ADVERTISEMENT

ಖಾಸಗಿ ಬಸ್ ಸೇವೆ ಸ್ಥಗಿತ; ನಿತ್ಯ ತೊಂದರೆ

ಶಿರಾಳಕೊಪ್ಪದಿಂದ ಚಿಕ್ಕೆರೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಬಸ್‌

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2024, 7:12 IST
Last Updated 2 ಆಗಸ್ಟ್ 2024, 7:12 IST
ನಾಗರಾಜ್ ನಾಯ್ಕ
ನಾಗರಾಜ್ ನಾಯ್ಕ   

ಶಿರಾಳಕೊಪ್ಪ: ಕೆಎಸ್‌ಆರ್‌ಟಿಸಿ ಬಸ್‌ ಸೌಲಭ್ಯವೇ ಇಲ್ಲದ ಸಮೀಪದ ತಾಳಗುಂದ, ಬಿಳಿಕಿ, ಇನಾಂ ಅಗ್ರಹಾರ, ಮುಚಡಿ ಮಾರ್ಗವಾಗಿ ಚಿಕ್ಕೆರೂರು ಕಡೆಗೆ ಸಂಪರ್ಕ ಕಲ್ಪಿಸುವ ಸಂಪರ್ಕ ಸಾಧನವಾಗಿದ್ದ ಖಾಸಗಿ ಬಸ್ ಸೇವೆಯನ್ನು ಸ್ಥಗಿತಗೊಳಿಸಿದ್ದರಿಂದ ಸ್ಥಳೀಯರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಶಕ್ತಿ ಯೋಜನೆ ಅಡಿ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡಿದ ನಂತರ ಪ್ರಯಾಣಿಕರ ಕೊರತೆ ಎದುರಾಗಿ ಖಾಸಗಿ ಬಸ್‌ ಮಾಲೀಕರು ನಷ್ಟ ಅನುಭವಿಸಿ ಬಸ್‌ ಸಂಚಾರ ನಿಲ್ಲಿಸಿದ್ದಾರೆ. ಇದರಿಂದಾಗಿ ನಿತ್ಯದ ಕೆಲಸ– ಕಾರ್ಯಗಳಿಗೆ ಖಾಸಗಿ ಬಸ್‌ ಅವಲಂಬಿಸಿರುವ ಗ್ರಾಮೀಣ ನಿವಾಸಿಗಳಿಗೆ ಸಂಕಷ್ಟ ಎದುರಾಗಿದೆ.

6 ತಿಂಗಳ ಅವಧಿಯಲ್ಲಿ ಇಲ್ಲಿದ್ದ 2 ಖಾಸಗಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಈ 2 ಬಸ್‌ಗಳು ನಿತ್ಯ 8 ಟ್ರಿಪ್ ಸಂಚಾರ ಮಾಡುತ್ತಿದ್ದವು. ಇದರಿಂದ ಈ ಭಾಗದ ಜನರಿಗೆ ಅನುಕೂಲವಾಗಿತ್ತು. ಬಸ್ ಸೇವೆಯ ಸ್ಥಗಿತದಿಂದ ಜನರು ತಮ್ಮ ನಿತ್ಯದ ಕಾರ್ಯಗಳಿಗೆ ಪರ್ಯಾಯ ಮಾರ್ಗಗಳನ್ನು ಹುಡುಕಬೇಕಾಗಿದೆ. ಆಟೊ ಅಥವಾ ಸ್ವಂತ ವಾಹನಗಳಲ್ಲಿ ಕೆಲವರು ಪ್ರಯಾಣಿಸುತ್ತಿದ್ದಾರೆ. ಇದರಿಂದ ಸಮಯ ಮತ್ತು ಹಣದ ವ್ಯಯ ಹೆಚ್ಚಾಗುತ್ತಿದೆ. ಮಳೆಗಾಲದಲ್ಲಿ ಬೈಕ್ ಸಂಚಾರ ಸಹ ಸುರಕ್ಷಿತವಲ್ಲ. ಹಾಗಾಗಿ, ಬಸ್ ಸೇವೆ ಪುನರಾರಂಭಿಸಲು ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ADVERTISEMENT

ಬಸ್‌ ಸೇವೆ ಪುನರಾರಂಭಿಸಲು ಈ ಭಾಗದ ಸಾರ್ವಜನಿಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕೆಎಸ್ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಹಾಗೂ ಸಂಬಂಧಪಟ್ಟ ಇಲಾಖೆಗೆ ಮತ್ತು ಸ್ಥಳೀಯ ಶಾಸಕರಿಗೆ ಮನವಿ ಸಲ್ಲಿಸಿದ್ದಾರೆ.

‘ಖಾಸಗಿ ಬಸ್‌ ಬಂದ್‌ ಆಗಿದೆ, ಸರ್ಕಾರಿ ಬಸ್‌ ನಿಗದಿತ ಸಮಯಕ್ಕೆ ಬಾರದೇ ಇರುವುದರಿಂದ ಕಚೇರಿ ಕೆಲಸಗಳು ಆಗುತ್ತಿಲ್ಲ. ಶಿರಾಳಕೊಪ್ಪ ಹಾಗೂ ಚಿಕ್ಕೇರೂರಿಗೆ ಹೋಗುವ ಮತ್ತು ಬರುವ ವಿದ್ಯಾರ್ಥಿಗಳಿಗೆ, ಪ್ರಯಾಣಿಕರಿಗೆ ತೊಂದರೆ ಆಗಿದೆ. ಪ್ರಯಾಣಿಕರಿಗೆ ಅವಶ್ಯಕತೆ ಇರುವ ವೇಳಾಪಟ್ಟಿ ಸಿದ್ಧಪಡಿಸಿ ಕೆಎಸ್‌ಆರ್‌ಟಿಸಿಗೆ ಮನವಿ ಮಾಡಲಾಗಿದೆ. ಇನ್ನೂ ಈ ಭಾಗದ ಜನರಿಗೆ ಪರಿಹಾರ ಲಭಿಸಿಲ್ಲ’ ಎಂದು ಇನಾಂ ಅಗ್ರಹಾರ ಮುಚಡಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾಗರಾಜ್‌ ನಾಯ್ಕ ದೂರಿದರು.

‘ಈ ಮಾರ್ಗದಲ್ಲಿ ಸಂಚರಿಸುವ ಸಾರಿಗೆ ಸಂಸ್ಥೆ ಬಸ್‌ ಒಂದು ದಿನ ಬರುತ್ತೆ, ಮತ್ತೊಂದು ದಿನ ಬರುವುದಿಲ್ಲ. ಬಸ್‌ ಬಂದಾಗ ವಿದ್ಯಾರ್ಥಿಗಳು, ವೃದ್ಧರು, ಮಹಿಳೆಯರು ಹತ್ತಲು ಸಾಧ್ಯವಾಗದಷ್ಟು ತುಂಬಿರುತ್ತದೆ. ವಿದ್ಯಾರ್ಥಿಗಳು ಅವಘಡಕ್ಕೆ ತುತ್ತಾದರೆ ಹೊಣೆ ಯಾರು’ ಎಂದು ತಾಳಗುಂದ ಗ್ರಾಮಾಭಿವೃದ್ಧಿ ಸಮಿತಿ ಕಾರ್ಯದರ್ಶಿ ಅಶೋಕ್‌ ಕಾಡೇರ್‌ ಪ್ರಶ್ನಿಸಿದರು.

ಶಿರಾಳಕೊಪ್ಪ ತಾಳಗುಂದ ಬಿಳಿಕಿ ಅಗ್ರಹಾರ ಮುಚಡಿ ಚಿಕ್ಕೆರೂರುವರೆಗೆ ಸಾರಿಗೆ ಸೇವೆ ನೀಡುತ್ತಿದ್ದ ಖಾಸಗಿ ಬಸ್ ಬಂದ್ ಆಗಿ ರಸ್ತೆ ಬದಿಯಲ್ಲಿ ನಿಂತಿವೆ
ಶಿಕಾರಿಪುರ ಡಿಪೋದ 20 ಮಾರ್ಗಗಳನ್ನು 35 ಮಾರ್ಗಗಳಿಗೆ ಏರಿಸಲಾಗಿದ್ದು, ಶಾಲಾ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು ಎಂದು ಹೊಸ ಮಾರ್ಗಗಳನ್ನು ಮಾಡಿದ್ದೇವೆ. ಚಾಲಕ, ಕಂಡಕ್ಟರ್‌ ಹಾಗೂ ಬಸ್‌ನ ಅಲಭ್ಯತೆಯಿಂದ ಈ ಮಾರ್ಗಕ್ಕೆ ಬಸ್‌ ನೀಡಲಾಗಿಲ್ಲ. ಮುಂದೆ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು.
-ಸೌಮ್ಯಾ, ಡಿಪೋ ಮ್ಯಾನೇಜರ್‌, ಶಿಕಾರಿಪುರ
ಸರ್ಕಾರ ಮಹಿಳೆಯರಿಗೆ ಉಚಿತ ಬಸ್‌ ಸೇವೆ ನೀಡಲು ಪ್ರಾರಂಭಿಸಿದ ನಂತರ ಖಾಸಗಿ ಬಸ್‌ಗಳು ಪ್ರಯಾಣಿಕರ ಕೊರತೆ ಎದುರಿಸುತ್ತಿವೆ. ಬಸ್‌ ಮಾಲೀಕರು ತೆರಿಗೆ ಪಾವತಿಸುವಷ್ಟೂ ಪ್ರಯಾಣಿಕರು ಬಾರದೆ ಇರುವುದರಿಂದ ಬಸ್‌ ಸಂಚಾರ ನಿಲ್ಲಿಸಲಾಗಿದೆ.
-ಮುಂಗಲಗಿ ಮಲ್ಲಿಕಾರ್ಜುನ, ಖಾಸಗಿ ಬಸ್‌ ಏಜೆಂಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.