ಸಾಗರ: ಸಹಕಾರ ಸಂಘಗಳಲ್ಲಿನ ಬಡವರ ಪಿಗ್ಮಿ, ಠೇವಣಿ ಹಣವನ್ನು ಲೂಟಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ಭೀಮನಕೋಣೆ ಗ್ರಾಮದಲ್ಲಿ ಸೇವಾ ಸಹಕಾರ ಸಂಘದ ವತಿಯಿಂದ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
‘ಸಹಕಾರ ಸಂಸ್ಥೆಗಳ ವಹಿವಾಟಿನಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವುದು ಮುಖ್ಯ. ತಾಲ್ಲೂಕಿನ ಕಲ್ಮನೆ ಸೊಸೈಟಿಯಲ್ಲಿ ಗ್ರಾಹಕರ ಹಿತಕ್ಕೆ ಮಾರಕವಾಗುವ ಬೆಳವಣಿಗೆ ನಡೆದಿರುವುದು ಬೇಸರ ತಂದಿದೆ. ಇದಕ್ಕೆ ಕಾರಣರಾದ ವ್ಯಕ್ತಿಗಳ ಮೇಲೆ ಈಗಾಗಲೇ ಕಾನೂನು ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ’ ಎಂದು ಹೇಳಿದರು.
‘ರೈತರು ಹಾಗೂ ಸಹಕಾರಿ ಮುಖಂಡರ ಜೊತೆಗೆ ನಿರಂತರ ಸಂಪರ್ಕದಲ್ಲಿರಬಹುದು ಎನ್ನುವ ಕಾರಣಕ್ಕೆ ಸಹಕಾರ ಕ್ಷೇತ್ರ ಪ್ರವೇಶಿಸಿದ್ದೇನೆ. ಯಾವುದೇ ಅಧಿಕಾರ ಅಥವಾ ಸ್ಥಾನಮಾನದ ಆಸೆಯಿಂದ ಸಹಕಾರ ಕ್ಷೇತ್ರಕ್ಕೆ ಬಂದಿಲ್ಲ’ ಎಂದರು.
‘ಡಿಸಿಸಿ ಬ್ಯಾಂಕ್‌ನಿಂದ ತಾಲ್ಲೂಕಿನ ಸಹಕಾರ ಸಂಘಗಳಿಗೆ ಅಗತ್ಯವಿರುವ ನೆರವು ಕೊಡಿಸುವ ವಿಷಯದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸಹಕಾರ ವ್ಯವಸ್ಥೆಯ ಬಲವರ್ಧನೆಗೆ ಶಕ್ತಿ ಮೀರಿ ಕೆಲಸ ಮಾಡುತ್ತೇನೆ’ ಎಂದು ತಿಳಿಸಿದರು.
ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಎಂ.ಹರನಾಥರಾವ್, ಜೀವವೈವಿಧ್ಯ ಮಂಡಳಿ ಸದಸ್ಯ ಕವಲಕೋಡು ವೆಂಕಟೇಶ್, ಸಂಸ್ಥೆಯ ಮಾಜಿ ಅಧ್ಯಕ್ಷ ಎಂ.ಎಸ್.ನಾಗರಾಜ್ ಅವರನ್ನು ಸನ್ಮಾನಿಸಲಾಯಿತು.
ಸೊಸೈಟಿ ಅಧ್ಯಕ್ಷ ಕೆ.ಕೆ. ರಾಜೇಶ್ ಕೇಡಲಸರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಚ್.ಕೆ. ಚೌಡಪ್ಪ, ಪ್ರಮುಖರಾದ ಎಂ.ಡಿ. ನಾಗರಾಜ ಭಟ್, ಎ.ಡಿ. ರಾಮಚಂದ್ರ ಭಟ್, ಸುಬ್ರಮಣ್ಯ ಇದ್ದರು.
ಕೆ.ಎಸ್. ಪ್ರಭಾಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಿಯಾಂಕಾ ಸಿ.ಎನ್. ವಂದಿಸಿದರು. ಎಂ.ನಾಗರಾಜ್ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.