ಸಾಗರ: ಪ್ರಸ್ತುತ ಸಂದರ್ಭದ ಬಿಕ್ಕಟ್ಟುಗಳಿಗೆ ಸದಾ ಸ್ಪಂದಿಸುವುದು ರಂಗಭೂಮಿಯ ವಿಶೇಷತೆ ಎಂದು ಶಿವಮೊಗ್ಗ ರಂಗಾಯಣದ ನಿರ್ದೇಶಕ ಪ್ರಸನ್ನ ಡಿ. ಸಾಗರ್ ಹೇಳಿದರು.
ಇಲ್ಲಿನ ಇಂದಿರಾಗಾಂಧಿ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ ಸ್ಪಂದನ ರಂಗ ತಂಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಗುರುವಾರ ಏರ್ಪಡಿಸಿದ್ದ ‘ಪಾಪದ ಬಿ ಬಿ’ ಏಕವ್ಯಕ್ತಿ ರಂಗ ಪ್ರಯೋಗದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಜರ್ಮನಿಯ ಕವಿ ಬರ್ಟೋಲ್ ಬ್ರೆಕ್ಟ್ ರಚಿಸಿರುವ ಕವಿತೆಗಳು ಭಾರತದ ನೆಲದ ತಲ್ಲಣಗಳಿಗೂ ತಟ್ಟುವ ರೀತಿಯಲ್ಲಿವೆ. ಇಂತಹ ಕವಿತೆಗಳನ್ನು ಆಧರಿಸಿ ಏಕವ್ಯಕ್ತಿ ರಂಗ ಪ್ರಯೋಗ ರೂಪಿಸಿರುವುದು ವಿಶಿಷ್ಟ ಪ್ರಯೋಗವಾಗಿದ್ದು, ಯುವಜನರಿಗೆ ರಂಗಭೂಮಿಯ ಕುರಿತು ಆಸಕ್ತಿ ಮೂಡಿಸಲು ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
‘ಓದಿನ ಜೊತೆಗೆ ವಿದ್ಯಾರ್ಥಿಗಳು ರಂಗಭೂಮಿಯಲ್ಲಿ ತೊಡಗಿಸಿಕೊಂಡರೆ ಅವರಲ್ಲಿ ಸೃಜನಶೀಲತೆ ಬೆಳೆಯುತ್ತದೆ. ಅರಿವಿನ ಹೊಸ ದಾರಿಯನ್ನು ಹುಡುಕಿಕೊಳ್ಳಲು ರಂಗಭೂಮಿ ಯಾವತ್ತೂ ಪ್ರೇರೇಪಿಸುತ್ತದೆ’ ಎಂದು ಸ್ಪಂದನ ರಂಗ ತಂಡದ ಅಧ್ಯಕ್ಷೆ ಎಂ.ವಿ. ಪ್ರತಿಭಾ ಹೇಳಿದರು.
ಪ್ರಾಂಶುಪಾಲರಾದ ರಾಜೇಶ್ವರಿ ಎಚ್. ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಮಾರುತಿ ಬಿ. ಗೌಡ, ಶಿವಾನಂದ ಎಸ್. ಭಟ್, ರಂಗ ನಿರ್ದೇಶಕ ವೆಂಕಟೇಶ್ವರ ಕೆ. ಇದ್ದರು.
ಥಿಯೇಟರ್ –ರಿ-ಆಕ್ಟ್ ತಂಡದ ಉದಯ ಅಂಕರವಳ್ಳಿ ಅವರಿಂದ ‘ಪಾಪದ ಬಿ ಬಿ’ ಏಕವ್ಯಕ್ತಿ ರಂಗ ಪ್ರಯೋಗ ವೆಂಕಟೇಶ್ವರ ಕೆ. ನಿರ್ದೇಶನದಲ್ಲಿ ಪ್ರದರ್ಶನಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.