ಸಾಗರ: ಖಾಸಗಿ ಆಸ್ಪತ್ರೆಗಳ ಲಾಬಿಯಿಂದಾಗಿ ಸರ್ಕಾರಿ ಆಸ್ಪತ್ರೆಗಳು ಅವನತಿಯತ್ತ ಸಾಗುವಂತಾಗಿದೆ. ಈ ಲಾಬಿಯನ್ನು ನಿಯಂತ್ರಿಸುವುದು ಸರ್ಕಾರಕ್ಕೂ ದೊಡ್ಡ ಸವಾಲಾಗಿದೆ ಎಂದು ಶಾಸಕ ಎಚ್. ಹಾಲಪ್ಪ ಹರತಾಳು ಹೇಳಿದರು.
ಇಲ್ಲಿನ ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆ ನೌಕರರ ಒಕ್ಕೂಟ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೋವಿಡ್ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದ ಆರೋಗ್ಯ ಇಲಾಖೆಯ 17 ವಾಹನ ಚಾಲಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಕೋವಿಡ್‌ನಿಂದಾಗಿ ರಾಜ್ಯದಲ್ಲಿ ಮರಣ ಹೊಂದಿರುವವರ ಸಂಖ್ಯೆ ಸರ್ಕಾರದ ಲೆಕ್ಕದಲ್ಲಿ 37ಸಾವಿರ ಎಂದು ಇದೆ. ಆದರೆ ಆಯುಷ್ಮಾನ್ ಭಾರತ್ ಯೋಜನೆಯಡಿ ಖಾಸಗಿ ಆಸ್ಪತ್ರೆಗಳು ಪರಿಹಾರ ಪಡೆಯಲು 1.07 ಲಕ್ಷ ಜನ ಮೃತಪಟ್ಟಿದ್ದಾರೆ ಎಂದು ಅರ್ಜಿ ಸಲ್ಲಿಸಿವೆ. ಆರೋಗ್ಯ ಕ್ಷೇತ್ರದ ಶುದ್ಧೀಕರಣವಾಗದಿದ್ದರೆ ಸರ್ಕಾರದ ಹಣ ಪೋಲು ಆಗುವುದನ್ನು ತಡೆಯಲು ಸಾಧ್ಯವಿಲ್ಲ ಎಂದರು.
ಆರೋಗ್ಯ ಇಲಾಖೆಯ ಮೇಲ್ಮಟ್ಟದ ಅಧಿಕಾರಿಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಕ್ಕೆ ಯಾವುದೇ ಕೊರತೆ ಇಲ್ಲ ಎನ್ನುತ್ತಾರೆ. ಆದರೆ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿಯೇ ಔಷಧದ ಕೊರತೆ ಇರುವುದು ಎದ್ದು ಕಾಣುತ್ತಿದೆ. ಅಧಿಕಾರಿಗಳ ಮಾತನ್ನು ನಂಬು
ವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ಕೋವಿಡ್ ಕಾರಣ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಆರ್‌ಟಿಪಿಸಿಆರ್ ಘಟಕ ಮಂಜೂರಾಗಿದೆ. ಇಲಾಖೆಯಿಂದ ಘಟಕ ಸ್ಥಾಪನೆಗೆ ₹ 2 ಕೋಟಿ ಮೌಲ್ಯದ ಸಾಮಗ್ರಿ ಬಂದಿದೆ. ಆದರೆ ₹ 46 ಲಕ್ಷ ವೆಚ್ಚದ ಯಂತ್ರೋಪಕರಣ ಇನ್ನೂ ಬಾರದೇ ಇರುವುದು ಘಟಕ ಆರಂಭಿಸಲು ತೊಡಕಾಗಿದೆ. ಯಂತ್ರೋಪಕರಣಕ್ಕೆ ಕಮಿಷನ್ ಬಂದಿಲ್ಲ ಎನ್ನುವ ಕಾರಣಕ್ಕೆ ಅದನ್ನು ಕಳುಹಿಸಲು ಅಧಿಕಾರಿಗಳು ವಿಳಂಬ ಮಾಡುತ್ತಿರಬಹುದು ಎಂದು ದೂರಿದರು.
ಶಿವಮೊಗ್ಗದ ಸಿಮ್ಸ್ ಆಸ್ಪತ್ರೆಗೆ ರಾಜ್ಯ ಸರ್ಕಾರ ₹ 1 ಸಾವಿರ ಕೋಟಿ ಅನುದಾನ ನೀಡಿದೆ. ಅಲ್ಲಿ 200ಕ್ಕೂ ಹೆಚ್ಚು ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೂ ರೋಗಿಗಳಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಎಂದರೆ ಅದಕ್ಕೆ ಯಾರನ್ನು ದೂರಬೇಕು ಎಂದು ಪ್ರಶ್ನಿಸಿದರು.
ಕೋವಿಡ್ ಸಂದರ್ಭದಲ್ಲಿ ಸೇವೆ ಸಲ್ಲಿಸಿದ ವಾಹನ ಚಾಲಕರನ್ನು ಗೌರವಿಸುವುದು ಸಮಾಜದ ಕರ್ತವ್ಯ ಎಂದರು.
ಆರೋಗ್ಯ ಇಲಾಖೆಯ ನೌಕರರ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ವೈ. ಮೋಹನ್ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಮೋಹನ್ ಕೆ.ಎಸ್., ಡಾ.ಪ್ರಕಾಶ್ ಬೋಸ್ಲೆ, ಡಾ. ವಾಸುದೇವ್, ವೇಣುಗೋಪಾಲ್, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಜಿ. ಪರಮೇಶ್ವರಪ್ಪ, ಡಾ.ಕಾವ್ಯ, ಡಾ.ವಿಕ್ರಮ್, ಡಾ.ಹರೀಶ್ ಇದ್ದರು. ಮ.ಸ. ನಂಜುಂಡಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹದೇವ್ ಎಸ್.ಬಿ. ವಂದಿಸಿದರು. ಜುಬೆದಾ ಅಲಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.