ಆನವಟ್ಟಿ: ಗ್ರಾಮ ಪಂಚಾಯಿತಿಯಿಂದ ಮೇಲ್ದರ್ಜೆಗೇರಿ ಆನವಟ್ಟಿ ಪಟ್ಟಣ ಪಂಚಾಯಿತಿ ಮಾನ್ಯತೆ ಪಡೆದು ಎರಡು ವರ್ಷ ಕಳೆದರೂ ಚುನಾವಣೆ ನಡೆದಿಲ್ಲ. ಪಟ್ಟಣಕ್ಕೆ ಮೂಲಸೌಕರ್ಯ ಸೇರಿದಂತೆ ಜನರ ಸಮಸ್ಯೆಗಳನ್ನು ಆಲಿಸಲು ಸ್ಥಳೀಯ ಜನಪ್ರತಿನಿಧಿಗಳು ಇಲ್ಲ. ನಿರಂತರವಾಗಿ ಅಧಿಕಾರಿಗಳ ಬದಲಾವಣೆ, ಸಿಬ್ಬಂದಿ ಕೊರತೆ ಇರುವ ಪಟ್ಟಣ ಪಂಚಾಯಿತಿಯಲ್ಲಿ ಮಾತನಾಡಿಸುವವರೇ ಇಲ್ಲದೆ ನಾಗರಿಕರು ಗೋಳಾಡುತ್ತಿದ್ದಾರೆ.
ಗ್ರಾಮ ಪಂಚಾಯಿತಿ ಇದ್ದಾಗ ಸಿಗುತ್ತಿದ್ದ ಸವಲತ್ತುಗಳು, ಪಟ್ಟಣ ಪಂಚಾಯಿತಿ ಆದ ಮೇಲೆ ಸಿಗುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಶೇ 80ರಷ್ಟು ರಸ್ತೆಗಳು ಸಂಪೂರ್ಣ ಹಾಳಾಗಿವೆ. ಹೊಸದಾಗಿ ಸೇರ್ಪಡೆ ಮಾಡಿರುವ ಗ್ರಾಮಗಳಲ್ಲಿ ಕನಿಷ್ಠ ಜಲ್ಲಿಕಲ್ಲು ಬಿಛಾವಣೆ ಕಾಣದ ರಸ್ತೆಗಳು, ಕೆಸರು ಗದ್ದೆಯಂತಾಗಿವೆ. ಶಾಲಾ ಮಕ್ಕಳು, ವೃದ್ಧರು ಕಷ್ಟಪಟ್ಟು ಓಡಾಡಬೇಕಾಗಿದೆ ಎಂದು ಅಳಲು ತೊಡಿಕೊಳ್ಳುತ್ತಾರೆ
ನಿವಾಸಿಗಳು.
ಒಳಚರಂಡಿ ವ್ಯವಸ್ಥೆ ಸರಿಯಾಗಿ ಇಲ್ಲದೇ ಮಳೆ ನೀರು ಮುಖ್ಯರಸ್ತೆ ಸೇರಿದಂತೆ ಕೆಲವು ಬೀದಿಗಳಲ್ಲಿ ರಸ್ತೆಯ ಮೇಲೆ ಹರಿಯುತ್ತಿದೆ. ಹರಿದು ಬಂದ ನೀರು ಅಂಗಡಿ, ಮನೆಗಳಿಗೆ ನುಗ್ಗುವುದರಿಂದ, ನಿವಾಸಿಗಳು ನೀರು ತೋಡಿ ಹಾಕುವುದರಲ್ಲೇ ಹೈರಾಣಾಗಿದ್ದಾರೆ. ಈ ವರ್ಷ ಬೆಂಬಿಡದೇ ಮಳೆ ಸುರಿಯುತ್ತಿರುವುದರಿಂದ ಪಟ್ಟಣ ಪಂಚಾಯಿತಿಗೆ ಜನನಿತ್ಯ ಹಿಡಿ ಶಾಪ ಹಾಕುವಂತಾಗಿದೆ.
ಅಂಧಕಾರದಲ್ಲಿ ಆನವಟ್ಟಿ: ಬ್ರಾಹ್ಮಣರ ಬೀದಿ, ಆಜಾದ್ ಬೀದಿ, ತಿಮ್ಮಾಪುರ, ರಾಘವ ಬಡಾವಣೆ, ನೆಹರೂನಗರ ಸೊರಬ ರಸ್ತೆಯ ಬಡಾವಣೆಗಳು ಸೇರಿದಂತೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಬೀದಿಗಳಲ್ಲಿ ಬೀದಿ ದೀಪಗಳು ಉರಿಯುತ್ತಿಲ್ಲ. ಅಲ್ಲೊಂದು, ಇಲ್ಲೊಂದು ಮಾತ್ರ ಉರಿಯುತ್ತಿವೆ. ನಿವಾಸಿಗಳು ಕತ್ತಲಿನ ಭಯದಲ್ಲೇ ಕಾಲಕಳೆಯುವಂತಾಗಿದೆ.
‘ಆನವಟ್ಟಿಯ ಮುಖ್ಯ ರಸ್ತೆ ವಿಭಜಕಗಳ ಮಧ್ಯದ ಬೀದಿ ದೀಪಗಳು ರಾತ್ರಿ 12ರವರೆಗೆ ಮಾತ್ರ ಉರಿಯುತ್ತವೆ. ರಾತ್ರಿ ಬೀದಿ ದೀಪಗಳು ಇಲ್ಲದೇ ಇರುವುದರಿಂದ ಕಳವು ಪ್ರಕರಣಗಳು ಹೆಚ್ಚುತ್ತಿವೆ. ಸಂತೆ ಮಾರುಕಟ್ಟೆಯ ಶಿವಕುಮಾರ ಎಂಬುವವರ ಮನೆಯಲ್ಲಿ ಬಂಗಾರ ಸೇರಿದಂತೆ ಅನೇಕ ವಸ್ತುಗಳು ಕಳವಾಗಿವೆ. ದ್ವಿಚಕ್ರ ವಾಹನಗಳು, ರೈತರ ಟ್ರ್ಯಾಕ್ಟರ್‌ಗಳ ಬ್ಯಾಟರಿಗಳು ಕಳವಾಗಿವೆ. ಇಷ್ಟಾದರೂ ಪಟ್ಟಣ ಪಂಚಾಯಿತಿ ಎಚ್ಚೆತ್ತುಕೊಂಡಿಲ್ಲ’ ಎಂದು ಗ್ರಾಮಸ್ಥ ಸುರೇಶ್ ಮಸಾಲ್ತಿ ಬೇಸರ ವ್ಯಕ್ತಪಡಿಸಿದರು.
‘ಬೀದಿ ದೀಪಗಳ ಸಮಸ್ಯೆ, ವಾರ್ಡ್‌ಗಳ ಒಳ ಚರಂಡಿ, ಕುಡಿಯುವ ನೀರಿನ ಸಮಸ್ಯೆ ಮುಂತಾದ ಸಮಸ್ಯೆಗಳ ಬಗ್ಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಪಟ್ಟಣ ಪಂಚಾಯಿತಿಗೆ ಹೋದರೆ ಸಮಸ್ಯೆ ಕೇಳುವವರು ಇಲ್ಲ. ಎರಡು ವರ್ಷ ಕಳೆಯುತ್ತ ಬಂದರೂ ಇನ್ನೂ ಚುನಾವಣೆ ಮಾಡಿಲ್ಲ. ನಮ್ಮ ವಾರ್ಡ್‌ಗಳ ಜನಪ್ರತಿನಿಧಿ ಇದ್ದಿದ್ದರೆ ಅವರ ಮೂಲಕ ಆದರೂ ಕೆಲಸ ಮಾಡಿಸಿಕೊಳ್ಳಬಹುದಿತ್ತು. ಇಂತಹ ಸೌಭಾಗ್ಯಕ್ಕೆ ಪಟ್ಟಣ ಪಂಚಾಯಿತಿ ಬೇಕಾಗಿತ್ತಾ’ ಎಂದು ನಿವಾಸಿಗಳು ಪ್ರಶ್ನೆ ಮಾಡುತ್ತಿದ್ದಾರೆ.
ನರೇಗಾ ಕೆಲಸ ಕಳೆದುಕೊಂಡ ಗ್ರಾಮಸ್ಥರು
ಆನವಟ್ಟಿಯಲ್ಲಿ ಸಾಮಾನ್ಯ ಜನರಿಗೆ ಉದ್ಯೋಗ ನೀಡುವಂತಹ ಕೈಗಾರಿಕೆಗಳು, ಉದ್ಯಮಗಳು ಇಲ್ಲ. ಇಲ್ಲಿನ ನಿವಾಸಿಗಳು ಆಥಿರ್ಕವಾಗಿ ಸದೃಢವಾಗಿಲ್ಲ. ಆದರೂ ಆನವಟ್ಟಿಯನ್ನು ಪಟ್ಟಣ ಪಂಚಾಯಿತಿ ಮಾಡಲಾಗಿದೆ. ಇದರಿಂದ ಗ್ರಾಮಸ್ಥರು ನರೇಗಾ ಕೂಲಿ ಕೆಲಸ ಕಳೆದುಕೊಂಡಿದ್ದಾರೆ. ಸರ್ಕಾರಿ ನೌಕರಿ ಪಡೆಯಲು ಬಯಸುವ ಮುಂದಿನ ಪೀಳಿಗೆಗೆ ಗ್ರಾಮೀಣ ಕೃಪಾಂಕದ ಸೌಲಭ್ಯ ಇಲ್ಲವಾಗಿದೆ. ಗ್ರಾಮೀಣ ಭಾಗದ ಜನರಿಗೆ ತೊಂದರೆಯಾಗುತ್ತಿರುವ ಪಟ್ಟಣ ಪಂಚಾಯಿತಿ ಮಾನ್ಯತೆಯನ್ನು ಸರ್ಕಾರ ಮರು ಪರಿಶೀಲನೆ ನಡೆಸಿ ಕೈಬಿಡುವುದು ಒಳ್ಳೆಯದು. ಪಟ್ಟಣ ಪಂಚಾಯಿತಿ ಹಾಗೂ ಸೊರಬ ಪುರಸಭೆ ಅಧಿಕಾರಿಗಳು ಫ್ಲೆಕ್ಸ್‌ಗಳನ್ನು ತೆರವುಗೊಳಿಸುವ ಕೆಲಸ ಮಾತ್ರ ಮಾಡುತ್ತಿದ್ದಾರೆ. ನಿವಾಸಿಗಳಿಗೆ ಮೂಲಸೌಲಭ್ಯ ಕಲ್ಪಿಸುವ ಕಡೆ ಗಮನ ಹರಿಸುತ್ತಿಲ್ಲ. ಸ್ಥಳೀಯ ಆಡಳಿತ ಸಂಸ್ಥೆಗಳು ಜನಸ್ನೇಹಿಯಾಗಿ ಕಾರ್ಯನಿರ್ವಹಿಸುವಂತೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು.
– ರಾಜು ಎಂ. ತಲ್ಲೂರು, ಬಿಜೆಪಿ ಮುಖಂಡ
ಆರ್ಥಿಕ ಸಂಕಷ್ಟ
ಜನರ ಅಭಿಪ್ರಾಯ ಸಂಗ್ರಹಿಸಿಲ್ಲ. ಗ್ರಾಮಗಳ ಸ್ಥಿತಿ–ಗತಿ ಅಧ್ಯಯನ ಮಾಡದೇ ಏಕಾಏಕಿ ಆನವಟ್ಟಿಯನ್ನು ಪಟ್ಟಣ ಪಂಚಾಯಿತಿ ಮಾಡಲಾಗಿದೆ. ಆನವಟ್ಟಿಯಿಂದ 4 ಕೀ.ಮೀ ದೂರದಲ್ಲಿರುವ ಹೊಸಳ್ಳಿ, ಸಮನವಳ್ಳಿ, ತಲ್ಲೂರು, ವಿಠಲಾಪುರ, ನೇರಲಗಿ ಮುಂತಾದ ಗ್ರಾಮಗಳನ್ನು ಸೇರಿಸಲಾಗಿದೆ. ಆ ಗ್ರಾಮಗಳ ಸಂಪರ್ಕದವರೆಗೂ ರೈತರ ಜಮೀನುಗಳೇ ಇವೆ. ಹೋಲಗಳನ್ನು ವ್ಯಾಪಾರೀಕರಣ ದೃಷ್ಟಿಯಿಂದ ನೋಡಲು ಸಾಧ್ಯವಿಲ್ಲ. ರೈತರು, ಕೂಲಿ ಕಾರ್ಮಿಕರು, ಬಡವರು ದುಬಾರಿ ಕಂದಾಯ ಭರಿಸುವ ಮೂಲಕ ಮತ್ತಷ್ಟು ಆರ್ಥಿಕ ಸಂಕಷ್ಟ ಎದುರಿಸಬೇಕಾಗಿದೆ.
– ಎ.ಎಲ್. ಅರವಿಂದ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.