ADVERTISEMENT

ನಿಷ್ಠೆ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ: ಡಿವೈಎಸ್ಪಿ ಚಂದ್ರಶೇಖರ ಸಲಹೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2024, 15:53 IST
Last Updated 26 ನವೆಂಬರ್ 2024, 15:53 IST
ರಟ್ಟೀಹಳ್ಳಿ ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಮಂಗಳವಾರ ಹಾವೇರಿ ಲೋಕಾಯುಕ್ತರಿಂದ ಸಾರ್ವಜನಿಕ ಕುಂದು ಕೊರತೆ, ಅಹವಾಲು ಸ್ವೀಕಾರ ಮತ್ತು ಜನ ಸಂಪರ್ಕ ಸಭೆ ನಡೆಯಿತು
ರಟ್ಟೀಹಳ್ಳಿ ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಮಂಗಳವಾರ ಹಾವೇರಿ ಲೋಕಾಯುಕ್ತರಿಂದ ಸಾರ್ವಜನಿಕ ಕುಂದು ಕೊರತೆ, ಅಹವಾಲು ಸ್ವೀಕಾರ ಮತ್ತು ಜನ ಸಂಪರ್ಕ ಸಭೆ ನಡೆಯಿತು   

ರಟ್ಟೀಹಳ್ಳಿ: ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಸರ್ಕಾರಿ ಅಧಿಕಾರಿಗಳು ತ್ವರಿತವಾಗಿ ನಿರ್ವಹಿಸಿ, ತಮ್ಮ ಕರ್ತವ್ಯವನ್ನು ನಿಷ್ಠೆ ಹಾಗೂ ಪ್ರಮಾಣಿಕತೆಯಿಂದ ನಿರ್ವಹಿಸಿ ಎಂದು ಹಾವೇರಿ ಲೋಕಾಯುಕ್ತ ಡಿವೈಎಸ್ಪಿ. ಬಿ.ಪಿ.ಚಂದ್ರಶೇಖರ ಅಧಿಕಾರಿಗಳಿಗೆ ಸೂಚಿಸಿದರು.

ಅವರು ರಟ್ಟೀಹಳ್ಳಿ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರ ನಡೆದ ಸಾರ್ವಜನಿಕ ಕುಂದುಕೊರತೆ, ಅಹವಾಲು ಸ್ವೀಕಾರ ಮತ್ತು ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದರು.

ಸರ್ಕಾರಿ ಕಚೇರಿಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು. ಕಚೇರಿಗೆ ಬರುವ ಸಾರ್ವಜನಿಕರಿಗೆ ಕುಡಿಯುವ ನೀರು, ಆಸನಗಳ ವ್ಯವಸ್ಥೆ, ಶೌಚಾಲಯ, ಸೌಲಭ್ಯ ಇರುವಂತೆ ಕ್ರಮವಹಿಸಬೇಕು. ಸರ್ಕಾರಿ ಅಧಿಕಾರಿಗಳಿಗೆ ಯಾರೇ ಲಂಚದ ಬೇಡಿಕೆ ಅಥವಾ ಕರ್ತವ್ಯಕ್ಕೆ ಅಡ್ಡಿಪಡಿಸಿದಲ್ಲಿ ಲೋಕಾಯುಕ್ತರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ADVERTISEMENT

ಸಭೆಯಲ್ಲಿ ಲೋಕಾಯುಕ್ತ ಕಚೇರಿಯ ಮಂಜುನಾಥ ಪಂಡಿತ, ತಹಶೀಲ್ದಾರ ಕೆ.ಗುರುಬಸವರಾಜ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಕಾಂತ, ಪಟ್ಟಣ ಪಂಚಾಯ್ತಿ ಅಧಿಕಾರಿ ಸಂತೋಷ ಚಂದ್ರಿಕೇರ ಸೇರಿದಂತೆ ತಾಲ್ಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಜನಸಂರ್ಪಕ ಸಭೆ ವಿಫಲ: ಲೋಕಾಯುಕ್ತರಿಂದ ಸಾರ್ವಜನಿಕರ ಅಹವಾಲು ಸಭೆಗೆ ಕೆಲವೇ ಕೆಲ ಸಾರ್ವಜನಿಕರು ಪಾಲ್ಗೊಂಡಿದ್ದು, ಗ್ರಾಮೀಣ ಭಾಗದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಅಧಿಕಾರಿಗಳು ಸ್ಥಳೀಯವಾಗಿ ಸಮರ್ಪಕವಾಗಿ ಮಾಹಿತಿ ನೀಡದೇ ಇರುವುದರಿಂದ ಸಭೆಗೆ ಬಹಳಷ್ಟು ಜನರು ಬಂದಿರುವುದಿಲ್ಲ.

ಮೇಲ್ನೋಟಕ್ಕೆ ಕೇವಲ ಅಧಿಕಾರಿಗಳ ಸಭೆ ನಡೆದಂತೆ ಆಗಿದೆ. ಸಾರ್ವಜನಿಕರ ಕುಂದು ಕೊರತೆ ಅಹವಾಲು ಸ್ವೀಕಾರ ಅಷ್ಟೊಂದು ಪರಿಣಾಮಕಾರಿಯಾಗಿ ಆಗಿರುವುದಿಲ್ಲ ಎಂದು ಸಭೆಯಲ್ಲಿ ಪಾಲ್ಗೊಂಡವರೊಬ್ಬರು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.