ಶವಸಂಸ್ಕಾರ ನೇರವೇರಿಸಿದ ಸಲೀಂ ಖಾನ್ ತಂಡ
ಶಿವಮೊಗ್ಗ: ಕೊರೊನಾ ವೈರಸ್ ಶಿವಮೊಗ್ಗ ಜಿಲ್ಲೆಯಲ್ಲೂ ವ್ಯಾಪಕವಾಗಿ ಹರಡಲು ಆರಂಭಿಸಿದಾಗ ಸಾವಿನ ಸರಣಿಗೂ ನಾಂದಿ ಹಾಡಿತ್ತು. ಕೋವಿಡ್‌ನಿಂದ ಮೃತಪಟ್ಟವರ ಶವಸಂಸ್ಕಾರಕ್ಕೂ ಸಂಬಂಧಿಕರು, ಸ್ನೇಹಿತರು ಮುಂದೆ ಬರಲಿಲ್ಲ. ಖಾಸಗಿ ಆಂಬುಲೆನ್ಸ್‌ಗಳು ದುಬಾರಿ ಹಣ ಪಡೆದು ಶವ ಸಾಗಿಸುತ್ತಿದ್ದವು. ಬಡವರು, ದುರ್ಬಲರು ಹಣ ನೀಡಲು ಸಾಧ್ಯವಾಗದೇ ಪರಿತಪಿಸುವಂತಾಗಿತ್ತು.
ಇಂತಹ ಸಮಯದಲ್ಲಿ ಸಲೀಂ ಖಾನ್, ಅಲ್ಲಾ ಬಕ್ಷಿ, ಸೈಯದ್ ರಿಜ್ವಾನ್ ಅವರ ತಂಡ ಯುವಕರ ಗುಂಪು ಕಟ್ಟಿಕೊಂಡು ಶವಸಂಸ್ಕಾರ ಸೇವೆ ಆರಂಭಿಸಿತು. ಜಾತಿ, ಧರ್ಮ ಮೀರಿದ ಸೇವೆ ಮೂಲಕ ಇವರು ಜನರ ಮನಗೆದ್ದರು.
ದೇಶದ ಇತರೆಡೆ ಸಮಾಜಸೇವಾ ಸಂಸ್ಥೆಗಳು ಶವಸಂಸ್ಕಾರಕ್ಕೆ ಮುಂದಾದ ಘಟನೆಗಳನ್ನು ವೀಕ್ಷಿಸಿದ್ದ ಇವರು ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದರು. ಸೂಕ್ತ ಮಾಹಿತಿ, ತರಬೇತಿ ಪಡೆದು ಕೆಲಸ ಆರಂಭಿಸಿದರು. ಸರ್ಕಾರ, ವಿವಿಧ ಸಂಘ–ಸಂಸ್ಥೆಗಳ ವಾಹನ ಸಿಗದಿದ್ದರೆ ತಾವೇ ಕೈಯಿಂದ ಹಣ ಹಾಕಿ ವಾಹನ ಬಾಡಿಗೆ ಪಡೆದರು. ಪಿಪಿಇ ಕಿಟ್ ಖರೀದಿಸಿದರು. ಹೀಗೆ ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತಪಟ್ಟ 69 ಮಂದಿಯ ಅಂತ್ಯ ಸಂಸ್ಕಾರವನ್ನು ಇವರು ನೆರವೇರಿಸಿದ್ದಾರೆ.
ಜಬೀಉಲ್ಲಾ, ಸೈಯದ್ ಅಹಮದ್, ಶಾರುಖ್, ಇರ್ಫಾನ್ ಅಹಮದ್, ರೆಹಮಾನ್, ಅಬ್ದುಲ್ ರಹೀಂ. ನಬೀಸಹಾ, ಜಿಶಾನ್ ಸನಾಉಲ್ಲಾ, ಮುನಾಫ್, ಇಮ್ರಾನ್, ರಫೀಕ್, ತನ್ವೀರ್, ರಶೀಂ, ವಜಾಹತ್, ಬುಬಾರಕ್, ಅಮ್ಜದ್ ಖಾನ್ ಅವರು ಸೇವಾ ತಂಡದ ಇತರೆ ಸದಸ್ಯರು.
‘ಕೋವಿಡ್ ರೋಗಿಗಳ ಶವಸಂಸ್ಕಾರದ ಯಾತ್ರೆಯಲ್ಲಿ 9 ತಿಂಗಳ ಗರ್ಭಿಣಿ ಸಾವು ಮನಕಲಕಿತ್ತು. ಮರಣೋತ್ತರ ಪರೀಕ್ಷೆಯ ನಂತರ ಹೊರತೆಗೆದ ಮಗುವಿನ ಸಹಿತ ಶವ ಹೂಳುವಾಗ ಕರುಳು ಕಿತ್ತುಬಂದಿತ್ತು. ಸರ್ಕಾರಿ ಅಧಿಕಾರಿಯೊಬ್ಬರು ಮೃತಪಟ್ಟಾಗ ಅವರ ಕುಟುಂಬದವರೇ ಹತ್ತಿರ ಸುಳಿಯಲಿಲ್ಲ. ಇಂತಹ ಘಟನೆಗಳು ತುಂಬಾ ದಿನಗಳು ಕಾಡಿದವು’ ಎನ್ನುತ್ತಾರೆ ಸಲೀಂ ಖಾನ್.
ಚಿತಾಗಾರದಲ್ಲಿ ಅನಸೂಯಮ್ಮನ ಬೆಳಕು
ಶಿವಮೊಗ್ಗ: ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ಶವಸಂಸ್ಕಾರ ಕಾರ್ಯ ನಿರ್ವಹಿಸಿದ ದಿಟ್ಟ ಮಹಿಳೆ ಅನಸೂಯಮ್ಮ. ಹಗಲು–ರಾತ್ರಿ ಅಲ್ಲೇ ಇದ್ದು ಶವಗಳನ್ನು ಕಾಯುವುದು, ಸುಡುವುದು; ನಂತರ ಅವರ ಸಂಬಂಧಿಕರು ಕೇಳಿದರೆ ಬೂದಿ ತುಂಬಿಕೊಡುವ ಕೆಲಸ ಮಾಡಿದ್ದಾರೆ. ಹಲವು ಬಾರಿ ಆರೋಗ್ಯ ಸಮಸ್ಯೆಗೆ ತುತ್ತಾದರೂ ಒಂದು ದಿನವೂ ವಿಶ್ರಾಂತಿ ಪಡೆಯದೇ ಸೇವೆ ಸಲ್ಲಿಸಿದ್ದಾರೆ.
ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ಬದುಕು ಕಟ್ಟಿಕೊಂಡಿರುವ ಅನಸೂಯಮ್ಮ 18 ವರ್ಷಗಳಿಂದ ಚಿತಾಗಾರಕ್ಕೆ ಬರುವ ಮೃತದೇಹಗಳನ್ನು ಅಂತ್ಯಕ್ರಿಯೆ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಅನಸೂಯಮ್ಮ 25 ವರ್ಷಗಳ ಹಿಂದೆ ಮದುವೆಯಾಗಿ ಶಿವಮೊಗ್ಗಕ್ಕೆ ಬಂದು ನೆಲೆಸಿದ್ದರು. ಚಿಕ್ಕಂದಿನಿಂದಲೇ ಬಡತನದಲ್ಲಿ ಬೆಳೆದ ಅನಸೂಯಮ್ಮಗೆ ಮದುವೆಯ ನಂತರವೂ ಉತ್ತಮ ಬದುಕು ಸಿಗಲಿಲ್ಲ. ಜೀವನ ಸಾಗಿಸಲು ಪತಿಯೊಂದಿಗೆ ರೋಟರಿ ಚಿತಾಗಾರಕ್ಕೆ ಬಂದು ಸೇರಿಕೊಂಡರು. ಇಲ್ಲಿಗೆ ಬಂದ ಅಲ್ಪ ಅವಧಿಯಲ್ಲಿಯೇ ಅನುಸೂಯಮ್ಮ ಗಂಡನನ್ನು ಕಳೆದುಕೊಂಡರು. ಅನಸೂಯಮ್ಮ ಅವರಿಗೆ ಮಕ್ಕಳಿಲ್ಲ. ನೆಂಟರಿಷ್ಟರಿದ್ದರೂ ಇಂತಹ ವೃತ್ತಿ ತಮಗೆ ಅವಮಾನ ಎಂದು ಭಾವಿಸಿ ದೂರ ಸರಿದಿದ್ದಾರೆ. ಹಿಂದೆ ಶವಸಂಸ್ಕಾರದ ಸಮಯದಲ್ಲಿ ಮೃತದೇಹಗಳನ್ನು ನಿರ್ವಹಿಸಿದ ರೀತಿಯೇ ಕೋವಿಡ್ ಮೃತ ದೇಹಗಳನ್ನೂ ದಹಿಸಲು ಸಹಕರಿಸಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಜನರು ಕೊಟ್ಟಷ್ಟೇ ಹಣ ಪಡೆದು ಸೇವೆ ಸಲ್ಲಿಸಿದ್ದಾರೆ.
ಸೋಂಕಿತರಿಗೆ ಉಸಿರಾದ ಡಾ.ಜಿ.ಆರ್.ಶ್ರೀಧರ್
ಶಿವಮೊಗ್ಗ: ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಗಳ ಚಿಕಿತ್ಸೆಗೆ ಹಿಂದೆಮುಂದೆ ನೋಡುತ್ತಿದ್ದ ಸಮಯದಲ್ಲಿ ರೋಗಿಗಳ ಮನೆಗಳಿಗೇ ತೆರಳಿ ಚಕಿತ್ಸೆ ನೀಡಿದವರು ಶಿವಮೊಗ್ಗದ ಶ್ರೀರಾಂಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಜಿ.ಆರ್.ಶ್ರೀಧರ್.
ಕೊಳಚೆ ಪ್ರದೇಶಗಳ ಮನೆಮನೆಗೆ ತೆರಳಿ ಕೋವಿಡ್ ಪೀಡಿತರಿಗೆ ಚಿಕಿತ್ಸೆ ನೀಡಿದ್ದಾರೆ. ಇತರೆ ಸಿಬ್ಬಂದಿ ಆರೋಗ್ಯ ಸಮಸ್ಯೆಯಿಂದ ರಜೆ ಪಡೆದಾಗಲೂ ಏಕಾಂಗಿಯಾಗಿ ತಿರುಗಿ ಜನರ ಆರೋಗ್ಯದ ಕಾಳಜಿ ವಹಿಸಿದ್ದಾರೆ. ಎಷ್ಟೋ ಬಾರಿ ಲ್ಯಾಬ್ ಟೆಕ್ನಿಷಿಯನ್, ಗ್ರೂಪ್ ‘ಡಿ’ ನೌಕರರ ಕೆಲಸಗಳನ್ನೂ ತಾವೇ ಮಾಡಿಕೊಂಡಿದ್ದಾರೆ.
ಪತ್ನಿ ಡಾ.ಉಮಾ ಸೀಗೆಹಟ್ಟಿ ವೈದ್ಯಾಧಿಕಾರಿ. ಪುತ್ರ ಜಿ.ಎಸ್.ಆದಿತ್ಯ ಒಬ್ಬರನ್ನೇ ಮನೆಯಲ್ಲಿ ಬಿಟ್ಟು, ಹೋಟೆಲ್‌ನಿಂದಲೇ ಊಟ ತಿಂಡಿ ತರಿಸಿಕೊಂಡು ಕೆಲವು ತಿಂಗಳು ರೋಗಿಗಳ ಆರೈಕೆ ಮಾಡಿದ್ದಾರೆ. ಇಡೀ ಕುಟುಂಬ ಸೋಂಕಿಗೆ ತುತ್ತಾದರೂ ವೇಗವಾಗಿ ಚೇತರಿಸಿಕೊಂಡು ಮತ್ತೆ ಜನರ ಸೇವೆಗೆ ಮರಳಿದ್ದರು.
ಚಿತ್ರದುರ್ಗದ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಚಿಕ್ಕಮ್ಮನಹಳ್ಳಿಯ ಶ್ರೀಧರ್ ಅವರು ಶ್ರೀರಾಂಪುರ ಆಸ್ಪತ್ರೆಗೆ ಬಂದು ಆರೂವರೆ ವರ್ಷಗಳಾಗಿವೆ. ಕೋವಿಡ್ ಕಾಣಿಸಿಕೊಂಡ ಆರಂಭದಲ್ಲಿ ರೈಲುನಿಲ್ದಾಣ, ಬಸ್ ನಿಲ್ದಾಣದ ಬಳಿ ತೆರಳಿ ಜನರ ಗಂಟಲು ದ್ರವ ಸಂಗ್ರಹಿಸಿದ್ದರು. ಹೊರಗಿನಿಂದ ಬಂದವರಿಗೆ ಚಿಕಿತ್ಸೆ ನೀಡುತ್ತಿದ್ದರು. ದಿನಕ್ಕೆ ನಾಲ್ಕೈದು ಪಿಪಿಇ ಕಿಟ್ ಧರಿಸಿ ಕೆಲಸ ಮಾಡಿದ್ದರು.
ತುಂಬು ಗರ್ಭಿಣಿಯಾಗಿದ್ದರೂ ಹಿಂದಡಿ ಇಡದ ರೂಪಾ
ಶಿವಮೊಗ್ಗ: ಒಂಬತ್ತು ತಿಂಗಳ ಗರ್ಭಿಣಿಯಾಗಿದ್ದರೂ ಕೋವಿಡ್ ಸಮಯದಲ್ಲಿ ಕರ್ತವ್ಯ ನಿರ್ವಹಿಸುವ ಮೂಲಕ ಸಮಾಜಕ್ಕೆ ಮಾದರಿಯಾದವರು ಶಿವಮೊಗ್ಗ ಜಿಲ್ಲೆಯ ಗಾಜನೂರಿನ ಎಸ್.ರೂಪಾ.
ತೀರ್ಥಹಳ್ಳಿಯ ಜಯಚಾಮರಾಜೇಂದ್ರ ಸಾರ್ವಜನಿಕ ಆಸ್ಪತ್ರೆಯಲ್ಲಿ ರೂಪಾ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ರಜೆ ತೆಗೆದುಕೊಳ್ಳದೇ ನಿತ್ಯವೂ 50 ಕಿ.ಮೀ. ದೂರ ಬಸ್‌ನಲ್ಲಿ ಸಂಚರಿಸಿ ಕೆಲಸ ಮಾಡಿದ್ದರು.
ಪತಿ ಪ್ರವೀಣ್‌ಕುಮಾರ್ ಎನ್.ರಾವ್ ಅವರ ಊರು ಶಿರಸಿ. ಸದ್ಯ ಅವರು ಬೆಂಗಳೂರಿನಲ್ಲಿ ಉದ್ಯೋಗಿ. ಗಾಜನೂರು ಇವರ ತವರು ಮನೆ. ತವರಿನಿಂದಲೇ ನಿತ್ಯವೂ ಓಡಾಡುತ್ತಿದ್ದರು.
‘ಜನರು ಸಂಕಷ್ಟದಲ್ಲಿ ಇರುವಾಗ ಮನೆಯಲ್ಲಿ ಕುಳಿತಿರಲು ಸಾಧ್ಯವಾಗದು. ಸೇವೆ ಸಲ್ಲಿಸಲು ಅವಕಾಶ ಕೊಡಿ ಎಂದು ಪತಿ ಪ್ರವೀಣ್, ತಂದೆ ಸುರೇಶ್, ತಾಯಿ ರಾಧಮ್ಮ ಅವರಲ್ಲಿ ವಿನಂತಿಸಿದೆ. ಅವರು ನನ್ನ ಕೋರಿಕೆಗೆ ಸಮ್ಮತಿಸಿದರು. ನಿತ್ಯವೂ ಸಂಚರಿಸುವ ಕೆಎಸ್‌ಆರ್‌ಟಿಸಿ ಸಿಬ್ಬಂದಿ, ಆಸ್ಪತ್ರೆಯ ವೈದ್ಯರು, ಸಹೋದ್ಯೋಗಿಗಳ ಸಹಕಾರವೂ ಕಾರಣ. ಹಾಗಾಗಿ, ಕೊರೊನಾ ವಾರಿಯರ್ ಆಗಿ ಸೇವೆ ಸಲ್ಲಿಸಲು ಸಾಧ್ಯವಾಯಿತು’ ಎನ್ನುತ್ತಾರೆ ರೂಪಾ.
ಜವಾಹರ್ ನವೋದಯದ ವಿದ್ಯಾರ್ಥಿನಿಯಾಗಿದ್ದ ಅವರಿಗೆ ಸೇವೆಯ ಹಂಬಲವಿದೆ. ಸದ್ಯ ಏಳು ತಿಂಗಳ ಪುತ್ರಿಯ ಆರೈಕೆಯಲ್ಲಿರುವ ಅವರು ಮತ್ತೆ ಕರ್ತವ್ಯಕ್ಕೆ ಮರಳಲು ಸಿದ್ಧತೆ ನಡೆಸಿದ್ದಾರೆ.
ಹಲ್ಲೆಗೊಳಗಾದರೂ ಧೃತಿಗೆಡದ ಗೀತಾ
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತ್ತಿದ್ದ ಸಮಯದಲ್ಲಿ ಹೊರ ದೇಶದಿಂದ ಬಂದವರನ್ನು ಕ್ವಾರೈಂಟೈನ್ ಮಾಡಲು ಹೋದಾಗ ಹಸೂಡಿ ಹಕ್ಕಿಪಿಕ್ಕಿ ಕ್ಯಾಂಪ್‌ನ ಕೆಲ ಜನರು ಆಶಾ ಕಾರ್ಯಕರ್ತೆ ಎಸ್.ಟಿ.ಗೀತಾ ಮೇಲೆ ಕಲ್ಲು ತೂರಾಟ ನಡೆಸಿ, ಹಲ್ಲೆ ಮಾಡಿದ್ದರು.
ಕಲ್ಲು ತೂರಾಟದಿಂದ ಗಾಯಗೊಂಡರೂ ಭಯ ಪಡದೇ ಕ್ಯಾಂಪ್‌ನ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಸಫಲರಾಗಿದ್ದರು. ಅಂತಹ ಕಠಿಣ ಪರಿಸ್ಥಿತಿಯಲ್ಲೂ ರಜೆ ಪಡೆಯದೇ ಜನರ ಸೇವೆ ಮಾಡಿದ್ದರು. ಮೊದಲು ಭಯಗೊಂಡರೂ ಪೊಲೀಸರು, ಹಿರಿಯ ಅಧಿಕಾರಿಗಳ ಸಹಕಾರದಿಂದ ಜನರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಕ್ವಾರಂಟೈನ್ ಏಕೆ ಅಗತ್ಯ ಎನ್ನುವುದನ್ನು ಅಲೆಮಾರಿ ಸಮುದಾಯಗಳಿಗೆ ಮನವರಿಕೆ ಮಾಡಿಸುವಲ್ಲಿ ಯಶ ಕಂಡಿದ್ದರು.
ಪತಿಯ ಜತೆ ಮೊದಲು ಕ್ಯಾಂಟೀನ್ ನಡೆಸುತ್ತಿದ್ದ ಗೀತಾ ಅವರು ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಮೂಲಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದರು. ಅಲೆಮಾರಿ ಮಕ್ಕಳಿಗೆ ಮನೆ ಪಾಠ ಹೇಳಿಕೊಡುತ್ತಿದ್ದರು. ಅಲ್ಲಿಗೆ ಬರುತ್ತಿದ್ದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಸೌಭಾಗ್ಯ, ಸತ್ಯನಾರಾಯಣ, ಅಂಗನವಾಡಿ ಶಿಕ್ಷಕಿ ಮಂಜುಳಾ ಬಾಯಿ ಅವರ ಜತೆ ಅಲ್ಲಿನ ಮಕ್ಕಳನ್ನು ಕರೆದುಕೊಂಡು ಚುಚ್ಚುಮದ್ದು ಕೊಡಿಸಲು ಸಹಕರಿಸುತ್ತಿದ್ದರು. ಇಂತಹ ಸೇವೆ ಮುಂದೆ ಆಶಾ ಕಾರ್ಯಕರ್ತೆಯಾಗಲು ಸಹಕಾರಿಯಾಯಿತು.
ಮೆಗ್ಗಾನ್‌ಗೆ ನೈರ್ಮಲ್ಯದ ಸ್ಪರ್ಶ ನೀಡಿದ ವಿಕಾಸ್
ಶಿವಮೊಗ್ಗ: ಕೋವಿಡ್ ಸಮಯದಲ್ಲಿ ಅತ್ಯಂತ ಸವಾಲಿನ ಕೆಲಸ ಕೋವಿಡ್ ರೋಗಿಗಳು ಬಳಸಿ, ಬಿಸಾಡಿದ ತ್ಯಾಜ್ಯ ವಿಲೇವಾರಿ. ಇಡೀ ಶಿವಮೊಗ್ಗ ಜಿಲ್ಲೆಗೆ ಒಂದೇ ಇದ್ದ ಮೆಗ್ಗಾನ್ ಆರೈಕೆ ಕೇಂದ್ರದಲ್ಲಿ ನಿತ್ಯವೂ ಸಂಗ್ರಹವಾಗುತ್ತಿದ್ದ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸಿದವರು ಮೆಗ್ಗಾನ್ ಆಸ್ಪತ್ರೆಯ ಘನತ್ಯಾಜ್ಯ ನಿರ್ವಹಣೆಯ ಉಸ್ತುವಾರಿ ವಹಿಸಿಕೊಂಡಿದ್ದ ವಿಕಾಸ್.
ಕಾಚಿನಕಟ್ಟೆ ಬಳಿಯ ಅಮೃತ್ತೂರಿನ ವಿಕಾಸ್ ಓದಿರುವುದು 10ನೇ ತರಗತಿ. ಮೊದಲು ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಅವರು 8 ವರ್ಷಗಳಿಂದ ಮೆಗ್ಗಾನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕೋವಿಡ್ ಆರಂಭಕ್ಕೂ ಮೊದಲು ವೈದ್ಯಕೀಯ ತ್ಯಾಜ್ಯವನ್ನು ನಿರ್ವಹಿಸುತ್ತಿದ್ದರು. ಬೆಳಿಗ್ಗೆ 7.30ಕ್ಕೆ ಬಂದರೆ ಸಂಜೆ 4ಕ್ಕೆ ಮರಳುತ್ತಿದ್ದರು. ಕೋವಿಡ್ ಸಮಯದಲ್ಲಿ ಸಮಯದ ಪರಿವೇ ಇಲ್ಲದೆ ಕೆಲಸ ಮಾಡಿದ್ದಾರೆ.
‘ಪಿಪಿಇ ಕಿಟ್ ಹಾಕುವುದು ಸುಲಭ. ತೆಗೆಯುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಸಿಬ್ಬಂದಿಗೆ ಅನುಭವ ಇಲ್ಲದ ಕಾರಣ ರಾತ್ರಿಯಾದರೂ ಅಲ್ಲೇ ಇದ್ದು ತೆಗೆಸುತ್ತಿದ್ದೆವು. ನಂತರ ಮಾಚೇನಹಳ್ಳಿ ಶುಶ್ರುತಾ ವೈದ್ಯಕೀಯ ತ್ಯಾಜ್ಯ ಘಟಕಕ್ಕೆ ಸುರಕ್ಷಿತವಾಗಿ ಕಳುಹಿಸಿ ಸುಡುತ್ತಿದ್ದೆವು. ತ್ಯಾಜ್ಯದಿಂದ ಸೋಂಕು ಹರಡದಂತೆ ಎಚ್ಚರವಹಿಸಿದೆವು’ ಎಂದು ವಿವರ ನೀಡಿದರು.
ಮಾರಣಾಂತಿಕ ಕಾಯಿಲೆ ಬಂದಾಗ ಹೇಗೆ ಕೆಲಸ ಮಾಡಬೇಕು? ಕೊರೊನಾ ವಾರಿಯರ್‌ಗಳು ಸೋಂಕಿಗೆ ಒಳಗಾಗದಂತೆ ಹೇಗೆ ಮುನ್ನೆಚ್ಚರಿಕೆ ವಹಿಸಬೇಕು ಎಂಬ ಸಮಯಪ್ರಜ್ಞೆ ಮುಖ್ಯ. ಕೆಲವು ಸಲ ಒಂದು ನಿಮಿಷ ತಡವಾದರೂ ರೋಗಿಗಳ ಜೀವ ಹೋಗುವ ಸಂಭವವಿರುತ್ತದೆ. ಕೋವಿಡ್ ಬದುಕಿನ ಸವಾಲು ಎದುರಿಸುವ ಪಾಠ ಕಲಿಸಿದೆ ಎನ್ನುವುದು ಅವರ ಮನದಾಳದ ಮಾತು.
ವಿಕಾಸ್ ಮತ್ತು ಅವರ ತಂಡದ ಶ್ರಮದ ಫಲವಾಗಿ ಕೋವಿಡ್ ಸಮಯದಲ್ಲೂ ಮೆಗ್ಗಾನ್ ಸ್ವಚ್ಛತಾ ಹಿರಿಮೆಗೆ ಪಾತ್ರವಾಗಿದೆ.
ಕಾನ್‌ಸ್ಟೆಬಲ್ ಚೌಡಪ್ಪರ ಸೇವಾ ಯಾತ್ರೆ
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಮೇ ಮೊದಲ ವಾರ ಮಹಾರಾಷ್ಟ್ರದಿಂದ ಬಂದಿದ್ದ ಶಿಕಾರಿಪುರದ ಒಂಬತ್ತು ಜನರಿಗೆ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಮೊದಲ ಪ್ರಕರಣ ಬೆಳಕಿಗೆ ಬಂದಿದ್ದರಿಂದ ಜಿಲ್ಲೆಯ ಜನರು ಭಯಗೊಂಡಿದ್ದರು. ಅವರನ್ನು ಪೊಲೀಸ್ ಸಂರಕ್ಷಣೆಯಲ್ಲಿ ಮೆಗ್ಗಾನ್ ಕೋವಿಡ್ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಬೇಕಿತ್ತು. ಪೊಲೀಸರು ರೋಗಿಗಳ ಸಮೀಪ ಹೋಗಲು ಸಿದ್ಧರಿರಲಿಲ್ಲ. ಇಂತಹ ಸಮಯದಲ್ಲಿ ಅವರಿಗೆ ನೆರವಾದವರು ದೊಡ್ಡಪೇಟೆ ಠಾಣೆಯ ಕಾನ್‌ಸ್ಟೆಬಲ್ ಚೌಡಪ್ಪ ಕಮತರ್.
ಅಲ್ಲಿಂದ ಅವರ ಕೋವಿಡ್ ಸೇವೆಯ ಯಾತ್ರೆ ಮುಂದುವರಿಯಿತು. ಹೊರ ರಾಜ್ಯ, ದೇಶಗಳಿಂದ ಬಂದವರನ್ನು ಗಾಜನೂರು, ರಾಗಿಗುಡ್ಡದ ಹಾಸ್ಟೆಲ್‌ಗಳಿಗೆ ಕರೆದುಕೊಂಡು ಹೋಗಿ ಕ್ವಾರಂಟೈನ್ ಮಾಡುವುದು. ಸೋಂಕು ತಗುಲಿದ ಪೊಲೀಸರಿಗೆ ನೆರವಾಗುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಆರು ತಿಂಗಳು ವಾರದ ರಜೆ ಸಹ ಪಡೆಯದೇ ಹಗಲು–ರಾತ್ರಿಗಳ ವ್ಯತ್ಯಾಸವಿಲ್ಲದೇ ಕೆಲಸ ಮಾಡಿದ್ದಾರೆ.
ಹಿರೇಕೆರೂರು ತಾಲ್ಲೂಕಿನ ಚಿಕ್ಕಕಬ್ಬಾರ್‌ನ ಕೂಲಿ ಕಾರ್ಮಿಕ ದಂಪತಿ ಮಲ್ಲಪ್ಪ, ರಂಗಮ್ಮ ಪುತ್ರ ಚೌಡಪ್ಪ ಮೊದಲು ಕೆಎಸ್‌ಆರ್‌ಟಿಸಿ ನೌಕರ. ತಂದೆಯ ಆಶಯದಂತೆ ಪೊಲೀಸ್ ಕೆಲಸಕ್ಕೆ ಸೇರಿದ್ದಾರೆ. ಮೆಗ್ಗಾನ್ ಮಕ್ಕಳ ವಾರ್ಡ್‌ಗೆ ಬೆಂಕಿ ತಗುಲಿದಾಗ ಡಾ.ಇರ್ಫಾನ್ ಅವರ ಜತೆ ಸೇರಿ 22 ಮಕ್ಕಳನ್ನು ಇವರು ರಕ್ಷಣೆ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.