ADVERTISEMENT

ಓದುಗರ ನಂಬಿಕೆ ಉಳಿಸಿಕೊಳ್ಳುವುದೇ ದೊಡ್ಡ ಸವಾಲು: ರವೀಂದ್ರ ಭಟ್

‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಅಭಿಮತ

​ಪ್ರಜಾವಾಣಿ ವಾರ್ತೆ
Published 30 ಜುಲೈ 2019, 11:03 IST
Last Updated 30 ಜುಲೈ 2019, 11:03 IST
ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ನಿಂದ ಮಂಗಳವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಜಾವಾಣಿ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಮಾತನಾಡಿದರು.
ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ನಿಂದ ಮಂಗಳವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಜಾವಾಣಿ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಮಾತನಾಡಿದರು.   

ಶಿವಮೊಗ್ಗ: ಪತ್ರಕರ್ತನಿಗೆ ಎಲ್ಲವೂ ಗೊತ್ತಿರಬೇಕು ಎಂದೇನಿಲ್ಲ. ನಿರ್ದಿಷ್ಟ ವಿಷಯಯಾರಿಗೆ ಗೊತ್ತಿದೆ ಎಂಬುದರ ಅರಿವು, ಪತ್ರಿಕೋದ್ಯಮದ ಬಗ್ಗೆ ಒಂದಿಷ್ಟು ಮಾಹಿತಿ, ಸಾಮಾಜಿಕ, ರಾಜಕೀಯ ಇತಿಹಾಸ, ಆಯಾ ವಿಷಯಗಳ ತಜ್ಞರ ಪರಿಚಯವಾದರೂ ಇರಬೇಕು ಎಂದು ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರಭಟ್‌ಪ್ರತಿಪಾದಿಸಿದರು.

ಶಿವಮೊಗ್ಗ ಪ್ರೆಸ್‌ಟ್ರಸ್ಟ್‌ ಮಂಗಳವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಪತ್ರಿಕೋದ್ಯಮದ ರೀತಿ–ನೀತಿಗಳು ಬದಲಾಗಿವೆ. ಪತ್ರಕರ್ತರು ಕಾರ್ಯಕ್ಷೇತ್ರಕ್ಕಿಳಿದು ವರದಿ ಮಾಡುವ ದಿನಗಳು ದೂರವಾಗಿ ಅಂಗೈಲಿರುವ ಮೊಬೈಲ್ ಪತ್ರಿಕೋದ್ಯಮಕ್ಕೆ ಸೀಮಿತವಾಗುತ್ತಿದ್ದಾರೆ. ಇದುಆತಂಕಕಾರಿ ಸಂಗತಿ. ಪತ್ರಿಕೋದ್ಯಮದ ಆರಂಭದ ದಿನಗಳಲ್ಲಿ ಪ್ರಚಲಿತ ಘಟನೆಗಳ ಕುರಿತು ಬರೆಯುತ್ತಿದ್ದೆವು. ಈಗ ಪ್ರಚಲಿತದ ಜತೆಗೆ ಏನು ಆಗಬಹುದು ಎಂದು ಬರೆಯುತ್ತಿದ್ದೇವೆ. ಇಂದುಓದುಗರು, ಜನಸಾಮಾನ್ಯರ ನಂಬಿಕೆ ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಸಂದಿಗ್ಧ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಹಾಗಾಗಿ ಪತ್ರಕರ್ತರು ನಂಬಿಕೆ ಉಳಿಸಿಕೊಳ್ಳಲು ಪ್ರಯತ್ನಿಸಬೇಕಿದೆ ಎಂದರು.

ADVERTISEMENT

ಪ್ರಸ್ತುತ ದಿನಗಳಲ್ಲಿ ಸುಳ್ಳುಗಳ ವಿಜೃಂಭಣೆಯ ಮಧ್ಯೆಸತ್ಯ ಹೇಳುವುದು ತುಂಬಾ ಕಷ್ಟವಾಗುತ್ತಿದೆ. ರಾಜಕಾರಣ ಬಿಟ್ಟರೆ ಹೆಚ್ಚು ಟೀಕೆಗೆ ಒಳಗಾಗುತ್ತಿರುವುದು ಮಾಧ್ಯಮ ಕ್ಷೇತ್ರ. ಅದರಲ್ಲೂ ಎಲೆಕ್ಟ್ರಾನಿಕ್ ಮಾಧ್ಯಮವಂತೂ ತುಂಬಾ ಟೀಕೆಗೆ ಒಳಗಾಗುತ್ತಿದೆ. ಬಹಳಷ್ಟು ಸಂದರ್ಭಗಳಲ್ಲಿ ನಮ್ಮದಲ್ಲದ ಕಾರಣಕ್ಕೆ ನಾವು ಟೀಕೆಗೆ ಒಳಗಾಗಿದ್ದೇವೆ ಎಂದು ವಿಷಾದಿಸಿದರು.

ಪತ್ರಿಕೋದ್ಯಮ ಅಭಿರುಚಿ ಮತ್ತು ರುಚಿಯ ನಡುವೆ ಸದಾ ಮುಖಾಮುಖಿಯಾಗಿರುತ್ತದೆ. ರುಚಿ ಸುದ್ದಿಗಳೇ ಬೇರೆ. ಅಭಿರುಚಿ ಸುದ್ದಿಯೇ ಬೇರೆ. ಎರಡರ ನಡುವಿನ ವ್ಯತ್ಯಾಸ ಪತ್ರಕರ್ತರು ಗಮನಿಸಬೇಕು.ಯಾವ ರೀತಿಯ ಸುದ್ದಿಗಳನ್ನು ನೀಡಿದರೆ ಓದುಗರು ಸ್ವೀಕರಿಸುತ್ತಾರೆ. ಯಾವ ಸುದ್ದಿಗೆ ಎಷ್ಟು ಪ್ರಾಮುಖ್ಯತೆ ನೀಡಬೇಕು. ಎಂಬ ಅರಿವಿರಬೇಕು.ಕನ್ನಡ ಭಾಷೆಯಮೇಲೆಹಿಡಿತವಿರಬೇಕು. ಕನ್ನಡ ಭಾಷೆಯ ಬಗ್ಗೆ ಪತ್ರಕರ್ತರು ಹಿಡಿತ ಸಾಧಿಸಿದಾಗ ಮಾತ್ರವೇ ಬರವಣಿಗೆಗಟ್ಟಿಯಾಗಿ ಮೂಡಲುಸಾಧ್ಯ ಎಂದುಅಭಿಪ್ರಾಯಪಟ್ಟರು.

ಜಿಲ್ಲಾಧಿಕಾರಿ ಕೆ.ಎ.ದಯಾನಂದ ಮಾತನಾಡಿ, ‘ಮಾಧ್ಯಮಗಳಲ್ಲಿ ಬರುವುದೆಲ್ಲವೂ ನಮಗೆ ಪೂರಕವಾಗಿರಬೇಕು ಎಂಬ ಮನಸ್ಥಿತಿ ಇಂದು ಎಲ್ಲರಲ್ಲೂ ಮೈಗೂಡಿದೆ. ಹಾಗಾಗಿಯೇ, ತಪ್ಪುಗಳನ್ನು ಹೇಳಿದಾಗ ಮಾಧ್ಯಮಗಳನ್ನೇ ಪ್ರಶ್ನೆ ಮಾಡುವ, ನಿಂದನೆ ಮಾಡುವ ಕಾಲಘಟ್ಟಕ್ಕೆ ಬಂದಿದ್ದೇವೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ತ‍ಪ್ಪುಗಳನ್ನು ಸ್ವೀಕರಿಸುವ ಮನಸ್ಥಿತಿ ಬೆಳೆಯಬೇಕು’ ಎಂದರು.

ವರ್ತಮಾನದ ಸನ್ನಿವೇಶದಲ್ಲಿ ಪತ್ರಿಕೆ ಮತ್ತು ಸಮಾಜದ ನಡುವೆ ಸಂಘರ್ಷ ಇದೆ. ಅಷ್ಟು ಸುಲಭವಾಗಿ ಒಪ್ಪಿಕೊಳ್ಳದ ಸ್ಥಿತಿ ತಲುಪಿದ್ದೇವೆ. ಪತ್ರಿಕೋದ್ಯಮ ಒಂದು ಪ್ರಭಾವಿ ಮಾಧ್ಯಮ. ಸಮಾಜ ಸ್ವಾಸ್ಥ್ಯ ಕಾಪಾಡುವಲ್ಲಿ ಮಾಧ್ಯಮದ ಪಾತ್ರ ಹಿರಿದು. ತಪ್ಪುಗಳ ನಡುವೆಯೂ ಒಳ್ಳೆಯದನ್ನು ಒಪ್ಪಿಸುವ ಕೆಲಸ ಪತ್ರಿಕೋದ್ಯಮ ಮಾಡುತ್ತಿದೆ. ಒಳ್ಳೆಯದನ್ನು ಆರಿಸಿಕೊಳ್ಳುವುದು ನೋಡುಗರ, ಓದುಗರ ಜವಾಬ್ದಾರಿಯಾಗಿದೆ. ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಶಿವಮೊಗ್ಗ ಪತ್ರಿಕಾರಂಗ ಅತ್ಯಂತ ಜವಬ್ದಾರಿಯುತವಾಗಿ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪತ್ರಕರ್ತರಾದ ಶಿವಮೊಗ್ಗ ನಂದನ್ ಮತ್ತು ಮುದಾಸಿರ್ ಅಹಮ್ಮದ್ ಅವರನ್ನು ಸನ್ಮಾನಿಸಲಾಯಿತು. ಛಾಯಾಚಿತ್ರಗ್ರಾಹಕ ನಂದನ್ ತಮಗೆ ಸಂದ ಸನ್ಮಾನವನ್ನುತಮ್ಮ ಶಿಕ್ಷಕಿಗ್ರೇಸ್ ಮನೋಹರ್ ಅವರಿಗೆ ಅರ್ಪಿಸಿದರು.ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶಿ.ವಿ.ಸಿದ್ದಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.