ADVERTISEMENT

ಭೂಸ್ವಾಧೀನ ಪ್ರಕ್ರಿಯೆ ತಕ್ಷಣ ಪೂರ್ಣಗೊಳಿಸಿ

ರೈಲ್ವೆ ಮಾರ್ಗ; ಅಧಿಕಾರಿಗಳಿಗೆ ಸಂಸದ ಬಿ.ವೈ. ರಾಘವೇಂದ್ರ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 14:38 IST
Last Updated 19 ಜೂನ್ 2024, 14:38 IST
ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಸಂಸದ ಬಿ.ವೈ.ರಾಘವೇಂದ್ರ ಅಧಿಕಾರಗಳ ಸಭೆ ನಡೆಸಿದರು
ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಸಂಸದ ಬಿ.ವೈ.ರಾಘವೇಂದ್ರ ಅಧಿಕಾರಗಳ ಸಭೆ ನಡೆಸಿದರು   

ಶಿವಮೊಗ್ಗ: ಶಿಕಾರಿಪುರ-ರಾಣೆಬೆನ್ನೂರು ನೂತನ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮೊದಲ ಮತ್ತು ದ್ವಿತೀಯ ಹಂತದ ಭೂಸ್ವಾಧೀನ ಪ್ರಕ್ರಿಯೆ ತ್ವರಿತವಾಗಿ ಪೂರ್ಣಗೊಳಿಸಿ, ನಿಗದಿಪಡಿಸಿದ ಕಾಲಮಿತಿಯೊಳಗೆ ರೈತರಿಗೆ ಪರಿಹಾರಧನ ವಿತರಿಸಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಶಿವಮೊಗ್ಗ- ಶಿಕಾರಿಪುರ–ರಾಣೆಬೆನ್ನೂರು ರೈಲ್ವೆ ಲೈನ್ ವಿಸ್ತರಣೆ, ಭೂಸ್ವಾಧೀನ ಪ್ರಕ್ರಿಯೆ, ಪರಿಹಾರ ಧನ ವಿತರಣೆ, ರೈಲ್ವೆ ಮೇಲ್ಸೇತುವೆ ಮತ್ತು ಕೆಳಸೇತುವೆ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರೈಲ್ವೆ ಯೋಜನೆಯ ಭೂಸ್ವಾಧೀನ, ಯೋಜನಾ ವೆಚ್ಚಕ್ಕೆ ಸಂಬಂಧಿಸಿದಂತೆ ರಾಜ್ಯದ ಪಾಲಿನ ಹಣವನ್ನು ಸರ್ಕಾರ ಈಗಾಗಲೇ ಬಿಡುಗಡೆಗೊಳಿಸಿ ಅಗತ್ಯ ನೆರವು ಒದಗಿಸಿದೆ. ಅವರ ಸಹಕಾರದಿಂದ ರೈಲ್ವೆ ಯೋಜನೆಗಳಿಗೆ ಕೇಂದ್ರದಿಂದ ಹೆಚ್ಚಿನ ಅನುದಾನ ತರುವಲ್ಲಿ ಸಹಕಾರಿಯಾಗಿದೆ ಎಂದರು.

ADVERTISEMENT

ಹೊಸ ರೈಲು ಮಾರ್ಗದ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಕೆಲವು ರೈತರಿಗೆ ಪರಿಹಾರ ಧನ ಕೊಟ್ಟಿಲ್ಲ ಎಂಬ ದೂರುಗಳಿದ್ದು, ಸಂಬಂಧಿಸಿದ ಅಧಿಕಾರಿಗಳು ರೈತರೊಂದಿಗೆ ಚರ್ಚಿಸಿ ಪರಿಹಾರಧನ ನೀಡಬೇಕು. ಎರಡನೇ ಹಂತದಲ್ಲಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿರುವ ಕೃಷಿ ಭೂಮಿಗೆ ದರ ನಿಗದಿಪಡಿಸಬೇಕಾದ ಅಗತ್ಯವಿದೆ. ನೂತನ ರೈಲು ಮಾರ್ಗದಲ್ಲಿ ಅರಣ್ಯಭೂಮಿ ಮತ್ತು ಖಾಸಗಿ ಜಮೀನಿನಲ್ಲಿ ಬರುವ ಮರಗಳನ್ನು ಗುತ್ತಿಗೆದಾರರು ನಿಯಮಾನುಸಾರ ಅರಣ್ಯ ಇಲಾಖೆ ಅಧಿಕಾರಿಗಳ ಅನುಮತಿ ಪಡೆದು, ತೆರವುಗೊಳಿಸಬೇಕು. ಅಗತ್ಯವಿದ್ದಲ್ಲಿ ಅರಣ್ಯ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಸಹಕಾರ ನೀಡಬೇಕು ಎಂದು ಸೂಚಿಸಿದರು.

ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವಲ್ಲಿ ಎದುರಾಗಬಹುದಾದ ಸಮಸ್ಯೆಗಳನ್ನು ಕೂಡಲೇ ಪರಹರಿಸಬೇಕು. ಮೊದಲ ಹಂತದ ಮಾರ್ಗದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡು ಗುತ್ತಿಗೆದಾರರಿಗೆ ಹಸ್ತಾಂತರಿಸಲಾಗಿದೆ. ಹಸ್ತಾಂತರಿಸಲಾದ ಭೂಮಿಯಲ್ಲಿ ಗುತ್ತಿಗೆದಾರರು ಕಾಮಗಾರಿ ಆರಂಭಿಸಬೇಕು. ಅಲ್ಲದೇ ರೈತರು ಮತ್ತೆ ಕೃಷಿ ಚಟುವಟಿಕೆ ಆರಂಭಿಸದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಶಿಕಾರಿಪುರ-ಶಿವಮೊಗ್ಗ ಮಾರ್ಗದಲ್ಲಿ 562 ಎಕರೆ ಭೂಮಿ ಗುರುತಿಸಲಾಗಿದೆ. ಆ ಪೈಕಿ 421 ಎಕರೆ ಭೂಮಿ ಈಗಾಗಲೇ ಗುತ್ತಿಗೆದಾರರಿಗೆ ಹಸ್ತಾಂತರಿಸಲಾಗಿದೆ. ಉಳಿದ ಭೂಮಿಯ ಸಮಸ್ಯೆ ತ್ವರಿತವಾಗಿ ಇತ್ಯರ್ಥಗೊಳಿಸಲು ಸೂಚಿಸಲಾಗಿದೆ. ಇಟ್ಟಿಗೆಹಳ್ಳಿ ಹಾಗೂ ಸುತ್ತಲಿನ ಪ್ರದೇಶದಲ್ಲಿನ ಮರಗಳ ತೆರವು ಕಾರ್ಯದ ಬಗ್ಗೆಯೂ ಕ್ರಮ ಕೈಗೊಳ್ಳಬೇಕು. ತಿಮ್ಮಲಾಪುರ ಮತ್ತು ದೂಪದಹಳ್ಳಿಯಲ್ಲಿನ ಮರಗಳ ತೆರವು ಕಾರ್ಯಕ್ಕೆ ತಕ್ಷಣ ಆದೇಶ ಹೊರಡಿಸಲು ಸೂಚಿಸಲಾಗಿದೆ ಎಂದರು.

ಎಸ್ಪಿ ಜಿ.ಕೆ. ಮಿಥುನ್‍ಕುಮಾರ್, ಡಿಸಿಎಫ್ ಶಿವಶಂಕರ್, ರೈಲ್ವೆ ಡೆಪ್ಯೂಟಿ ಚೀಫ್ ಎಂಜಿನಿಯರ್ ಪ್ರದೀಪ್‍ಪುರಿ, ಮೂರ್ತಿರಾಜು, ಹರ್ಷವರ್ಧನ್, ಮಹಾನಗರಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ, ವಿಶೇಷ ಭೂಸ್ವಾಧೀನಾಧಿಕಾರಿ ನಜ್ಮಾಬಾನು, ಉಪವಿಭಾಗಾಧಿಕಾರಿ ಯತೀಶ್, ಪ್ರೊಬೇಷನರ್ ಐಎಎಸ್ ಅಧಿಕಾರಿ ದೃಷ್ಟಿ ಜೈಸ್ವಾಲ್ ಉಪಸ್ಥಿತರಿದ್ದರು.

ನಿಗದಿಗಿಂತ ಹೆಚ್ಚು ಭೂಮಿ ಸ್ವಾಧೀನ ಸಲ್ಲ’

ಶಿಕಾರಿಪುರ ತಾಲ್ಲೂಕಿನ ಎಳನೀರುಕೊಪ್ಪ ಗ್ರಾಮದಲ್ಲಿ ರೈಲ್ವೆ ಇಲಾಖೆಯವರು ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಭೂಮಿ ಸ್ವಾಧೀನ ಪಡೆದುಕೊಂಡಿರುವ ಬಗ್ಗೆ ದೂರುಗಳಿವೆ. ಕೂಡಲೇ ಸರ್ವೆ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಸಂಸದ ಬಿ.ವೈ. ರಾಘವೇಂದ್ರ ಸೂಚಿಸಿದರು. ಎರಡನೇ ಹಂತದ ಭೂಸ್ವಾಧೀನ ಪ್ರಕ್ರಿಯೆ ನಿರೀಕ್ಷಿತ ಪ್ರಗತಿ ಆಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು ‘ಮುಂದಿನ ಎರಡು ತಿಂಗಳಲ್ಲಿ ರೈತರಿಗೆ ಪರಿಹಾರಧನ ಒದಗಿಸುವಂತೆ ಸೂಚಿಸಿದರು. ಕೆಲವು ಕಡೆ ಮಾರ್ಗ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಈಗಾಗಲೇ ಗುರುತಿಸಲಾದ ಮಾರ್ಗದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.