ಶಿವಮೊಗ್ಗ: ನಗರದ ಹೊರವಲಯ ರಸ್ತೆಯಲ್ಲಿ ಶನಿವಾರ ನಿಂತಿದ್ದ 10 ಟನ್ ಸ್ಫೋಟಕಗಳನ್ನು ತುಂಬಿದ್ದ ಲಾರಿ ಕೆಲವು ಸಮಯ ನಾಗರಿಕರಲ್ಲಿ ಆತಂಕ ಸೃಷ್ಟಿಸಿತು.
ತೀರ್ಥಹಳ್ಳಿ ರಸ್ತೆಯಿಂದ ಸಹ್ಯಾದ್ರಿ ಕಾಲೇಜು ಮಾರ್ಗದ ಬಳಿಯ ಟಯರ್ ದುರಸ್ತಿ ಅಂಗಡಿಯ ಮುಂದೆ ಲಾರಿ ನಿಲ್ಲಿಸಿದ ಚಾಲಕ, ಟಯರ್ ಬದಲಿಸಲು ಹೇಳಿ ಊಟಕ್ಕೆ ತೆರಳಿದ್ದ. ಅಂಗಡಿಯ ಹುಡುಗರು ಲಾರಿಯಲ್ಲಿ ಸ್ಫೋಟಕ ಇರುವುದನ್ನು ಗಮನಿಸಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಸುದ್ದಿ ಹರಡಿ ಸುತ್ತಲ ಜನರು ಗುಂಪುಗೂಡಿದರು. ಸ್ಥಳಕ್ಕೆ ಬಂದ ಪೊಲೀಸರು ಲಾರಿಯಲ್ಲಿನ ಸಾಮಗ್ರಿ ಪರಿಶೀಲಿಸಿದರು.
‘ಲಾರಿ ಉಡುಪಿ ಜಿಲ್ಲೆ ಹೆಬ್ರಿಯಿಂದ ಬಂದಿತ್ತು. ಚಿತ್ರದುರ್ಗಕ್ಕೆ ಡಿಟೊನೇಟರ್, ಜಿಲಿಟಿನ್ ಕಡ್ಡಿ ಸರಬರಾಜು ಮಾಡಲು ತೆಗೆದುಕೊಂಡು ಹೋಗುತ್ತಿದ್ದರು. ಅಧಿಕೃತ ಪರವಾಗಿ ಇದೆ. ಸುರಕ್ಷತಾ ಕ್ರಮಗಳನ್ನು ಅನುಸರಿಸಿದ್ದಾರೆ. ಪ್ರತಿ ಸ್ಫೋಟಕ ಸಾಮಗ್ರಿಗಳನ್ನೂ ಪ್ರತ್ಯೇಕವಾಗಿ ಇರಿಸಲಾಗಿತ್ತು’ ಎಂದು ವಾಹನ ತಪಾಸಣೆ ಮಾಡಿದ ಡಿವೈಎಸ್‌ಪಿ ಪ್ರಶಾಂತ್ ಮುನೋಳಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಇದೇ ವರ್ಷ ಜ.21ರಂದು ನಡೆದಿದ್ದ ಹುಣಸೋಡು ಸ್ಫೋಟದ ಲಾರಿಯೂ ಆಂಧ್ರಪ್ರದೇಶದ ರಾಯದುರ್ಗದಿಂದ ಚಿತ್ರದುರ್ಗ ಮಾರ್ಗವಾಗಿ ಶಿವಮೊಗ್ಗಕ್ಕೆ ಬಂದಿತ್ತು. ಊಟಕ್ಕೆ ಅವರು ಸವಳಂಗ ರಸ್ತೆಯಲ್ಲಿ ನಿಲ್ಲಿಸಿದ್ದರು. ಈ ಎಲ್ಲ ಕಹಿನೆನಪುಗಳಿಂದ ಬೆದರಿದ್ದ ಜನರು ಹೊರವಲಯದಲ್ಲಿ ಲಾರಿ ಕಂಡು ಭಯಭೀತರಾಗಲು ಕಾರಣವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.