ADVERTISEMENT

Diwali 2024: ಗದ್ದೆ ಬೈಲಿಗೆ ‘ಪುಂಡಿಕೋಲುʼ ದೀಪಾವಳಿ

ನಿರಂಜನ ವಿ.
Published 2 ನವೆಂಬರ್ 2024, 7:13 IST
Last Updated 2 ನವೆಂಬರ್ 2024, 7:13 IST
ಪುಂಡಿಕೋಲು ದೀಪ
ಪುಂಡಿಕೋಲು ದೀಪ   

ಗದ್ದೆಗಳ ಸಾಲಿನಲ್ಲಿ ಬಲಿಪಾಡ್ಯಮಿಯ ಸಾಯಂಕಾಲ ಮಾರ್ದನಿಸುವ ‘ಹಂಡೋಳಿಗೆ, ಹುಂಡೋಳಿಗೆ, ಕೋಲು ಲಕ್ಷ ದೀಪೋಳಿಗೆ’ ಮಲೆನಾಡ ಹಬ್ಬದ ಸಡಗರ ಹೆಚ್ಚಿಸುತ್ತದೆ. ರೈತಾಪಿ ವರ್ಗ ಜಮೀನಿಗೆ ಪುಂಡಿಕೋಲು ದೀಪ ಇಟ್ಟು ಬಲೀಂದ್ರನನ್ನು ನೆನೆಯುತ್ತಾರೆ.

‘ಬಲಿ ಕೊಟ್ಟು ಬಲಿತಕ್ಕೊಂಡ್ರು ಬಲೀಂದ್ರ ದೇವರು. ತಮ್ಮ ರಾಜ್ಯಕ್ಕೆ ತಾವೇ ಬಂದರು. ಹುಲಿಯೆ ಬಾ ಕೊ.ಕೊ…’ ಎಂಬ ಸಾಲುಗಳ ಹೇಳುತ್ತ ತಾವು ನಾಟಿ ಮಾಡಿದ ಭತ್ತದ ಗದ್ದೆ, ಅಡಿಕೆ, ಬಾಳೆ ತೋಟ, ಊರ ದೇವರುಗಳ ಗುಡಿಯ ಮುಂದೆ ಒಂದೊಂದು ಕೋಲು ನೆಟ್ಟು ದೀಪೋಳಿಗೆ ಕೂಗು ಹಾಕುತ್ತಾರೆ.

ಪುಂಡಿ ಎಂಬುದು ಹಲವು ಉಪಯೋಗಗಳನ್ನು ನೀಡುವ ಒಂದು ಬಗೆಯ ಗಿಡ. ಇದರ ಎಲೆಯಿಂದ ಆಹಾರ ಪದಾರ್ಥ ತಯಾರಿಸುತ್ತಾರೆ. ಅದರಿಂದ ಮಾಡಿದ ಕೊಲಿಗೆ ಪುಂಡಿಕೋಲು ಎಂದು ಕರೆಯುತ್ತಾರೆ. ದೀಪಾವಳಿ ಆರಂಭಗೊಳ್ಳುವ ಎರಡು ವಾರಗಳ ಮುಂಚೆ ಗಿಡ ಕಟಾವು ಮಾಡಿ ಅದರ ಸಿಪ್ಪೆಯನ್ನು ತೆಗೆದು ಒಣಹಾಕಿ ತೆಳ್ಳಗೆ, ಬೆಳ್ಳಗೆ, ಹಗುರವಾಗಿ ಇರುವ ಪುಂಡಿಕೋಲು ಸಿದ್ಧಗೊಳ್ಳುತ್ತದೆ. ಕೋಲು ಕಟಾವು ಮಾಡಿ ನೆನೆಹಾಕಿ ಅದರ ಸಿಪ್ಪೆ ತೆಗೆದು ಹಗ್ಗ ಮಾಡಿಕೊಳ್ಳುತ್ತಿದ್ದರು. ಪೈರು ಕಟಾವು ಸಂದರ್ಭದಲ್ಲಿ ಇದರ ಹಗ್ಗಕ್ಕೆ ಬಾರಿ ಬೇಡಿಕೆ ಇರುತ್ತಿತ್ತು.

ADVERTISEMENT

ದೀಪಾವಳಿಯ ದಿನ ಒಣಗಿದ ಪುಂಡಿಕೋಲಿನ ತುದಿಗೆ ದೀಪದ ಎಣ್ಣೆಯಲ್ಲಿ ಮುಳುಗಿಸಿದ ಶುಭ್ರವಾದ ಹತ್ತಿಬಟ್ಟೆ ಕಟ್ಟಿ ದೊಂದಿಯಾಕಾರದಲ್ಲಿ ತಯಾರಿ ಮಾಡುತ್ತಾರೆ. ಹೀಗೆ ತಯಾರು ಮಾಡಿದ ಕೋಲಿಗೆ ಹೂಗುಚ್ಚವನ್ನು ಕಟ್ಟಿ ಸಿಂಗರಿಸುವ ವಿಧಾನ ಇದೆ. ಮುಂಡುಗದ ಹೂವು, ಚೆಂಡು ಹೂವು, ಅಡಿಕೆ ಹಿಂಗಾರ, ಹುಲಿಮರದ ಎಲೆ, ಓಟೆ ಎಲೆ, ಕಕ್ಕೆ ಎಲೆ, ಹಣ್ಣು ಅಡಿಕೆ, ಕಿತ್ತಳೆ ಎಲೆ, ಪಚ್ಚೆ ತೆನೆ, ಏಲಕ್ಕಿ ತೆನೆ ಮುಂತಾದ ಜಮೀನಿನಲ್ಲಿ ಬೆಳೆದ ಹೂವುಗಳ ಹಾರ ತಯಾರು ಮಾಡುತ್ತಾರೆ.

ಬಲಿಪಾಡ್ಯಮಿಯ ಸಂಜೆ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ಒಂದೊಂದು ಜವಾಬ್ದಾರಿ ಇರುತ್ತದೆ. ಮನೆಯ ಯಜಮಾನನ ಸಾರಥ್ಯದಲ್ಲಿ ಗದ್ದೆ ಅಂಚಿನಲ್ಲಿ ಸರತಿ ಸಾಲು ಆರಂಭಗೊಳ್ಳುತ್ತದೆ. ಯಜಮಾನ ದೀಪೋಳಿಗೆ ಹಾಕುತ್ತ ಊರಿನ ಚೌಡಿ, ಭೂತ, ಬ್ರಹ್ಮ, ನಾಗ, ಯಕ್ಷೆ ಮುಂತಾದ ದೇವರನ್ನು ನೆನೆದು ಪುಂಡಿಕೋಲು ದೀಪ ಹಚ್ಚುತ್ತಾರೆ. ತಯಾರಾದ ಹೂವಿನ ಹಾರವನ್ನು ಮನೆಯ ಸದಸ್ಯರು ಅದಕ್ಕೆ ಕಟ್ಟುತ್ತಾರೆ. ಕಿರಿಯರಾದ ಮಕ್ಕಳು ಅಜ್ಜ, ಅಪ್ಪ, ಚಿಕ್ಕಪ್ಪನ ದೀಪೋಳಿಗೆ ಹಾಡಿಗೆ ದನಿಗೂಡಿಸುತ್ತಾರೆ. ಕೆಲವರು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುತ್ತಾರೆ.

ಅಂದಿನಿಂದ ಮೂರು ದಿನಗಳ ಪರ್ಯಂತ ದೀಪಾವಳಿ ಸಂಭ್ರಮ ಕಳೆಗಟ್ಟುತ್ತದೆ. ಮನೆಯ ಹೊಸ್ತಿಗೆ ನಿತ್ಯ ದೀಪ ಹಚ್ಚುತ್ತಾರೆ. ಮಲೆನಾಡಿನ ಭಾಗದಲ್ಲಿ ಅಂಟಿಕೆ ಪಂಟಿಕೆ ತಂಡವನ್ನು ರಾತ್ರಿ ಸ್ವಾಗತಿಸುತ್ತಾರೆ. ಹಬ್ಬದ ಮಾರನೆಯ ದಿನ ಕರಿ, ನಂತರ ವರ್ಸ್ತೊಡಕು ಹೀಗೆ ಹಬ್ಬ ಮುಂದುವರೆಯುತ್ತದೆ. ಹಲವು ಕಡೆಗಳಲ್ಲಿ ಕಾರ್ತಿಕ ಮಾಸ ಆರಂಭವಾಗುವ ತನಕ ದೀಪ ಹಚ್ಚುವ ಸಂಪ್ರದಾಯ ರೂಢಿಯಲ್ಲಿದೆ.

ಈಚೆಗೆ ಹಬ್ಬದ ಆಚರಣೆಯಲ್ಲಿ ಸಾಕಷ್ಟು ಬದಲಾವಣೆ ಬಂದಿವೆ. ಭತ್ತದ ಗದ್ದೆಗಳು ಕಡಿಮೆಯಾಗಿ ಅಡಿಕೆ ತೋಟಗಳಾಗಿ ಬದಲಾಗಿದೆ. ಪಟ್ಟಣ, ನಗರ ಪ್ರದೇಶದಲ್ಲಿ ನಿವೇಶನಗಳಾಗಿ ಮಾರ್ಪಟ್ಟಿವೆ. ಪುಂಡಿಕೋಲು ಜಾಗವನ್ನು ಬಿದಿರು, ಬಣ್ಣದ ಬಿದಿರು, ಅಡಿಕೆ ದಬ್ಬೆ, ವಾಟೆ ಮುಂತಾದವು ಆವರಿಸಿವೆ. ಹತ್ತಿಬಟ್ಟೆ ಬದಲು ಪಾಲಿಸ್ಟರ್‌ ಬಳಕೆಯಲ್ಲಿದೆ.

ಪುಂಡಿಕೋಲಿನ ದೀಪ
ಪುಂಡಿ ಗಿಡ
ಪುಂಡಿಕೋಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.