ADVERTISEMENT

ಸೊರಬ| ಅಭಿವೃದ್ಧಿ ಕಾರ್ಯದಿಂದ ಜನರ ಪ್ರೀತಿ, ವಿಶ್ವಾಸ: ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2023, 5:15 IST
Last Updated 10 ಏಪ್ರಿಲ್ 2023, 5:15 IST
ಸೊರಬ ತಾಲ್ಲೂಕಿನ ಗುಡವಿ ಗ್ರಾಮದಲ್ಲಿ ಭಾನುವಾರ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಕೆಪಿಸಿಸಿ ಹಿಂದುಳಿದ ವರ್ಗಗಳ ಅಧ್ಯಕ್ಷ ಮಧು ಬಂಗಾರಪ್ಪ ಮಾತನಾಡಿದರು
ಸೊರಬ ತಾಲ್ಲೂಕಿನ ಗುಡವಿ ಗ್ರಾಮದಲ್ಲಿ ಭಾನುವಾರ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಕೆಪಿಸಿಸಿ ಹಿಂದುಳಿದ ವರ್ಗಗಳ ಅಧ್ಯಕ್ಷ ಮಧು ಬಂಗಾರಪ್ಪ ಮಾತನಾಡಿದರು   

ಸೊರಬ: ‘ನಾನು ಶಾಸಕನಾದ ಅವಧಿಯಲ್ಲಿ ಜನಪರವಾದ ಆಡಳಿತವನ್ನು ನೀಡಿರುವ ಕಾರಣ ತಾಲ್ಲೂಕಿನಾದ್ಯಂತ ಜನರು ಪ್ರೀತಿ, ವಿಶ್ವಾಸವನ್ನು ತೋರಿಸುತ್ತಿದ್ದಾರೆ’ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ಅಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.

ತಾಲ್ಲೂಕಿನ ಕುಪ್ಪಗಡ್ಡೆ, ಕುಂಬ್ರಿ, ದುಗ್ಲಿ, ಹೊಸೂರು, ಕಲ್ಲಂಬಿ, ಗುಂಜನೂರು, ಜಂಬೆಹಳ್ಳಿ, ಗುಡವಿ
ಗ್ರಾಮಗಳಲ್ಲಿ ಭಾನುವಾರ ನಡೆದ ಬೂತ್ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

‘ವಿರೋಧ ಪಕ್ಷದ ಶಾಸಕನಾಗಿದ್ದಾಗಲೂ ಆಡಳಿತ ಪಕ್ಷದ ಸಚಿವರ ಸಹಕಾರವನ್ನು ಪಡೆದು ಅನೇಕ ಜನಪರ ಯೋಜನೆಗಳಿಗೆ ಅನುದಾನ ತಂದಿದ್ದೇನೆ. ನಮ್ಮ ಗ್ರಾಮ, ನಮ್ಮ ರಸ್ತೆ, ಗ್ರಾಮ ವಿಕಾಸ, ಬಸವ ವಸತಿ ಯೋಜನೆ ಅಡಿಯಲ್ಲಿ ರಸ್ತೆ, ವಸತಿ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದೇನೆ. ವಿರೋಧ ಪಕ್ಷದ ಪಂಚಾಯಿತಿ ಸದಸ್ಯರಿದ್ದರೂ ಅವರಿಗೂ ಸಮಾನವಾಗಿ ಅನುದಾನವನ್ನು ಹಂಚಿಕೆ ಮಾಡಲಾಗಿತ್ತು’ ಎಂದು ತಿಳಿಸಿದರು.

ADVERTISEMENT

‘ಹಾಯ, ಹಲಸಿನಕೊಪ್ಪ, ಗುಡವಿ ಸೇತುವೆ, ಮೂಡಿ–ಮುಗೂರು, ಕುಣಿತೆಪ್ಪ ನೀರಾವರಿ ಯೋಜನೆಗಳು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅನುಷ್ಠಾನಗೊಂಡಿರುವ ಯೋಜನೆಗಳಾಗಿವೆ. ಈಗ ಶಾಸಕ ಕುಮಾರ್ ಬಂಗಾರಪ್ಪ ಈ ಯೋಜನೆಗಳು ನನ್ನ ಅವಧಿಯಲ್ಲಿ ಆರಂಭಗೊಂಡಿರುವ ಯೋಜನೆಗಳು ಎಂದು ಹೇಳಿಕೊಳ್ಳುತ್ತಿರುವುದು ಹಾಸ್ಯಾಸ್ಪದ’ ಎಂದು ದೂರಿದರು.

‌‘ಸಣ್ಣ ನೀರಾವರಿ ಸಚಿವರಾಗಿದ್ದಾಗ ಈ ಕಾರ್ಯಗಳನ್ನು ಏಕೆ ಮಾಡಲಿಲ್ಲ’ ಎಂದು ಪ್ರಶ್ನಿಸಿದ ಅವರು, ‘ತಾಳಗುಪ್ಪದಲ್ಲಿ ಆಗಿರುವ ರೈತರ ಅನ್ಯಾಯಕ್ಕೆ ಜನರೇ ತಕ್ಕ ಉತ್ತರ ನೀಡಲಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ದೊರೆಯುತ್ತಿದ್ದು ಮುಂಬರುವ ದಿನದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ’ ಎಂದರು.

ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಡಿ.ಬಿ., ಜಿಲ್ಲಾ ಉಪಾಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ, ಮುಖಂಡರಾದ ಎಚ್. ಗಣಪತಿ, ನಾಗರಾಜ್ ಚಿಕ್ಕಸವಿ, ಮಂಜಣ್ಣ, ಯುವರಾಜ್, ಮೋಹನ್, ಎಂ.ಡಿ. ಶೇಖರ್, ಗಿರಿಯಪ್ಪ, ರಾಜಶೇಖರಗೌಡ, ದಯಾನಂದ ಗೌಡ, ಸುನಿಲ್ ಗೌಡ, ಗಣಪತಿ, ಜೆ. ಪ್ರಕಾಶ್, ಬಸವರಾಜ್ ಜಿ.ಡಿ., ಸಂತೋಷ್, ರಾಮಪ್ಪ, ನಂಜುಂಡ, ಧರ್ಮಾಚಾರ್, ರವೀಂದ್ರ, ಚಂದ್ರಪ್ಪ, ಮಧು‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.