ಶಿವಮೊಗ್ಗ: ಸೋಗಾನೆಯ ನೂತನ ವಿಮಾನ ನಿಲ್ದಾಣವನ್ನು ಫೆ.27ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ತಿಳಿಸಿದರು.
ವಿಮಾನ ನಿಲ್ದಾಣದ ಆವರಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.
ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮ ಜಿಲ್ಲಾಡಳಿತದಿಂದ ಆಯೋಜಿಸಿದೆ. 1 ಲಕ್ಷ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಎರಡು ಕಡೆ ಊಟದ ವ್ಯವಸ್ಥೆ ಇದ್ದು, ಒಂದೊಂದು ಕಡೆ ತಲಾ 100 ಕೌಂಟರ್‌ಗಳನ್ನು ತೆರೆಯಲಾಗುವುದು. ಕಾರ್ಯಕ್ರಮದ ವೀಕ್ಷಣೆಗೆ ನಾಲ್ಕು ಕಡೆ ವಿಶಾಲವಾದ ಪ್ರೊಜೆಕ್ಟರ್‌ಗಳ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಅಗತ್ಯವಾದ ಎಲ್ಲ ಸಿದ್ಧತೆಗಳೊಂದಿಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ
ಎಂದರು.
ಯಾರು ಕೂಡ ಕಪ್ಪು ಬಣ್ಣದ ಬಟ್ಟೆ, ಕರ್ಚೀಫ್‍ಗಳನ್ನು ಧರಿಸಿ ಬರುವಂತಿಲ್ಲ. ನೀರಿನ ಬಾಟಲ್, ಹ್ಯಾಂಡ್ ಬ್ಯಾಗ್ ಮತ್ತು ಕಪ್ಪು ಕರ್ಚೀಫ್‍ಗಳನ್ನು ತರುವಂತಿಲ್ಲ. ಮೊಬೈಲ್ ಮತ್ತು ಪರ್ಸ್‌ಗೆ ಮಾತ್ರ ಅವಕಾಶ ಇರುತ್ತದೆ. ಕಾರ್ಯಕ್ರಮಕ್ಕೆ ಬರುವವರಿಗೆ ಎರಡು ಹಂತದ ತಪಾಸಣೆ ಇರುತ್ತದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾತನಾಡಿ, ಕಾರ್ಯಕ್ರಮದ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಎಲ್ಲ ಕಡೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಎಲ್ಲ ಸಾರ್ವಜನಿಕರು ಬೆಳಿಗ್ಗೆ 10 ಗಂಟೆಯ ಒಳಗೆ ಕಾರ್ಯಕ್ರಮದ ಆವರಣದೊಳಗೆ ಬರಬೇಕು. ವಾಹನಗಳ ನಿಲುಗಡೆಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇದ್ದು, ನಿಗದಿಪಡಿಸಿದ ಸ್ಥಳದಲ್ಲಿಯೇ ವಾಹನಗಳನ್ನು ನಿಲ್ಲಿಸಬೇಕು.
***
ಕಾರ್ಯಕ್ರಮಕ್ಕೆ ಬರಲು ವಾಹನಗಳ ಮಾರ್ಗ
• ಕಾರ್ಯಕ್ರಮಕ್ಕೆ ಬರುವ ವಿವಿಐಪಿ ಪಾಸ್ ಹೊಂದಿರುವ ಗಣ್ಯರು ಶಿವಮೊಗ್ಗ ನಗರದಿಂದ ಬೈಪಾಸ್–ಊರಗಡೂರು ಸರ್ಕಲ್– ಸೂಳೆಬೈಲು– ಮತ್ತೂರು ರಸ್ತೆ ಎಡಭಾಗಕ್ಕೆ ತಿರುವು ಪಡೆದುಕೊಂಡು ಮಂಡೇನಕೊಪ್ಪ ಮುಖಾಂತರ ಸೋಗಾನೆ ವಿಮಾನ ನಿಲ್ದಾಣ ತಲುಪಬೇಕು.
• ತೀರ್ಥಹಳ್ಳಿ ಕೊಪ್ಪ, ಶೃಂಗೇರಿ, ಎನ್.ಆರ್.ಪುರ ಭಾಗದಿಂದ ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕ ವಾಹನಗಳು ತೀರ್ಥಹಳ್ಳಿ ರಸ್ತೆ– ಮುಡುಬ ಬಲಕ್ಕೆ ತಿರುಗಿ ಶಂಕರಪುರ– ಉಂಬ್ಳೇಬೈಲು ಮುಖಾಂತರ ಲಕ್ಕಿನಕೊಪ್ಪ ಸರ್ಕಲ್‍ಗೆ ಬಂದು ಸೇರುವುದರಿಂದ ಲಕ್ಕಿನಕೊಪ್ಪ ಮತ್ತು ಸೋಗಾನೆ ಏರ್‌ಪೋರ್ಟ್ ನಡುವಿನ ಗುರುತಿಸಿದ ಸ್ಥಳದಲ್ಲಿ ಪಾರ್ಕಿಂಗ್ ಮಾಡಬೇಕು.
• ಸಾಗರ, ಶಿಕಾರಿಪುರ, ಸೊರಬ, ಹೊಸನಗರದಿಂದ ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕ ವಾಹನಗಳು ಶಿವಮೊಗ್ಗ ನಗರದಿಂದ ಅಶೋಕ ಸರ್ಕಲ್– ಬಿ.ಎಚ್.ರಸ್ತೆ– ಎಎ ಸರ್ಕಲ್– ಶಂಕರಮಠ ಸರ್ಕಲ್– ಹೊಳೆಹೊನ್ನೂರು ಸರ್ಕಲ್– ಎಂ.ಆರ್.ಎಸ್ ಸರ್ಕಲ್‍ಗೆ ಬಂದು ಬಲಕ್ಕೆ ತಿರುಗಿ ಸಂತೇಕಡೂರು ಸೋಗಾನೆ ಏರ್‌ಪೋರ್ಟ್ ನಡುವೆ ಗುರುತಿಸಿದ ಸ್ಥಳದಲ್ಲಿ ಪಾರ್ಕಿಂಗ್ ಮಾಡಬೇಕು.
• ಶಿಕಾರಿಪುರ, ಹೊನ್ನಾಳಿ, ದಾವಣಗೆರೆ ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ವಾಹನಗಳು ಎಂ.ಆರ್.ಎಸ್ ಸರ್ಕಲ್‍ಗೆ ಬಂದು ಬಲಕ್ಕೆ ತಿರುಗಿ ಸಂತೇಕಡೂರು ಸೋಗಾನೆ ಏರ್‌ಪೋರ್ಟ್ ನಡುವೆ ಗುರುತಿಸಿದ ಸ್ಥಳದಲ್ಲಿ ಪಾರ್ಕಿಂಗ್ ಮಾಡಬೇಕು.
• ಶಿವಮೊಗ್ಗ ನಗರದಿಂದ ಬರುವ ಸಾರ್ವಜನಿಕ ವಾಹನಗಳು ಎಂಆರ್‌ಎಸ್ ಸರ್ಕಲ್‌ಗೆ ಬಂದು ಬಲಕ್ಕೆ ತಿರುಗಿ ಸಂತೇಕಡೂರು ಸೋಗಾನೆ ಏರ್‌ಪೋರ್ಟ್ ನಡುವೆ ಗುರುತಿಸಿದ ಸ್ಥಳದಲ್ಲಿ ಪಾರ್ಕಿಂಗ್ ಮಾಡಬೇಕು.
• ತರೀಕೆರೆ, ಭದ್ರಾವತಿ, ಕಡೂರು, ಚಿಕ್ಕಮಗಳೂರು ಭಾಗಗಳಿಂದ ಬರುವ ಸಾರ್ವಜನಿಕ ವಾಹನಗಳು ಭದ್ರಾವತಿ ನಗರದ ಕೃಷ್ಣಪ್ಪ ಸರ್ಕಲ್‍ನಿಂದ ಎಡಕ್ಕೆ ತಿರುಗಿ–ಹಿರಿಯೂರು ಸರ್ಕಲ್– ತಾರೀಕಟ್ಟೆ ಸರ್ಕಲ್– ಎಚ್.ಕೆ.ಜಂಕ್ಷನ್– ಲಕ್ಕಿನಕೊಪ್ಪ ಸರ್ಕಲ್‍ಗೆ ಬಂದು ಸೇರಬೇಕು. ನಂತರ ಲಕ್ಕಿನಕೊಪ್ಪ ಮತ್ತು ಸೋಗಾನೆ ಏರ್‌ಪೋರ್ಟ್ ನಡುವಿನ ಗುರುತಿಸಿದ ಸ್ಥಳದಲ್ಲಿ ಪಾರ್ಕಿಂಗ್ ಮಾಡಬೇಕು.
***
ಶೂನ್ಯ ಸಂಚಾರ – ಪರ್ಯಾಯ ಮಾರ್ಗ ಅಧಿಸೂಚನೆ
ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರಿಂದ ಫೆ.27ರಂದು ಸೋಗಾನೆಯ ವಿಮಾನ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸುಗಮ ಸಂಚಾರದ ದೃಷ್ಟಿಯಿಂದ ಬದಲಿ ಮಾರ್ಗಗಳ ಅಧಿಸೂಚನೆಯನ್ನು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಹೊರಡಿಸಿದ್ದಾರೆ.
ಶೂನ್ಯ ಸಂಚಾರ ರಸ್ತೆ ಮಾರ್ಗ: ಫೆಬ್ರುವರಿ 26 ಮತ್ತು 27ರಂದು ಬೆಳಿಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಎಂ.ಆರ್.ಎಸ್ ಸರ್ಕಲ್‍ನಿಂದ ಎನ್.ಆರ್.ಪುರ ರಸ್ತೆ ಲಕ್ಕಿನಕೊಪ್ಪ ಸರ್ಕಲ್‍ವರೆಗೆ, ಮತ್ತೂರು–ಮಂಡೇನಕೊಪ್ಪ– ಸೋಗಾನೆ ವಿಮಾನ ನಿಲ್ದಾಣದವರೆಗೆ ಶೂನ್ಯ ಸಂಚಾರ ರಸ್ತೆ ಎಂದು ಅಧಿಸೂಚಿಸಲಾಗಿದೆ.
ಸಾರ್ವಜನಿಕ ವಾಹನಗಳ ಮಾರ್ಗ ಬದಲಾವಣೆ:
• ಎನ್.ಆರ್.ಪುರದಿಂದ–ಭದ್ರಾವತಿ ಕಡೆಗೆ ಹೋಗುವ ವಾಹನಗಳು ಉಂಬ್ಳೆಬೈಲ್–ಹುಣಸೆಕಟ್ಟೆ–ಜಂಕ್ಷನ್ ಮೂಲಕ ಭದ್ರಾವತಿಗೆ ಹೋಗಬೇಕು.
• ಶಿಕಾರಿಪುರ–ಹೊನ್ನಾಳಿ–ದಾವಣಗೆರೆ ಕಡೆಯಿಂದ ಎನ್.ಆರ್.ಪುರಕ್ಕೆ ಹೋಗುವ ವಾಹನಗಳು ಶಿವಮೊಗ್ಗ ನಗರಕ್ಕೆ ಬಂದು ತೀರ್ಥಹಳ್ಳಿ ರಸ್ತೆ (ಎನ್.ಟಿ.ರಸ್ತೆ) ಮೂಲಕ ಎನ್.ಆರ್.ಪುರಕ್ಕೆ ಹೋಗಬೇಕು.
• ತೀರ್ಥಹಳ್ಳಿ ರಸ್ತೆ ಕಡೆಯಿಂದ ಸಾಗರ ರಸ್ತೆ ಕಡೆಗೆ ಹೋಗುವ ಸಾರ್ವಜನಿಕ ವಾಹನಗಳು ನ್ಯೂ ಮಂಡ್ಲಿ ಸರ್ಕಲ್–ಗೋಪಾಳ ಸರ್ಕಲ್–ಆಲ್ಕೊಳ ಸರ್ಕಲ್ ಮಾರ್ಗವಾಗಿ ಸಾಗರ ರಸ್ತೆಗೆ ಬಂದು ತಲುಪಬೇಕು.
• ಸಾಗರ ರಸ್ತೆ ಕಡೆಯಿಂದ ತೀರ್ಥಹಳ್ಳಿ ರಸ್ತೆ ಕಡೆಗೆ ಹೋಗುವ ಸಾರ್ವಜನಿಕ ವಾಹನಗಳು ಆಲ್ಕೋಳ ಸರ್ಕಲ್–ಗೋಪಾಳ ಸರ್ಕಲ್–ನ್ಯೂ ಮಂಡ್ಲಿ ಸರ್ಕಲ್ ಮಾರ್ಗವಾಗಿ ತೀರ್ಥಹಳ್ಳಿ ರಸ್ತೆ ತಲುಪಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.