತಿಯ ಬಹಳಷ್ಟು ಆಸ್ತಿಗಳಿಗೆ ಇ-ಸ್ವತ್ತು ದಾಖಲೆ ಇಲ್ಲದ ಕಾರಣ ಸೂಕ್ತ ದಾಖಲೆ ನೀಡಲು ಗ್ರಾಮ ಪಂಚಾಯಿತಿ ಆಡಳಿತಕ್ಕೆ ಸಾಧ್ಯವಾಗುತ್ತಿಲ್ಲ. ಇ–ಸ್ವತ್ತು ದಾಖಲೆ ಕಡ್ಡಾಯ ಕ್ರಮದಿಂದಾಗಿ ಲೈಸೆನ್ಸ್‌, ಇತರೆ ವಾಣಿಜ್ಯ ವಹಿವಾಟು ಬಾಬ್ತು ಲಭ್ಯವಾಗುತ್ತಿದ್ದ ತೆರಿಗೆ, ಲೈಸೆನ್ಸ್‌ ಶುಲ್ಕ ಸಂಗ್ರಹವಾಗುತ್ತಿಲ್ಲ. ಈ ಕಾರಣ ಗ್ರಾಮ ಪಂಚಾಯಿತಿ ಆಡಳಿತಕ್ಕೆ ಆದಾಯದ ಕೊರತೆಯೂ ಉಂಟಾಗಿದೆ. ಬಹಳಷ್ಟು ವಾಣಿಜ್ಯ ವಹಿವಾಟುಗಳು ಗ್ರಾಮ ಪಂಚಾಯಿತಿ ವ್ಯಾಪ್ತಿ ಲೈಸೆನ್ಸ್‌, ತೆರಿಗೆ ಪಾವತಿ ಇಲ್ಲದೆ ನಡೆಯುವಂತಹ ಅನಿವಾರ್ಯತೆ ಎದುರಾಗಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಯಾವ ದಾಖಲೆಗಳು:

ಪಂಚತಂತ್ರ -2ರ ಮೂಲಕ ಕಟ್ಟಡ ಲೈಸೆನ್ಸ್‌, ಸ್ವಾಧೀನಪತ್ರ, ನಲ್ಲಿ ನೀರಿನ ಸಂಪರ್ಕ, ನಲ್ಲಿ ನೀರು ಸಂಪರ್ಕ ಕಡಿತ, ಕುಡಿಯುವ ನೀರು, ಬೀದಿ ದೀಪ, ಗ್ರಾಮ ನೈರ್ಮಲ್ಯದ ನಿರ್ವಹಣೆ, ನಮೂನೆ 9/11(ಎ), ನಮೂನೆ 11(ಬಿ), ವಾಣಿಜ್ಯ, ವ್ಯಾಪಾರ, ವಸತಿಯೇತರ ವ್ಯವಹಾರದ ಲೈಸೆನ್ಸ್‌, ಕೈಗಾರಿಕೆ, ಕೃಷಿ ಆಧರಿತ ಉತ್ಪಾದನಾ ಘಟಕ ಸ್ಥಾಪನೆಗೆ ಅನುಮತಿ, ನಿರಾಕ್ಷೇಪಣಾ ಪತ್ರ, ರಸ್ತೆ ಅಗೆತ ಅನುಮತಿ, ನರೇಗಾ ಯೋಜನೆಯಡಿ ಉದ್ಯೋಗ ಪತ್ರ ಸೇರಿದಂತೆ ಅನೇಕ ಸೇವೆ ನೀಡಲಾಗುತ್ತಿದೆ.

‘ಪಂಚತಂತ್ರ ತಂತ್ರಾಂಶ ಸಾರ್ವಜನಿಕ ಸ್ನೇಹಿಯಾಗಿಲ್ಲ. ಕೆಲ ಅಧಿಕಾರಿಗಳ ಮಟ್ಟದಲಿಯೇ ಇದೆ. ತಂತ್ರಾಂಶ ಅಪೇಕ್ಷಿಸುವ ಕಠಿಣ ನಿಯಮವು ಪಂಚಾಯಿತಿ ಆಡಳಿತದ ಕಾರ್ಯವೇಗಕ್ಕೆ ತೊಡಕಾಗಿದೆ’ ಎಂಬುದು ಮಹಿಳಾ ಸಂಘಟನೆಗಳ ದೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.