ಕಾರ್ಗಲ್: 15ನೇ ಹಣಕಾಸಿನ ಯೋಜನೆಯಡಿ ₹1.50 ಕೋಟಿ ಅನುದಾನ ಲಭ್ಯವಾಗಿದ್ದು, ಬಹುಪಾಲು ಮೂಲಸೌಲಭ್ಯಗಳನ್ನು ಕಲ್ಪಿಸಲು ಆದ್ಯತೆ ಮೇರೆಗೆ ಮೀಸಲಿರಿಸಲಾಗಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಾಸಂತಿ ರಮೇಶ್ ತಿಳಿಸಿದರು.
ಇಲ್ಲಿನ ಪಟ್ಟಣ ಪಂಚಾಯಿತಿ ಒಳಾಂಗಣದಲ್ಲಿ ಮಂಗಳವಾರ ನಡೆದ ಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು.
‘ಕುಡಿಯುವ ನೀರಿನ ಪೈಪ್‌ಲೈನ್, ನೀರು ಸಂಗ್ರಹಾಗಾರ ದುರಸ್ತಿ ಮತ್ತು ಉನ್ನತ ದರ್ಜೆಗೆ ಏರಿಸುವ ಸಲುವಾಗಿ ₹25 ಲಕ್ಷ ಮತ್ತು ಆಶ್ರಯ ಯೋಜನೆಯ ಲೇಔಟ್‍ನಲ್ಲಿ ರಸ್ತೆ, ಚರಂಡಿ, ವಿದ್ಯುತ್ ಸೌಲಭ್ಯ ಕಲ್ಪಿಸಲು ಕಾರ್ಗಲ್ ಮತ್ತು ಜೋಗಕ್ಕೆ ತಲಾ ₹33 ಲಕ್ಷ ಮೀಸಲಿರಿಸಲಾಗಿದೆ. ಆಶ್ರಯ ಕಾಲೊನಿಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ವಿಶೇಷ ಗಮನಹರಿಸಬೇಕಾಗಿದೆ. ಸರ್ಕಾರದಿಂದ ಆಶ್ರಯ ಸಮಿತಿ ರಚನೆ ಮಾಡಲು ಶಾಸಕರು ಶಿಫಾರಸು ಸಲ್ಲಿಸುವಂತೆ ಕೋರಲು ಸಭೆಯಲ್ಲಿ ನಿರ್ಣಯ
ಕೈಗೊಳ್ಳಲಾಗಿದೆ’ ಎಂದು ಅವರು ತಿಳಿಸಿದರು.
‘ಪ್ರಸಕ್ತ ಎಸ್‍ಎಫ್‌ಸಿ ಯೋಜನೆಯಡಿ ಲಭ್ಯವಾಗುವ ಶೇ 24.10, ಶೇ 7.25 ಹಾಗೂ ಶೇ 5ರ ಅನುದಾನಗಳಿಗೆ ಕ್ರಿಯಾಯೋಜನೆ ಸಿದ್ಧಪಡಿಸಿ ಅಂಗವಿಕಲರಿಗೆ, ಪರಿಶಿಷ್ಟ ಸಮುದಾಯಕ್ಕೆ ಮತ್ತು ಶಾಲಾ ಮಕ್ಕಳ ವಿದ್ಯಾರ್ಥಿ ವೇತನಗಳಿಗೆ ಪೂರಕವಾಗಿ ಪಟ್ಟಿ ಸಿದ್ದಪಡಿಸಲು ಸೂಚನೆ ನೀಡಲಾಗಿದೆ’ ಎಂದು ವಾಸಂತಿ ರಮೇಶ್ ತಿಳಿಸಿದರು.
ಸಭಾಂಗಣದ ಬಾವಿಗಿಳಿದು ಹರೀಶ್ ಗೌಡ ಪ್ರತಿಭಟನೆ: ‘ಪಟ್ಟಣ ಪಂಚಾಯಿತಿಯಲ್ಲಿ ಅಧ್ಯಕ್ಷರು ನುಡಿದಂತೆ ನಡೆಯುತ್ತಿಲ್ಲ ಎಂದು ಬಿಜೆಪಿ ಬೆಂಬಲಿತ ಪಕ್ಷೇತರ ಸದಸ್ಯ ಕೆ.ಸಿ. ಹರೀಶ ಗೌಡ ಸಭಾಂಗಣದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಅಧ್ಯಕ್ಷರು ನನ್ನ ವಾರ್ಡಿನ ಕೆಲಸಗಳಿಗೆ ಅನಗತ್ಯವಾಗಿ ಮೂಗು ತೂರಿಸುತ್ತಿದ್ದು, ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
ಅಧ್ಯಕ್ಷೆ ವಾಸಂತಿ ರಮೇಶ್ ಅವರು ಹರೀಶ್ ಗೌಡರವರಿಗೆ ಸೂಕ್ತ ಸಮಜಾಯಿಷಿ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.
ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ ಕಾಂಗ್ರೆಸ್ ಆರೋಪ: ‘ಆಡಳಿತ ಪಕ್ಷದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಬೆಂಬಲಿತ ಸದಸ್ಯರು ಪರಸ್ಪರ ಒಮ್ಮತದಿಂದ ಅಭಿವೃದ್ಧಿ ಕೆಲಸಗಳಿಗೆ ಚಿಂತನೆ ಮಾಡಿ ಯೋಜನೆ ರೂಪಿಸದೇ, ಪರಸ್ಪರ ಕಿತ್ತಾಡುತ್ತಿರುವುದು ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ. ಅಧ್ಯಕ್ಷೆ ವಾಸಂತಿ ರಮೇಶ್ ಆಡಳಿತ ಪಕ್ಷದ ಸದಸ್ಯರ ವಿಶ್ವಾಸವನ್ನು ಕಳೆದುಕೊಂಡಿದ್ದು, ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು’ ಎಂದು ಕಾಂಗ್ರೆಸ್ ಸದಸ್ಯ ಎಂ. ರಾಜು ಒತ್ತಾಯಿಸಿದರು.
ಕೆಪಿಸಿ ಅಧಿಕಾರಿಗಳು ತಬ್ಬಿಬ್ಬು: ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ಅಧಿಕಾರಿಗಳು ವಿಶೇಷ ಚರ್ಚೆಗೆ ಆಗಮಿಸಿದ್ದು, ಸದಸ್ಯರು ಪರಸ್ಪರ ದೋಷಾರೋಪಗಳೊಂದಿಗೆ ಪ್ರತಿಭಟನೆ ನಡೆಸಿ ಕಿತ್ತಾಡುವುದನ್ನು ಕಂಡು ಒಂದು ಹಂತದಲ್ಲಿ ತಬ್ಬಿಬ್ಬಾದರು. ತಮ್ಮನ್ನು ಕರೆಸಿರುವ ವಿಷಯ ಸೂಚಿಯನ್ನು ಬಿಟ್ಟು ಇತರೆ ವಿಷಯಗಳ ಮೇಲೆ ಸದಸ್ಯರು ಕಚ್ಚಾಡುವ ಪ್ರಸಂಗದ ಬಗ್ಗೆ ಹೆಸರು ಹೇಳಲಿಚ್ಛಿಸದ ಕೆಪಿಸಿ ಅಧಿಕಾರಿ ಬೇಸರ ವ್ಯಕ್ತಪಡಿಸಿದರು.
ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಲಕ್ಷ್ಮೀರಾಜು, ಸದಸ್ಯರಾದ ಸುಜಾತಾ ಜೈನ್, ಜಯಲಕ್ಷ್ಮೀ, ಎಸ್.ಎಚ್.ಜಗದೀಶ್, ದೇವರಾಜ್ ಜೈನ್ ಯಡ್ಡಳ್ಳಿ, ಕೆ.ಸಿ. ಹರೀಶ್ ಗೌಡ, ಉಮೇಶ್ ಕೆಮ್ಮಣಗಾರ್, ಲಲಿತಾ ಮಂಜುನಾಥ್, ರಾಜು.ಎಂ, ಮುಖ್ಯಾಧಿಕಾರಿ ಜಗದೀಶ್ ನಾಯ್ಕ್, ಸಿಬ್ಬಂದಿ ಕಿರಿಯ ಎಂಜಿನಿಯರ್ ಪವಿತ್ರಾ, ಕಂದಾಯಾಧಿಕಾರಿ ಸೆಂಟಯ್ಯ, ಲೋಕೇಶ್ ಮೂರ್ತಿ, ಸುಭಾಷ್
ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.