ADVERTISEMENT

ಶಿವಮೊಗ್ಗ | ಬೆಟ್ಟ ಬಾಯ್ದೆರೆದರೂ ಮನೆ ತೊರೆಯದ ಜನ

ಪಶ್ವಿಮ ಘಟ್ಟದ ನಂದೋಡಿ, ಮಂಡವಳ್ಳಿ, ಅರೋಡಿಯಲ್ಲಿ ಭೂ ಕುಸಿತ

ಚಂದ್ರಹಾಸ ಹಿರೇಮಳಲಿ
Published 17 ಆಗಸ್ಟ್ 2020, 21:33 IST
Last Updated 17 ಆಗಸ್ಟ್ 2020, 21:33 IST
ನಂದೋಡಿ ಬಳಿ ಬೆಟ್ಟದ ಮೇಲಿನ ಕಿರುದಾರಿಯೂ ಸೀಳು ಬಿಟ್ಟಿದೆ.
ನಂದೋಡಿ ಬಳಿ ಬೆಟ್ಟದ ಮೇಲಿನ ಕಿರುದಾರಿಯೂ ಸೀಳು ಬಿಟ್ಟಿದೆ.   

ಶಿವಮೊಗ್ಗ: ಸಾಗರ ತಾಲ್ಲೂಕಿನ ಅರಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವೆಡೆ ಬೆಟ್ಟಗಳುಕುಸಿಯಲಾರಂಭಿಸಿವೆ.ಅಪಾಯ ಕಣ್ಣೆದುರಿಗೇ ಇದ್ದರೂ ನಂದೋಡಿ, ಮಂಡವಳ್ಳಿ, ಅರೋಡಿ ಜನರು ಸ್ಥಳಾಂತರಕ್ಕೆ ಹಿಂದೇಟು ಹಾಕುತ್ತಿದ್ದಾರೆ.

ಶರಾವತಿ ಜಲಾಶಯದ ಹಿನ್ನೀರಿಗೆ ತಾಗಿಗೊಂಡಿರುವ ಪಶ್ಚಿಮಘಟ್ಟದ ತಪ್ಪಲಿನ ಬೆಟ್ಟಗಳಲ್ಲಿ ನೂರಾರು ಮೀಟರ್ ಬಿರುಕು ಕಾಣಿಸಿಕೊಂಡಿದೆ. ಮಳೆ ಜೋರಾದಂತೆ ಅಲ್ಲಲ್ಲಿ ಮಣ್ಣು ಕುಸಿಯುತ್ತಿದೆ. ಒಂದು ಭಾಗದಲ್ಲಿ ಮಣ್ಣು ಜರುಗಿದ್ದರಿಂದ ರೈತರೊಬ್ಬರ ಇಡೀ ಅಡಿಕೆ ತೋಟ ನೆಲಸಮವಾಗಿದೆ. 15 ಮನೆಗಳು ಬಿರುಕು ಬಿಟ್ಟಿವೆ. 11 ಕುಟುಂಬಗಳನ್ನು ಸ್ಥಳಾಂತರಿಸಲು ಕಂದಾಯ ಇಲಾಖೆ ಹರಸಾಹಸ ಮಾಡಿದರೂ, ಸ್ಥಳಾಂತರಗೊಂಡಿದ್ದು ಎರಡು ಕುಟುಂಬಗಳಷ್ಟೆ. ತಮ್ಮ ನೆನಪುಗಳನ್ನು ಬಿಟ್ಟು ಬರಲು ಉಳಿದ ಕುಟುಂಬಗಳು ಒಪ್ಪುತ್ತಿಲ್ಲ.

ನೆಂಟರ ಮನೆಗಳಲ್ಲೇ ಆಶ್ರಯ: ಮಳೆಗಾಲ ಮುಗಿಯುವವರೆಗೂ ಸಮೀಪದ ನೆಂಟರಮನೆಗಳಲ್ಲಿ ಆಶ್ರಯ ಕಲ್ಪಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ. ಆಶ್ರಯ ಕೊಟ್ಟವರಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ಪ್ರತಿ ತಿಂಗಳು ₹ 5 ಸಾವಿರ ಮನೆ ಬಾಡಿಗೆ ನೀಡುವ ಪ್ರಸ್ತಾವ ಮುಂದಿಟ್ಟಿದೆ. ಮಳೆಗಾಲ ಮುಗಿದ ನಂತರ ಸರ್ವೆ ಮಾಡಿ, ಖಾತೆ ಇರುವ ಜಮೀನು, ತೋಟಗಳಿಗೆ ಪರ್ಯಾಯ ಭೂಮಿ, ನಿವೇಶನ ಒದಗಿಸುವ ಭರವಸೆ ನೀಡಿದೆ.

ADVERTISEMENT

ಅರಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 13 ಗ್ರಾಮಗಳು ಬರುತ್ತವೆ. ಎರಡು ವರ್ಷಗಳ ಹಿಂದೆ ಇಲ್ಲಿ ಮಂಗನಕಾಯಿಲೆಯಿಂದ 20ಕ್ಕೂ ಹೆಚ್ಚು ಜನರು ಜೀವ ಕಳೆದುಕೊಂಡಿದ್ದರು. ಈ ವರ್ಷ ಮತ್ತೊಂದು ಸವಾಲು. ಲಿಂಗನಮಕ್ಕಿ ಅಣೆಕಟ್ಟೆಯಿಂದ 5 ಕಿ.ಮೀ. ಅಂತರದಲ್ಲಿರುವ ಪ್ರದೇಶದಲ್ಲಿ ಬೆಟ್ಟಗಳು ದೊಡ್ಡ ಪ್ರಮಾಣದಲ್ಲಿ ಕುಸಿದರೆ ಜಲಾಶಯಕ್ಕೂ ಅಪಾಯ ಎದುರಾಗುವ ಆತಂಕವಿದೆ.

‘ಜಿಲ್ಲಾ ಉಸ್ತುವಾರಿ ಸಚಿವರು ಮನೆ ಕಟ್ಟಿಕೊಳ್ಳಲು ಸುರಕ್ಷಿತ ಸ್ಥಳದಲ್ಲಿ ನಿವೇಶನ ನೀಡುವಂತೆ ಸೂಚಿಸಿದ್ದಾರೆ. ಆದರೆ, ದನ–ಕರು, ಜಮೀನು ಬಿಟ್ಟು ಬರಲು ಜನರಿಗೆ ಕಷ್ಟವಾಗುತ್ತದೆ. ನಮ್ಮ ಮನೆಯ ಬಳಿಯೇ ಅರ್ಧ ಕಿ.ಮೀ. ಗುಡ್ಡ ಕುಸಿದಿದೆ. ಎಲ್ಲರೂ ಆತಂಕದಲ್ಲೇಕಾಲ ಕಳೆಯುತ್ತಿದ್ದೇವೆ’ ಎನ್ನುತ್ತಾರೆ ಅರಳಗೋಡಿನ ಕೃಷಿಕ ಮಹಾಬಲಗಿರಿ.

**

ಈ ಗ್ರಾಮಗಳು ಪಶ್ಚಿಮಘಟ್ಟದ ವನ್ಯಜೀವಿ ಅರಣ್ಯದ ಒಳಗಿವೆ. ಬೆಟ್ಟ ಕುಸಿಯುವ ಸಾಧ್ಯತೆ ಇರುವ ಪ್ರದೇಶದ ಜನರಿಗೆ ಬೇರೆ ಮನೆಗಳಲ್ಲಿ ಆಶ್ರಯ ಪಡೆಯಲು ವಿನಂತಿಸಲಾಗಿದೆ.
-ಡಾ.ಎಲ್‌.ನಾಗರಾಜ್,ಉಪ ವಿಭಾಗಾಧಿಕಾರಿ, ಸಾಗರ ತಾಲ್ಲೂಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.