ಶಿವಮೊಗ್ಗ: ಕಾಂಗ್ರೆಸ್ ವರಿಷ್ಠರು, ಬುದ್ದಿಜೀವಿಗಳ ಕುರಿತು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಶಿವಪ್ಪನಾಯಕ ಪ್ರತಿಮೆ ಬಳಿ ಪ್ರತಿಕೃತಿ ದಹಿಸಿ, ಆಕ್ರೋಶ ವ್ಯಕ್ತಪಡಿಸಿದರು.
ತಾಲಿಬಾನ್ ವಿಷಯಕ್ಕೆ ಪ್ರತಿಕ್ರಿಯೆ ನೀಡಿರುವ ಯತ್ನಾಳ್ ಬಾಯಿ ಚಪಲಕ್ಕಾಗಿ ಹೊಲಸು ಮಾತುಗಳನ್ನಾಡಿದ್ದಾರೆ. ಆತನ ನಾಲಿಗೆಯೇ ಅವನ ಗುಣ ತಿಳಿಸುತ್ತದೆ. ಮಾನಸಿಕ ಹಿಡಿತ ಕಳೆದುಕೊಂಡಿರುವ ಅವರು ಒಬ್ಬ ಹುಚ್ಚನಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿಯಲ್ಲಿ ಕಸಕ್ಕಿಂತ ಕಡೆಯಾಗಿರುವ ಯತ್ನಾಳ್ ಮೋದಿ ಮೆಚ್ಚಿಸಲು ಹುಚ್ಚುಚ್ಚಾಗಿ ಮಾತನಾಡುತ್ತಿದ್ದಾರೆ. ಪಕ್ಷದಲ್ಲಿಯೇ ಅವರಿಗೆ ಬೆಲೆ ಇಲ್ಲ. ಬುದ್ಧಿ ಭ್ರಮಣೆಯಾಗಿದೆ. ಬಿಜೆಪಿ ವಿಚಾರವಾಗಿ ಏನಾದರೂ ಮಾತನಾಡಲಿ. ಕಾಂಗ್ರೆಸ್ ವಿರುದ್ಧ ಮಾತನಾಡಿದರೆ ಸುಮ್ಮನಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯತ್ನಾಳ್‌ಗೆ ಭಾಷೆಯೂ ಗೊತ್ತಿಲ್ಲ. ಭಾವವೂ ಗೊತ್ತಿಲ್ಲ. ಅಫ್ಗಾನಿಸ್ತಾನದ ವಿಚಾರದಲ್ಲಿ ಪ್ರಗತಿಪರರು ಮೌನ ವಹಿಸಿದ್ದಾರೆ. ಅವರೆಲ್ಲ ಅಫ್ಗಾನಿಸ್ತಾದವರಿಗೆ ಹುಟ್ಟಿದ್ದಾರಾ, ರಾಹುಲ್ ಗಾಂಧಿ ಅವರು ಹಿಂದೂನಾ? ಕ್ರಿಶ್ಚಿಯನ್ನಾ ಎಂದು ಪ್ರಶ್ನಿಸಿದ್ದಾರೆ. ಅವರು ಮೊದಲು ತಮ್ಮನ್ನು ತಿದ್ದುಕೊಳ್ಳಬೇಕು. ಕನ್ನಡಿಗರ ಕ್ಷಮೇ ಕೇಳಬೇಕು. ಧರ್ಮಗಳ ಮಧ್ಯೆ ಶಾಂತಿ ಕದಡಿದ ಆರೋಪದ ಮೇರೆಗೆ ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಗಿರೀಶ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎನ್.ರಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ರಂಗನಾಥ್, ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ಲೋಕೇಶ್, ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್‌ನ ಎಸ್.ಕುಮರೇಶ್, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಶಶಿಕುಮಾರ್ ಸಿರಿಗೆರೆ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಲೀಮ್ ಅಹಮದ್ ಸಿರಿಗೆರೆ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.