ಭದ್ರಾವತಿ: ‘ನಮ್ಮ ಭಾಷೆ ಕಟ್ಟುವ ಕೆಲಸವನ್ನು ಮಕ್ಕಳು ಮಾಡಬೇಕು. ಈ ನಿಟ್ಟಿನಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನಗಳು ಪ್ರೇರಕ ಶಕ್ತಿ’ ಎಂದು ಆದಿಚುಂಚನಗಿರಿ ಪೀಠದ ಪ್ರಸನ್ನನಾಥ ಸ್ವಾಮೀಜಿ ಹೇಳಿದರು.
ಇಲ್ಲಿನ ಎಸ್ಎವಿ ಶಾಲಾ ಆವರಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ನೇತೃತ್ವದಲ್ಲಿ ಬುಧವಾರ ನಡೆದ ತಾಲ್ಲೂಕು 8ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ನಮ್ಮ ಮಕ್ಕಳು ಮಾತೃಭಾಷೆಯಲ್ಲಿ ಸ್ವಾಭಿಮಾನ, ಅನ್ಯ ಭಾಷೆಯಲ್ಲಿ ಅಭಿಮಾನ ಇಟ್ಟು ಕಲಿಯುವ ಕೆಲಸ ಮಾಡಬೇಕು. ಮನೆಯಲ್ಲಿ ಕನ್ನಡದಲ್ಲೇ ಮಾತನಾಡುವಂತೆ ಪ್ರೇರೇಪಿಸಬೇಕು. ವ್ಯವಹಾರದ ಅನುಕೂಲಕ್ಕೆ ತಕ್ಕಂತೆ ಭಾಷೆಯಲ್ಲಿ ಬದಲಾವಣೆಗೆ ಮುಂದಾಗಬೇಕು’ ಎಂದು ಕರೆ ನೀಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಮ್ಮೇಳನದ ಹಿಂದಿನ ಅಧ್ಯಕ್ಷೆ ಬಿ. ಮೇಘ, ‘ಮಾತೃ ಭಾಷೆ ಕಲಿಕೆ ಜತೆಯಲ್ಲಿ ಅವಶ್ಯ ಇರುವ ಇನ್ನಿತರೆ ಭಾಷೆ ಕಲಿಯಬೇಕು. ಆದರೆ ಹೆಚ್ಚಾಗಿ ವ್ಯವಹಾರ ಕನ್ನಡದಲ್ಲೇ ಇರಬೇಕು’ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಜಿಲ್ಲಾಧ್ಯಕ್ಷ ಡಿ. ಮಂಜುನಾಥ, ‘ಇಂತಹ ಸಮ್ಮೇಳನಗಳು ಪ್ರತಿಷ್ಟೆಗಾಗಿ ಅಥವಾ ಇನ್ನೊಬ್ಬರಿಂದ ಪ್ರಶಂಸೆ ಪಡೆಯಲು ಆಯೋಜನೆ ಮಾಡಿಲ್ಲ. ಬದಲಾಗಿ ಮಕ್ಕಳ ಪ್ರತಿಭೆ ಗುರುತಿಸುವ ಜತೆಗೆ ಅವರಲ್ಲಿ ಕನ್ನಡ ಸಾಹಿತ್ಯ ಚಿಂತನೆ ಹೆಚ್ಚಿಸುವ ನಿಟ್ಟಿನಲ್ಲಿ ನಡೆಸಲಾಗಿದೆ’ ಎಂದು ಹೇಳಿದರು.
ವೇದಿಕೆ ತಾಲ್ಲೂಕು ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ, ಸಮ್ಮೇಳನಾಧ್ಯಕ್ಷೆ ಭುವನಶ್ರೀ, ಎಂ.ಎಸ್. ಸುಧಾಮಣಿ, ಜಗದೀಶ್, ಪ್ರಾಚಾರ್ಯರಾದ ಹರಿಣಾಕ್ಷಿ ಇದ್ದರು.
ಕತೆ, ಕವನದಲ್ಲಿ ಪರಿಸರ, ವಿಜ್ಞಾನ, ಕೊರೊನಾ...: ಮಕ್ಕಳ ಮನದಿಂದ ಹೊರಹೊಮ್ಮಿದ ಕಾವ್ಯಧಾರೆಯಲ್ಲಿ ಪರಿಸರ, ಕೊರೊನಾ, ಅಮ್ಮ, ವಿಜ್ಞಾನ... ಕುರಿತ ಬಹುತೇಕ ವಿಚಾರಗಳು ಕವನ ಹಾಗೂ ಕತೆಗಳಲ್ಲಿ ಹೊರಹೊಮ್ಮಿದವು.
ಸಮ್ಮೇಳನದಲ್ಲಿ ಭಾಗವಹಿಸಿದ್ದ ವಿವಿಧ ಶಾಲೆಯ 40ಕ್ಕೂ ಅಧಿಕ ಮಂದಿ ಕವನ ಹಾಗೂ ಕತೆ ಹೇಳುವ ಮೂಲಕ ವೇದಿಕೆ ಮೇಲೆ ತಮ್ಮ ಪ್ರತಿಭೆ ಪ್ರದರ್ಶಿಸಿದರು.
ಬಹುತೇಕ ಕವನಗಳು ಕೊರೊನಾ ಕುರಿತಾಗಿದ್ದರೆ, ಅಮ್ಮನ ಪ್ರೀತಿ, ಮೌನ, ಆಕೆಯ ಮಡಿಲಿನ ಚಿತ್ರಣ ಕಟ್ಟುವಲ್ಲಿನ ಕವನ ಸಾಲುಗಳು ನೆರೆದಿದ್ದವರ ಮನ ಗೆದ್ದಿತು. ಕತೆಗಳನ್ನು ಹೇಳಿದ ಬಹುತೇಕ ಮಕ್ಕಳು ಪರಿಸರ, ವಾಮಾಚಾರ, ಆರೋಗ್ಯದ ಚಿತ್ರಣ ತೆರೆದಿಡುವ ಪ್ರಯತ್ನ ನಡೆಸಿದ್ದು ವಿಶೇಷ ಎನಿಸಿತು.
ವಿದ್ಯಾಗಮ ಯಶಸ್ವಿ: ಪ್ರಚಲಿತ ವಿದ್ಯಮಾನ ಕುರಿತಾಗಿನ ಗೋಷ್ಠಿಯಲ್ಲಿ ಮಾತನಾಡಿದ ಮಕ್ಕಳು ವಿಶೇಷವಾಗಿ ವಿದ್ಯಾಗಮ ಜಾರಿಯಲ್ಲಿ ಕಂಡ ಹೊಸತನ, ಅದರಿಂದ ಸಿಕ್ಕಿರುವ ಯಶಸ್ಸು ಕುರಿತು ಅನುಭವ ಹಂಚಿಕೊಂಡರು.
‘ವಿದ್ಯಾಗಮ ನಮ್ಮ ಕಲಿಕೆ ಜತೆಗೆ ನಾವು ಮತ್ತೊಬ್ಬರಿಗೆ ಕಲಿಸುವ ವಿಧಾನ ಅವಕಾಶ ನೀಡಿತು. ಇದರಿಂದ ನಮ್ಮ ಶಾಲೆಯಿಲ್ಲ ಎಂಬ ಕೊರತೆ ನೀಗಿದೆ’ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.