ADVERTISEMENT

ರಂಗಾಯಣ: ನಾಟಕ ಅವಲೋಕನ ಕಾರ್ಯಾಗಾರ

-

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 15:53 IST
Last Updated 22 ಅಕ್ಟೋಬರ್ 2024, 15:53 IST
ಪ್ರಸನ್ನ ಡಿ. ಸಾಗರ
ಪ್ರಸನ್ನ ಡಿ. ಸಾಗರ   

ಶಿವಮೊಗ್ಗ: ಕಾಲೇಜುಗಳಲ್ಲಿ ಓದುತ್ತಿರುವ ಸೃಜನಶೀಲ ಬರಹಗಾರರನ್ನು ಗುರುತಿಸಿ ಅವರಿಗೆ ನಾಟಕ ವಿಶ್ಲೇಷಣೆ ಹೇಳಿಕೊಡಲು ರಂಗಾಯಣವು ‘ನಾಟಕ ಅವಲೋಕನ ಕಾರ್ಯಾಗಾರ’ ಹಮ್ಮಿಕೊಂಡಿದೆ ಎಂದು ಸಂಸ್ಥೆಯ ನಿರ್ದೇಶಕ ಪ್ರಸನ್ನ ಡಿ. ಸಾಗರ ತಿಳಿಸಿದರು.

ಯುವಕರ ಬರವಣಿಗೆಗೆ ಇನ್ನೂ ಹೆಚ್ಚು ಬಲ ಕೊಡುವುದೇ ಈ ಕಾರ್ಯಾಗಾರದ ಉದ್ದೇಶ. ಆ ಕಾರಣದಿಂದಾಗಿ ಅಕ್ಟೋಬರ್ 24, 25 ಮತ್ತು 26ರಂದು ಬೆಳಿಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಶಿವಮೊಗ್ಗದ ಪದವಿ, ಸ್ನಾತಕೋತ್ತರ ಪದವಿ ಹಾಗೂ ಬಿ.ಇಡಿ ವಿದ್ಯಾರ್ಥಿಗಳಿಗಾಗಿ ನಾಟಕ ಅವಲೋಕನ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಕಾರ್ಯಾಗಾರದಲ್ಲಿ ನುರಿತ ರಂಗಕರ್ಮಿಗಳು, ರಂಗ ವಿಮರ್ಶಕರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ನಾಟಕ ಓದು, ನಾಟಕ ನೋಡುವ ಕ್ರಮ, ರಂಗನೋಟ, ನಾಟ್ಯಧರ್ಮ, ರಂಗ ಅವಲೋಕನ ಇತರೆ ವಿಷಯಗಳ ಬಗ್ಗೆ ಚರ್ಚಿಸಲಾಗುವುದು. ಕಾರ್ಯಾಗಾರವನ್ನು ಅ.24ರಂದು ಬೆಳಿಗ್ಗೆ 10ಕ್ಕೆ ಹಿರಿಯ ರಂಗಕರ್ಮಿ ನಟರಾಜ್ ಹೊನ್ನವಳ್ಳಿ ಉದ್ಘಾಟಿಸಲಿದ್ದಾರೆ. ರಂಗಾಯಣ ನಿರ್ದೇಶಕ ಪ್ರಸನ್ನ ಡಿ. ಸಾಗರ ಅಧ್ಯಕ್ಷತೆ ವಹಿಸುವರು. ಅತಿಥಿಯಾಗಿ ರಂಗಕರ್ಮಿ ಕೊಟ್ರಪ್ಪ ಹಿರೇಮಾಗಡಿ ಪಾಲ್ಗೊಳ್ಳುವರು.

ADVERTISEMENT

ಅ.26ರಂದು ಸಂಜೆ 5.30ಕ್ಕೆ ಸಮಾರೋಪದಲ್ಲಿ ಕಾರ್ಕಳದ ಯಕ್ಷ ರಂಗಾಯಣದ ನಿರ್ದೇಶಕ ವೆಂಕಟರಮಣ ಐತಾಳ, ರಂಗಕರ್ಮಿ ಹೊನ್ನಾಳಿ ಚಂದ್ರಶೇಖರ್ ಪಾಲ್ಗೊಳ್ಳುವರು. ರಂಗಾಯಣ ಆಡಳಿತಾಧಿಕಾರಿ ಎ.ಸಿ. ಶೈಲಜಾ, ಸಹ್ಯಾದ್ರಿ ಕಲಾ ಕಾಲೇಜಿನ ಪ್ರೊ. ಮೇಟಿ ಮಲ್ಲಿಕಾರ್ಜುನ, ಸಹ್ಯಾದ್ರಿ ಕಲಾ ತಂಡದ ಮುಖ್ಯಸ್ಥ ಜಿ.ಆರ್‌. ಲವ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ರಂಗಾಯಣ ಆಡಳಿತಾಧಿಕಾರಿ ಎ.ಸಿ.ಶೈಲಜಾ, ಜಿ.ಆರ್‌.ಲವ ಉಪಸ್ಥಿತರಿದ್ದರು.

ನಾಟಕ ಪ್ರದರ್ಶನ

ವಿಶ್ಲೇಷಣೆ ಸಂವಾದ ಅ.24ರಂದು ಬೆಳಿಗ್ಗೆ 11ರಿಂದ ‘ನಾಟಕದ ಪ್ರವೇಶ ಮತ್ತು ಸಂವಿಧಾನ’ ವಿಚಾರ ಕುರಿತು ರಂಗನಿರ್ದೇಶಕ ನಟರಾಜ್ ಹೊನ್ನವಳ್ಳಿ ಮಾತನಾಡುವರು. ಮಧ್ಯಾಹ್ನ 12.30ರಿಂದ 1ರವರೆಗೆ ಸಂವಾದ ಮಧ್ಯಾಹ್ನ 2ರಿಂದ 3.30ರವರೆಗೆ ‘ರಂಗ ಪಠ್ಯಗಳ ವಿಶ್ಲೇಷಣೆ ಹಾಗೂ ವಿಸ್ತರಣೆ’ ಕುರಿತು ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಾಹಕ ಕಾಲೇಜಿನ ಪ್ರೊ.ಟಿ.ಅವಿನಾಶ್ ವಿಚಾರ ಮಂಡಿಸುವರು. ಮಧ್ಯಾಹ್ನ 3.45ರಿಂದ ಸಂಜೆ 6ರವರೆಗೆ ‘ಗುಣಮುಖ‘ ನಾಟಕ ಪ್ರದರ್ಶನ ನಡೆಯಲಿದೆ. ಪ್ರೊ.ಮೇಟಿ ಮಲ್ಲಿಕಾರ್ಜುನ ಸಂವಾದ ನಡೆಸಿಕೊಡುವರು. ಅ.25ರಂದು ಬೆಳಿಗ್ಗೆ 10ರಿಂದ 10.30ರವರೆಗೆ ‘ಗುಣಮುಖ’ ನಾಟಕದ ಕುರಿತು ಮಾತುಕತೆ ಬೆಳಿಗ್ಗೆ 10.40ರಿಂದ 12.15ರವರೆಗೆ ಪತ್ರಕರ್ತೆ ಪ್ರೀತಿ ನಾಗರಾಜ್‌ ಅವರಿಂದ ನಾಟಕ ವಿಶ್ಲೇಷಣೆ ಹಾಗೂ ವಿಮರ್ಶಾತ್ಮಕ ನೋಟ ಮಧ್ಯಾಹ್ನ 2ರಿಂದ 3.30ರವರೆಗೆ ಹಿರಿಯ ರಂಗಕರ್ಮಿ ಇಕ್ಬಾಲ್‌ ಅವರಿಂದ ನಾಟಕದ ಕಟ್ಟುವಿಕೆಯಲ್ಲಿ ನಿರ್ದೇಶಕ ಹಾಗೂ ನೇಪಥ್ಯ ಕುರಿತು ವಿಷಯ ಮಂಡನೆ. 3.45ರಿಂದ ಸಂಜೆ 6ರವರೆಗೆ ‘ಅಗ್ನಿ ಮತ್ತು ಮಳೆ’ ನಾಟಕ ಪ್ರದರ್ಶನ ಕುರಿತು ಸಂವಾದ ಇರಲಿದೆ. ಅ.26ರಂದು ಬೆಳಿಗ್ಗೆ 10.45ರಿಂದ ಮಧ್ಯಾಹ್ನ 12.15ರವರೆಗೆ ನಾಟಕದ ವಿಶ್ಲೇಷಣೆಯಲ್ಲಿ ಬಹು ಮಾಧ್ಯಮಗಳ ಬಳಕೆ ಕುರಿತು ಬೆಂಗಳೂರಿನ ವರ್ಡ್ವೈಡ್‌ ಲಾಂಗ್ವೇಜ್ ಲ್ಯಾಬ್‌ನ ಸಿಇಒ ಅವಿನಾಶ್ ಹೆಗ್ಗೋಡು ವಿಚಾರ ಮಂಡಿಸುವರು. ಮಧ್ಯಾಹ್ನ 2ರಿಂದ 3.30 ರವರೆಗೆ ನಾಟಕದ ವಿಷಯ ವಸ್ತುವಿನ ಗ್ರಹಿಕೆ ಕುರಿತು ಕಾರ್ಕಳ ಯಕ್ಷ ರಂಗಾಯಣ ನಿರ್ದೇಶಕ ವೆಂಕಟರಮಣ ವಿಚಾರ ಮಂಡಿಸುವರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.