ತೀರ್ಥಹಳ್ಳಿ: ತಾಲ್ಲೂಕಿನ ಹಲವು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆ ಹಳ್ಳ ಹಿಡಿದಿದೆ. ನೀರು ಶುದ್ಧೀಕರಣ ಘಟಕವಿದ್ದು, ಘಟಕದ ಕಾರ್ಯ ಸ್ಥಗಿತಗೊಂಡಿರುವ ಕಾರಣ ತುಂಗಾ ನದಿ ಹರಿದರೂ ಜನರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ.
ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಶುದ್ಧ ನೀರು ಪೂರೈಸುವ ಉದ್ದೇಶದಿಂದ 2001ರಲ್ಲಿ ಶುದ್ಧ ನೀರಿನ ಘಟಕ ಆರಂಭಿಸಲಾಗಿತ್ತು. ಈಗ ಅದು ಸ್ಥಗಿತಗೊಂಡಿದೆ. ಇಂದಿಗೂ ತಾಲ್ಲೂಕಿನ ಹಲವು ಹಳ್ಳಿಯ ಜನರು ಕುಡಿಯುವ ನೀರಿಗಾಗಿ ಕೊಡ ಹಿಡಿದು ಕೆರೆ, ಕೊಳವೆಬಾವಿ, ಬಾವಿಗಳು ಇರುವೆಡೆ ಅಲೆಯುವುದು ತಪ್ಪಿಲ್ಲ.
ವಿಶ್ವಬ್ಯಾಂಕ್‌ನ ₹ 50 ಲಕ್ಷ ನೆರವಿನೊಂದಿಗೆ ಸಮಗ್ರ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ಪರಿಸರ ನೈರ್ಮಲ್ಯ ಯೋಜನೆಯಡಿ ತಾಲ್ಲೂಕಿನ ಮೇಲಿನ ಕುರುವಳ್ಳಿಯಲ್ಲಿ ಈ ಘಟಕ ಸ್ಥಾಪಿಸಲಾಗಿತ್ತು. ಅಂದಿನ ಸಂಸದ ಎಸ್. ಬಂಗಾರಪ್ಪ ಹಾಗೂ ಶಾಸಕ ಆರಗ ಜ್ಞಾನೇಂದ್ರ ಘಟಕವನ್ನು ಉದ್ಘಾಟಿಸಿದ್ದರು. ಸುಮಾರು 13 ವರ್ಷ ಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಿತ್ತು. 10 ವರ್ಷಗಳಿಂದೀಚೆಗೆ ಘಟಕ ಕಾರ್ಯ ನಿರ್ವಹಿಸುತ್ತಿಲ್ಲ.
‘ಪುತ್ತಿಗೆ ಮಠದ ಸಮೀಪ ತುಂಗಾ ನದಿಗೆ ಜಾಕ್‌ವೆಲ್ ಅಳವಡಿಸಿ ನೀರನ್ನು ಶುದ್ಧೀಕರಣ ಘಟಕಕ್ಕೆ ಸರಬರಾಜು ಮಾಡುವುದು, ಶುದ್ಧೀಕರಿಸಿದ ನೀರನ್ನು ನೇರವಾಗಿ ಗ್ರಾಮೀಣ ಭಾಗದಲ್ಲಿನ ಟ್ಯಾಂಕ್‌ಗಳಿಗೆ ಸರಬರಾಜು ಮಾಡಲಾಗುತ್ತಿತ್ತು. ಬಳಿಕ ತುಂಗಾ ನದಿಯಲ್ಲಿ ಉಂಟಾದ ನೀರಿನ ಅಭಾವದಿಂದಾಗಿ ಆಳವಿಲ್ಲದ ಕಾರಣದಿಂದ ಜಾಕ್‌ವೆಲ್ ವಿಫಲವಾಗಿದೆ. ಶುದ್ಧೀಕರಣ ಘಟಕದ ಟ್ಯಾಂಕ್ ಸೋರುತ್ತಿದ್ದು, ಬಳಕೆಯಲ್ಲಿ ಇಲ್ಲ. ದುರಸ್ತಿ ಕಾರ್ಯ ಕೈಗೊಂಡರೂ ಘಟಕ ಮೊದಲಿನಂತೆ ಕಾರ್ಯಾಚರಣೆ ಮಾಡುತ್ತಿಲ್ಲ. ಮಳೆಗಾಲದಲ್ಲಿ ಕೆಂಪು ನೀರು ಪೂರೈಕೆಯಾಗುತ್ತದೆ. ಘಟಕ ನಿರ್ವಹಣೆ ಚೆನ್ನಾಗಿ ಮಾಡಿದ್ದರೆ ಶುದ್ಧ ನೀರಿನ ಸಮಸ್ಯೆ ಆಗುತ್ತಿರಲಿಲ್ಲ’ ಎಂದು ಮೇಲಿನ ಕುರುವಳ್ಳಿಯ ಸುಮಂತ್ ಆರ್. ದೂರುತ್ತಾರೆ.
‘ಮೇಲಿನ ಕುರುವಳ್ಳಿ ಶುದ್ಧೀಕರಣ ಘಟಕ ನಿರ್ವಹಣೆ ನಮ್ಮ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಚಂದ್ರಶೇಖರ್ ಸಮಜಾಯಿಷಿ ನೀಡಿದರು.
‘ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿ 15 ಎಚ್.ಪಿ ಸಾಮರ್ಥ್ಯದ 10ಕ್ಕೂ ಹೆಚ್ಚು ಮೋಟರ್, 11 ಒಎಚ್‌ಟಿ ಟ್ಯಾಂಕ್, 15 ಕೊಳವೆಬಾವಿಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರತಿ ತಿಂಗಳಿಗೆ ಅಂದಾಜು ₹ 3 ಲಕ್ಷ ವಿದ್ಯುತ್ ಬಿಲ್ ಪಾವತಿಸಬೇಕು. ಪಂಚಾಯಿತಿ ವ್ಯಾಪ್ತಿಯಲ್ಲಿ ಆದಾಯ ಕ್ರೋಢಿಕರಣದ್ದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಜಲ ಜೀವನ್ ಮಿಷನ್ ಯೋಜನೆಯಡಿ ಕಳಪೆ ಕಾಮಗಾರಿ ನಡೆಯುತ್ತಿದೆ. ಬೇಕಾಬಿಟ್ಟಿ ಪೈಪ್‌ಲೈನ್ ಅಳವಡಿಸುತ್ತಿದ್ದು, ಗ್ರಾಮೀಣ ಜನರಿಗೆ ನೀರು ಕೊಡಲು ತೊಂದರೆಯಾಗುತ್ತಿದೆ. ಅಧಿಕಾರಿಗಳು ತಲೆಬುಡವಿಲ್ಲದ ಯೋಜನೆ ಅನುಷ್ಠಾನ ಮಾಡಿ ಪಂಚಾಯಿತಿಗೆ ದುಪ್ಪಟ್ಟು ಹೊರೆ ಹಾಕುತ್ತಿದ್ದಾರೆ. ಯಾರು ನಿರ್ವಹಣೆ ಮಾಡಬೇಕು ಎಂಬ ಬಗ್ಗೆ ಸ್ಪಷ್ಟ ನಿರ್ದೇಶನ ಇಲ್ಲ. ಪಂಚಾಯಿತಿಗೆ ಅನುದಾನವೂ ಬಿಡುಗಡೆಯಾಗುವುದಿಲ್ಲ. ಸರ್ಕಾರದ ಯೋಜನೆಗಳು ಹಾಳಾಗಲು ಅಧಿಕಾರಿಗಳೇ ಕಾರಣ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಯು.ಡಿ. ವೆಂಕಟೇಶ್ ಆರೋಪಿಸಿದರು.
ಕುಡಿಯುವ ನೀರಿನ ಶುದ್ಧೀಕರಣ ಘಟಕ ದುರಸ್ತಿಗೊಳಿಸುವ ಪ್ರಯತ್ನ ನಡೆಯುತ್ತಿದೆ. ಶುದ್ಧ ನೀರು ಪೂರೈಸಲು ಆದ್ಯತೆಯ ಮೇರೆಗೆ ಗ್ರಾಮಾಡಳಿತ ಕೆಲಸ ಮಾಡುತ್ತಿದೆ.ಯು.ಡಿ. ವೆಂಕಟೇಶ್ ಗ್ರಾ.ಪಂ. ಅಧ್ಯಕ್ಷ ಮೇಲಿನ ಕುರುವಳ್ಳಿ
ಹೆಸರಿಗಷ್ಟೇ ಶುದ್ಧೀಕರಣ ಘಟಕ ಇದೆ. ಶುದ್ಧ ನೀರು ದೊರೆಯುತ್ತಿಲ್ಲ. ನೀರಿಗಾಗಿ ಕೊಳವೆಬಾವಿ ನಂಬಿಕೊಂಡಿದ್ದೇವೆಶಶಿಕುಮಾರ್ ಎಂ. ಮೇಲಿನ ಕುರುವಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.