ಸೊರಬ: ಕಿತ್ತುಹೋದ ಡಾಂಬರು, ತಗ್ಗು, ಗುಂಡಿಗಳ ಸಾಲು, ಮಳೆಗಾಲದಲ್ಲಿ ಚರಂಡಿಯಂತೆ ರಸ್ತೆಯಲ್ಲಿ ಹತ್ತಾರು ಕಿ.ಮೀ ದೂರದವರೆಗೂ ಹರಿಯುವ ನೀರು – ಇದು ತಾಲ್ಲೂಕಿನ ಜಡೆ , ತಲಗಡ್ಡೆ, ಹೊಸೂರು ಮೂಲಕ ಹಾದು ಹೋಗಿರುವ ಹಾನಗಲ್ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಕಾಣುವ ದೃಶ್ಯ.
ತಾಲ್ಲೂಕಿನ ಪ್ರಮುಖ ಹೋಬಳಿಗಳಲ್ಲೊಂದಾದ ಜಡೆ ಗ್ರಾಮಕ್ಕೆ ಸಂಪರ್ಕಿಸುವ ಲೋಕೋಪಯೋಗಿ ರಸ್ತೆಯಲ್ಲಿ ಡಾಂಬರು ಕಿತ್ತು ಆಳುದ್ದ ಗುಂಡಿಗಳು ಬಿದ್ದು ಸಂಚರಿಸಲು ಜನರು ಪರದಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಸರಿಪಡಿಸುವ ಗೋಜಿಗೆ ಮುಂದಾಗಿಲ್ಲ. ಇದರಿಂದ ನಿತ್ಯ ಶಾಲಾ, ಕಾಲೇಜುಗಳಿಗೆ ಸೈಕಲ್‌ನಲ್ಲಿ ಹಾಗೂ ನಡೆದು ಹೋಗುವ ವಿದ್ಯಾರ್ಥಿಗಳಿಗೆ ಸಮಸ್ಯೆ ಎದುರಾಗಿದೆ.
ತಾಲ್ಲೂಕು ಕೇಂದ್ರದಿಂದ 35 ಕಿ.ಮೀ. ದೂರವಿರುವ ಜಡೆ ಹೋಬಳಿ ತೀರಾ ಹಿಂದುಳಿದ ಪ್ರದೇಶವಾಗಿದೆ. ಜಡೆ ಮೂಲಕ ತಲಗಡ್ಡೆ, ಹೊಸೂರು ಮಾರ್ಗವಾಗಿ ಹಾನಗಲ್ ತಾಲ್ಲೂಕಿಗೆ ಸಂಪರ್ಕಿಸುವ ಈ ಮುಖ್ಯ ರಸ್ತೆಯಲ್ಲಿ ಸಾಲು ಸಾಲು ಗುಂಡಿಗಳ ದರ್ಶನವಾಗುತ್ತದೆ. ಆಳುದ್ದದ ಗುಂಡಿಗಳನ್ನು ತಪ್ಪಿಸಿ ವಾಹನ ಚಲಾಯಿಸುವುದು ಸವಾರರಿಗೆ ಸವಾಲಾಗಿದೆ. ಇತ್ತ ವಿದ್ಯಾರ್ಥಿಗಳು ಜಡೆ ಸರ್ಕಾರಿ ಪ್ರೌಢಶಾಲೆಗೆ ಹತ್ತಾರು ಕಿ.ಮೀ. ದೂರದ ಗ್ರಾಮಗಳಿಂದ ನಡೆದುಕೊಂಡು ಬರುತ್ತಾರೆ. ಅನೇಕ ಸಂದರ್ಭಗಳಲ್ಲಿ ಗುಂಡಿಯಲ್ಲಿ ಬಿದ್ದ ಉದಾಹರಣೆಗಳಿವೆ ಎನ್ನುತ್ತಾರೆ ಉಪನ್ಯಾಸಕ ಕಿರಣ್ ಮೋರೆ.
ಸೊರಬ ಹಾಗೂ ಹಾನಗಲ್ ತಾಲ್ಲೂಕಿನ ನಡುವೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಎದುರಾಗುವ ತಲಗುಂದ, ಶಾನವಳ್ಳಿ, ತಲಗಡ್ಡೆ, ಕೋಡಿಕೊಪ್ಪ ಅರೆ ತಲಗಡ್ಡೆ, ಶಕುನವಳ್ಳಿ ವರೆಗೂ ಹಾಗೂ ಸೊರಬದ ಮೂಲಕ ಜಡೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆಗೆ ಬೊಮ್ಮನಹಳ್ಳಿ, ದ್ಯಾವನಹಳ್ಳಿ, ನಿಟ್ಟಕ್ಕಿ, ಪುಟ್ಟನಹಳ್ಳಿ, ತಾಳಗುಪ್ಪ, ಬಾಸೂರು, ಕೆರೆಹಳ್ಳಿ ಗ್ರಾಮದವರೆಗೂ ರಸ್ತೆ ಸಂಪೂರ್ಣ ಡಾಂಬರು ಕಿತ್ತು ಹಲವು ವರ್ಷಗಳೆ ಕಳೆದಿವೆ. ಬೇಸಿಗೆಯಲ್ಲಿ ದೂಳು ಅಡರಿದರೆ, ಮಳೆಗಾಲದಲ್ಲಿ ರಸ್ತೆ ಮೇಲೆ ನೀರು ಹರಿಯುವುದರಿಂದ ವಾಹನ ಚಲಾಯಿಸುವುದು ಹಾಸವೇ ಸರಿ ಎನ್ನುತ್ತಾರೆ ಅಹಮದ್ ತಲಗಡ್ಡೆ.
ಬಿದ್ದ ಮಳೆ ನೀರು ಸರಾಗವಾಗಿ ಹರಿಯಲು ಚರಂಡಿ ಸಂಪರ್ಕ ಸರಿ ಇಲ್ಲ. ಚರಂಡಿ ಹೂಳು ವಿಲೇವಾರಿ ಮಾಡದ ಪರಿಣಾಮ ಎರಡು ಬದಿಯ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಮಳೆಗೆ ತೇವಗೊಂಡಿರುವ ರಸ್ತೆಯಲ್ಲಿನ ಕಲ್ಲು ಸಡಿಲಗೊಂಡು ವಾಹನಗಳ ಓಡಾಟದಿಂದ ಮತ್ತಷ್ಟು ಗುಂಡಿ ಬೀಳುವ ಸಾಧ್ಯತೆ ಹೆಚ್ಚು. ಚರಂಡಿ ನೀರು ಕಿ.ಮೀ.ದೂರ ಹರಿದು ಚೆನ್ನಾಗಿರುವ ರಸ್ತೆಯನ್ನು ಹಾಳು ಮಾಡುತ್ತಿದೆ.
ಜಡೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಡಾಂಬರು ಕಿತ್ತು ಹಲವು ವರ್ಷಗಳು ಕಳೆದಿವೆ. ಸರಿಯಾದ ಬಸ್ ವ್ಯವಸ್ಥೆಯೂ ಇಲ್ಲ. ಪಾಲಕರಿಗೆ ಮಳೆಗಾಲದಲ್ಲಿ ಮಕ್ಕಳನ್ನು ಶಾಲೆಗೆ ಕಳಿಹಿಸಲು ಭಯವಿದೆನೂರ್ ಅಹಮದ್ ಸ್ಥಳೀಯ
ಜಮೀನಿನ ದಾಖಲೆ ಪಡೆಯಲು ಸೊರಬಕ್ಕೆ 35 ಕಿ.ಮೀ. ದೂರ ಬರಬೇಕಿದೆ. ರಸ್ತೆ ಹಾಳಾಗಿರುವುದರಿಂದ ರೈತರಿಗೆ ಒಂದು ದಿನಸ ಕೆಲಸ ಹಾಳಾಗುತ್ತಿದೆ. ಗುಂಡಿ ತಪ್ಪಿಸಲು ಹೋಗಿ ಹಲವಾರು ಜನರಿಗೆ ಬಿದ್ದು ಗಾಯಗಾಳಾಗಿವೆ. ಸಂಬಂಧಪಟ್ಟವರು ಗಮನ ಹರಿಸಬೇಕುಸೋಮಶೇಖರ್ ತಲಗಡ್ಡೆ
ಗುಂಡಿ ಬಿದ್ದ ರಸ್ತೆಯಲ್ಲಿ ಬಸ್ ತಡವಾಗಿ ಚಲಿಸುವುದರಿಂದ ಕಾಲೇಜಿಗೆ ನಿಗದಿತ ಸಮಯಕ್ಕೆ ಬರಲು ಸಾಧ್ಯವಾಗುತ್ತಿಲ್ಲಚಂದನಾ ಪದವಿ ವಿದ್ಯಾರ್ಥಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.