ವಿ.
ತೀರ್ಥಹಳ್ಳಿ: ಒಂದೂವರೆ ತಿಂಗಳಿನಿಂದ ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ವಿದ್ಯುತ್ ಸಂಪರ್ಕ ಅತಂತ್ರ ಸ್ಥಿತಿಯಲ್ಲಿದೆ. ನಾಡಕಚೇರಿ (ಅಟಲ್ ಜೀ ಜನಸ್ನೇಹಿ ಕೇಂದ್ರ) ಸೇವೆಗಳಿಗಾಗಿ ನಾಗರಿಕರು ಪರದಾಡಬೇಕಾಗಿದೆ.
ಶಾಲೆ– ಕಾಲೇಜು ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಜನಸಾಮಾನ್ಯರು ಅಗತ್ಯ ದಾಖಲೆ ಪಡೆಯಲು ಸರದಿ ಸಾಲಿನಲ್ಲಿ ದಿನವಿಡೀ ಕಾಯುವಂತಾಗಿದೆ. ವಿದ್ಯುತ್ ಸಂಪರ್ಕದಲ್ಲಿ ಸಣ್ಣ ವ್ಯತ್ಯಾಸವಾದರೆ ಮತ್ತೊಂದು ಕೆಲಸದ ದಿನಕ್ಕಾಗಿ ಕಾಯಬೇಕಿದೆ.
ಮಳೆಗಾಲ ಆಗಿದ್ದರಿಂದ ವಿದ್ಯುತ್ ಸಂಪರ್ಕದಲ್ಲಿ ಬಾರಿ ವ್ಯತ್ಯಾಸವಾಗುತ್ತಿದೆ. ಜೋರು ಮಳೆ, ಮೆಸ್ಕಾಂನಿಂದ ತುರ್ತು ವಿದ್ಯುತ್ ಕೆಲಸ, ಪರಿವರ್ತಕಗಳ ಅಳವಡಿಕೆ ಮುಂತಾದ ಕಾರಣಗಳಿಂದ ಈಚೆಗೆ ಪಟ್ಟಣದಲ್ಲಿ ಸುಸೂತ್ರವಾಗಿ ವಿದ್ಯುತ್ ಸಂಪರ್ಕ ಲಭ್ಯವಾಗುತ್ತಿಲ್ಲ. ಇಂತಹ ಎಲ್ಲ ಸಂದರ್ಭಗಳಲ್ಲೂ ನಾಗರಿಕರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮನೆಗೆ ಹಿಂದಿರುಗುತ್ತಿದ್ದಾರೆ.
ವಂಶವೃಕ್ಷ, ಆದಾಯ ದೃಢೀಕರಣ, ಜಾತಿ ಪ್ರಮಾಣಪತ್ರ, ಸಂಧ್ಯಾ ಸುರಕ್ಷಾ, ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, ವಿಧವಾ ವೇತನ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಗಳಿಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಅಸ್ಥಿರವಾಗಿದೆ. ಪಹಣಿ ವಿಭಾಗದ ಪ್ರಿಂಟರ್ ಹಾಳಾಗಿದ್ದು, 3 ತಿಂಗಳಿನಿಂದ ಬದಲಿ ಪ್ರಿಂಟರ್ ವ್ಯವಸ್ಥೆ ಮಾಡಿಲ್ಲ.
ತಾಲ್ಲೂಕು ಕಚೇರಿಯ ಕೆಲಸ ಕಾರ್ಯ ಸುಗಮವಾಗಿ ನಡೆಸುವ ಉದ್ದೇಶದಿಂದ 10 ಕಿಲೋ ವಾಟ್ ಸಾಮರ್ಥ್ಯದ ಎರಡು ಜನರೇಟರ್‌ಗಳನ್ನು ಅಳವಡಿಸಲಾಗಿದೆ. ಆದರೆ, ವಿದ್ಯುತ್ ಇಲ್ಲದ ವೇಳೆಯಲ್ಲಿಯೂ ಜನರೇಟರ್ ಕೆಲಸ ಮಾಡುವುದಿಲ್ಲ. ಡೀಸೆಲ್ ಕೂಡ ಭರ್ತಿ ಮಾಡುವುದಿಲ್ಲ. ಬಿಸಿಲು ಮಳೆಗೆ ಜನರೇಟರ್ ಹಾಳಾಗುವ ಸ್ಥಿತಿಗೆ ತಲುಪಿದೆ. ಜನರೇಟರ್‌ಗಳಿಗೆ ಚಾವಡಿ ಇಲ್ಲದೆ ಇದೀಗ ತುಕ್ಕು ಹಿಡಿಯುತ್ತಿವೆ.
ಚಾರ್ಜ್ ಆಗದ ಯುಪಿಎಸ್:
ತಕ್ಷಣದ ವಿದ್ಯುತ್ ಸಮಸ್ಯೆ ಬಗೆಹರಿಸಲು ವಿವಿಧ ಕಚೇರಿಗಳಲ್ಲಿ ಯುಪಿಎಸ್ ಅಳವಡಿಸಲಾಗಿದೆ. ಪವರ್ ಬ್ಯಾಕ್ ಅಪ್ ಕೂಡ ಸರಿಯಾಗಿ ಚಾರ್ಜ್ ಆಗುತ್ತಿಲ್ಲ. ಒಂದೂವರೆ ತಿಂಗಳಿನಿಂದ ಯುಪಿಎಸ್ ಬ್ಯಾಟರಿ ಹಾಳಾಗಿದ್ದು, ಇಂದಿಗೂ ದುರಸ್ತಿಯಾಗಿಲ್ಲ. ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗಿದೆ. ಬ್ಯಾಟರಿ ದುರಸ್ತಿಗೆ ₹ 35,000 ಹಣ ಬೇಕಿದೆ. ಕಚೇರಿ ನಿರ್ವಹಣೆ ಅನುದಾನದ ಕೊರತೆಯಿಂದ ಸರಿಪಡಿಸಲು ಸಾಧ್ಯವಾಗಿಲ್ಲ ಎಂದು ತಾಲ್ಲೂಕು ಆಡಳಿತ ಹೇಳುತ್ತಿದೆ.
ಆಪರೇಟರ್ ಸಂಬಳ ವಿಳಂಬ:
ತಾಲ್ಲೂಕು ಕಚೇರಿಯಲ್ಲಿ ವಿವಿಧ ವಿಭಾಗದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಾಟಾ ಆಪರೇಟರ್‌ಗಳಿಗೆ ಕಳೆದ 3 ತಿಂಗಳಿನಿಂದ ಸಂಬಳ ಕೈಸೇರಿಲ್ಲ. ಉದ್ಯೋಗವನ್ನೇ ನೆಚ್ಚಿಕೊಂಡು ಬದುಕುತ್ತಿರುವ ಸಿಬ್ಬಂದಿಯ ಪಾಡು ಚಿಂತಾಜನಕವಾಗಿದೆ.
ಆಡಳಿತ ಕೇಂದ್ರ ಸ್ಥಾನದಲ್ಲಿ ನಾಗರಿಕರಿಗೆ ಸೇವೆ ಸಿಗುತ್ತಿಲ್ಲ. ಜನರೇಟರ್ ತುಕ್ಕು ಹಿಡಿಯುತ್ತಿದೆ. ಯುಪಿಎಸ್ ದುರಸ್ತಿಗೆ ಹಣವಿಲ್ಲದ ಸ್ಥಿತಿಯಲ್ಲಿ ಜಿಲ್ಲಾಡಳಿತ ತೆವಳುತ್ತಿದೆ–ವಾಸುದೇವ್ ಹಾರೋಗೊಳಿಗೆ ಬಿಜೆಪಿ ಮುಖಂಡ
ಯುಪಿಎಸ್ ಅಳವಡಿಸಿ 7 ವರ್ಷ ಕಳೆದಿದ್ದು ಅನೇಕ ಕಡೆ ಹಾಳಾಗಿವೆ. ಅನುದಾನ ಬಂದ ತಕ್ಷಣ ಸಮಸ್ಯೆ ಬಗೆಹರಿಸುತ್ತೇವೆ. ದುರಸ್ತಿಗೆ ತಹಶೀಲ್ದಾರ್‌ಗೆ ಸೂಚನೆ ನೀಡುತ್ತೇನೆ– ಗುರುದತ್ತ ಹೆಗಡೆ ಜಿಲ್ಲಾಧಿಕಾರಿ
ಅಧಿಕಾರ ವಹಿಸಿಕೊಂಡ ನಂತರ ಎರಡು ವಿಭಾಗಕ್ಕೆ ದಾನಿಗಳನ್ನು ಸಂಪರ್ಕಿಸಿ ಯುಪಿಎಸ್ ಹಾಕಿಸಿದ್ದೇನೆ. ನಾಡಕಚೇರಿ ಯುಪಿಎಸ್ ಹಾಳಾಗಿದ್ದು ಸರಿಪಡಿಸಲಾಗುವುದು-ಬಿ.ಜಿ.ಜಕ್ಕನಗೌಡರ್ ತಹಶೀಲ್ದಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.