ಉಡುತಡಿ (ಶಿರಾಳಕೊಪ್ಪ): ಉಪಚುನಾವಣೆಗೂ ಪೂರ್ವದಲ್ಲಿಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಂಚಮಸಾಲಿ ಲಿಂಗಾಯತರಿಗೆ 2 ಎ ಮೀಸಲಾತಿ ನೀಡಬೇಕು. ಇಲ್ಲದಿದ್ದರೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಕೂಡಲಸಂಗಮ ಪಂಚಮಸಾಲಿ ಲಿಂಗಾಯತ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ಅಕ್ಕಮಹಾದೇವಿಯ ಜನ್ಮಸ್ಥಳವಾದ ಉಡುತಡಿಯಲ್ಲಿ ಬುಧವಾರ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಲಿಂಗಾಯತ ಪಂಚಮಸಾಲಿ, ಲಿಂಗಾಯತ ಗೌಡ, ಮಲೇಗೌಡ, ದೀಕ್ಷಾ ಲಿಂಗಾಯತರಿಗೆ 2 ಎ ಹಾಗೂ ಎಲ್ಲಾ ಲಿಂಗಾಯತರಿಗೆ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿಗಾಗಿ ಹೋರಾಟ ಹಮ್ಮಿಕೊಳ್ಳಲಾಗಿದೆ. ಹಳ್ಳಿಗಳಲ್ಲಿ ಪ್ರತಿಜ್ಞಾ ಪಂಚಾಯತ್ ಮುಂದುವರೆಸುವ ಮೂಲಕ ಹೋರಾಟದ ಕಾವನ್ನು ಹೆಚ್ಚಿಸಬೇಕಾಗಿದೆ ಎಂದು ಹೇಳಿದರು.
1 ಕೋಟಿ 35 ಲಕ್ಷದಷ್ಟು ಸಂಖ್ಯೆಯ ಪಂಚಮಸಾಲಿ ಲಿಂಗಾಯತರು ಇದ್ದರೂ ಎಲ್ಲ ಲಾಭವನ್ನು ಅಲ್ಪಸಂಖ್ಯಾತ ಲಿಂಗಾಯತರು ಕಬಳಿಸುತ್ತಿದ್ದಾರೆ. ಉನ್ನತ ಹುದ್ದೆ, ಅಧಿಕಾರಗಳು ಅವರಿಗೆ ಲಭಿಸುತ್ತಿದೆ. ಹಾಗಾಗಿ, ಪಂಚಮಸಾಲಿ ಪಂಗಡಗಳು ಒಂದಾಗಿ ಹೋರಾಟ ಮಾಡುವ ಅವಶ್ಯಕತೆ ಇದೆ ಎಂದರು.
ಪಂಚಮಸಾಲಿ ಸಮಾಜದ ಅಕ್ಕಮಹಾದೇವಿಯ ಜನ್ಮಸ್ಥಳವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಪಡಿಸುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಬಳಿಕ ಸ್ವಾಮೀಜಿ ಶಿಕಾರಿಪುರ ತಾಲ್ಲೂಕಿನ ಬಿಸಿಲಹಳ್ಳಿ, ತಾಳಗುಂದ, ಮಲ್ಲೇನಹಳ್ಳಿ, ಕೊರಟಿಗೆರೆ, ಶಿರಾಳಕೊಪ್ಪ ಸೇರಿ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದರು.
ಬೆಂಗಳೂರು ಬಿಬಿಎಂಪಿ ಸದಸ್ಯ ನಟರಾಜ್, ದಾವಣಗೆರೆ ಪಾಲಿಕೆ ಸದಸ್ಯ ಶಾಂತಕುಮಾರ್ ಸೋಗಿ, ಸೊರಬದ ಅಶೋಕ ಪಾಟೀಲ್ ಮಾತನಾಡಿದರು.
ಜಿಲ್ಲಾ ಪಂಚಮಸಾಲಿ ಸಮಾಜದ ಅಧ್ಯಕ್ಷ ಮಾಲತೇಶ್, ಅನಿಲ್, ರುದ್ರಗೌಡ ಪಾಟೀಲ್ ಪರಮೇಶ್ವರಪ್ಪ, ಗಂಗಾಧರ ಶೆಟ್ಟರ್ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.