ADVERTISEMENT

ಶಿವಮೊಗ್ಗ | ಮಳೆಯ ಹೊಯ್ದಾಟ, ಬಿತ್ತನೆ ಕಾರ್ಯ ಕುಂಠಿತ

ಜೂನ್‌ನಲ್ಲಿ ವಾಡಿಕೆಗಿಂತ ಕಡಿಮೆ ಮಳೆ, ಮುಗಿಲಿನತ್ತ ಅನ್ನದಾತರ ಆಸೆಗಣ್ಣು

ವೆಂಕಟೇಶ ಜಿ.ಎಚ್.
Published 22 ಜೂನ್ 2024, 7:03 IST
Last Updated 22 ಜೂನ್ 2024, 7:03 IST
ಶಿವಮೊಗ್ಗ ತಾಲ್ಲೂಕಿನ ಕುಂಸಿ ಬಳಿ ಕೃಷಿ ಕಾರ್ಮಿಕರು ಮೆಕ್ಕೆಜೋಳ ಬಿತ್ತನೆಯಲ್ಲಿ ತೊಡಗಿದ್ದ ನೋಟ
ಶಿವಮೊಗ್ಗ ತಾಲ್ಲೂಕಿನ ಕುಂಸಿ ಬಳಿ ಕೃಷಿ ಕಾರ್ಮಿಕರು ಮೆಕ್ಕೆಜೋಳ ಬಿತ್ತನೆಯಲ್ಲಿ ತೊಡಗಿದ್ದ ನೋಟ   

ಶಿವಮೊಗ್ಗ: ಜೂನ್ ತಿಂಗಳು ಮುಗಿಯುತ್ತಾ ಬಂದರೂ ಮಳೆರಾಯನ ಮುಖದರ್ಶನ ಆಗದ ಕಾರಣ ಜಿಲ್ಲೆಯ ರೈತಾಪಿ ವರ್ಗ ಕಂಗಾಲಾಗಿದೆ.

ಆಗಾಗ ಸಾಂದ್ರಗೊಳ್ಳುವ ಮೋಡ ಹನಿಯುವುದೇ ಎಂದು ಆಸೆಗಣ್ಣಿನಿಂದ ಆಗಸದತ್ತ ಮುಖ ಮಾಡುತ್ತಿದ್ದಾರೆ. ಕಾರ ಹುಣ್ಣಿಮೆ ಹೊತ್ತಿಗೆ ಹಸಿರ ಚಿಗುರ ಹೊದ್ದು ಮುಂಗಾರು ಹಂಗಾಮಿನ ಸಮೃದ್ಧಿ ತೋರುತ್ತಿದ್ದ ಹೊಲಗಳು ಬಹಳಷ್ಟು ಕಡೆ ಬಟಾಬಯಲಾಗಿವೆ.

ಮೇ ತಿಂಗಳ ಕೊನೆಯಲ್ಲಿ ಅಬ್ಬರದ ಮಳೆ ನಂಬಿ ಬಿತ್ತನೆ ಮಾಡಿದವರು, ಬಿತ್ತನೆಗೆ ಹೊಲ ಹದ ಮಾಡಿಕೊಂಡವರು ಈಗ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಬಿತ್ತನೆಗೆ ಕೊಂಡು ತಂದ ಬೀಜ, ರಸಗೊಬ್ಬರ ಬಳಕೆಯಾಗದೇ ಉಳಿದಿವೆ. ಇನ್ನೊಂದು ವಾರ ಇದೇ ವಾತಾವರಣ ಮುಂದುವರೆದರೆ ಬಿತ್ತನೆ ಆದ ಬೀಜವನ್ನು ಅಳಿಸಬೇಕಾದ ಆತಂಕ ರೈತಾಪಿ ವರ್ಗದ್ದು.

ADVERTISEMENT

ಜೂನ್‌ನಲ್ಲೇ ಮಳೆ ಕೊರತೆ:

ಮೋಡ ಕಟ್ಟಿದರೂ ಆಷಾಢದ ಜೋರು ಗಾಳಿ ಅದನ್ನು ಹನಿಯಲು ಬಿಡುತ್ತಿಲ್ಲ. ಜೂನ್ 1ರಿಂದ 19ರವರೆಗೆ ಸಾಗರ ಹೊರತಾಗಿ ಉಳಿದೆಲ್ಲ ತಾಲ್ಲೂಕುಗಳಲ್ಲೂ ವಾಡಿಕೆಗಿಂತ ಕಡಿಮೆ ಮಳೆ ಆಗಿದೆ. ಇದು ಬಿತ್ತನೆ ಕಾರ್ಯಕ್ಕೆ ಅಡ್ಡಿಯಾಗಿದೆ.

ಈ ಅವಧಿಯಲ್ಲಿ (ಜೂನ್ 1ರಿಂದ 19) ಭದ್ರಾವತಿ ತಾಲ್ಲೂಕಿನಲ್ಲಿ ವಾಡಿಕೆಯಂತೆ 5.94 ಸೆಂ.ಮೀ ಮಳೆ ಆಗಬೇಕಿತ್ತು, 4.47 ಸೆಂ.ಮೀ.ನಷ್ಟು ಮಾತ್ರ ಆಗಿದೆ. ಹೊಸನಗರ ತಾಲ್ಲೂಕಿನಲ್ಲಿ 36.84 ಸೆಂ.ಮೀ ಆಗಬೇಕಿದೆ, ಬರೀ 18 ಸೆಂ.ಮೀ ಸುರಿದಿದೆ. ಸಾಗರ ತಾಲ್ಲೂಕಿನಲ್ಲಿ 25.41 ಸೆಂ.ಮೀ ಮಳೆಯಾಗಬೇಕಿದ್ದು, 28.48 ಸೆಂ.ಮೀ ಸುರಿದು ವಾಡಿಕೆಗಿಂತ ಶೇ 12ರಷ್ಟು ಹೆಚ್ಚಾಗಿದೆ. ಶಿಕಾರಿಪುರ ತಾಲ್ಲೂಕಿನಲ್ಲಿ 8.58 ಸೆಂ.ಮೀ ಮಳೆ ಸುರಿಯಬೇಕಿದ್ದು, 6.75 ಸೆಂ.ಮೀ, ಶಿವಮೊಗ್ಗದಲ್ಲಿ 6.78 ಸೆಂ.ಮೀ ಬದಲಿಗೆ 5.45 ಸೆಂ.ಮೀ, ಸೊರಬ ತಾಲ್ಲೂಕಿನಲ್ಲಿ 14.64 ಸೆಂ.ಮೀ ಮಳೆಯಾಗಬೇಕಿದೆ. ಅಲ್ಲಿ 7.15 ಸೆಂ.ಮೀ, ತೀರ್ಥಹಳ್ಳಿಯಲ್ಲಿ 28.17 ಸೆಂ.ಮೀ ವಾಡಿಕೆ ಮಳೆ ಆಗಬೇಕಿದೆ. 13.89 ಸೆಂ.ಮೀ ಮಳೆ ಸುರಿದಿದೆ.

ಮುಂಗಾರು ಹಂಗಾಮಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಭತ್ತ, ಹೈಬ್ರಿಡ್ ಜೋಳ, ರಾಗಿ, ಮೆಕ್ಕೆಜೋಳ, ತೊಗರಿ, ಅಲಸಂದೆ, ಹೆಸರು, ಉದ್ದು, ಅವರೆ, ಹುರುಳಿ, ಶೇಂಗಾ, ಗುರೆಳ್ಳು, ಎಳ್ಳು, ಸೂರ್ಯಕಾಂತಿ, ಸಾಸಿವೆ, ಹರಳು, ಸೋಯಾ ಅವರೆ, ಹತ್ತಿ, ತಂಬಾಕು, ಕಬ್ಬು ಬಿತ್ತನೆ ಮಾಡುತ್ತಾರೆ. ಇಲ್ಲಿಯವರೆಗೆ ಭತ್ತ, ಮೆಕ್ಕೆಜೋಳ, ರಾಗಿ ಬಿತ್ತನೆಯಲ್ಲಿ ಒಂದಷ್ಟು ಪ್ರಗತಿಯಾಗಿದೆ.

ಶಿಕಾರಿಪುರ ತಾಲ್ಲೂಕಿನಲ್ಲಿಯೇ ಅತಿಹೆಚ್ಚು ಬಿತ್ತನೆ ಕಾರ್ಯ ಆಗಿದೆ. ಮುಂಗಾರಿನಲ್ಲಿ ಅಲ್ಲಿ 31,729 ಹೆಕ್ಟೆರ್ ಬಿತ್ತನೆಯ ಗುರಿ ಹೊಂದಲಾಗಿದೆ. ಮೆಕ್ಕೆಜೋಳ ಹಾಗೂ ಜೋಳ ಬಿತ್ತನೆ ಹೆಚ್ಚಿದೆ. 16000 ಹೆಕ್ಟೆರ್ ಪ್ರದೇಶದಲ್ಲಿ ಪೂರ್ಣಗೊಂಡಿದೆ. ಶಿವಮೊಗ್ಗ ತಾಲ್ಲೂಕು ಎರಡನೇ ಸ್ಥಾನದಲ್ಲಿದ್ದು, 25,220 ಹೆಕ್ಟೆರ್ ಬಿತ್ತನೆಯ ಗುರಿ ಇದೆ. 10,000 ಹೆಕ್ಟೆರ್‌ ಪೂರ್ಣಗೊಂಡಿದೆ. ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಇನ್ನೂ ಬಿತ್ತನೆಯೇ ಆಗಿಲ್ಲ. ಮಳೆ ಆಧರಿಸಿ ತೀರ್ಥಹಳ್ಳಿ ಭಾಗದಲ್ಲಿ ಭತ್ತದ ನಾಟಿ ಕಾರ್ಯ ನಡೆಯುತ್ತದೆ. ಭದ್ರಾವತಿ ತಾಲ್ಲೂಕಿನಲ್ಲಿ 6,134 ಹೆಕ್ಟೆರ್ ಬಿತ್ತನೆಯ ಗುರಿ ಹೊಂದಲಾಗಿದ್ದು, 50 ಹೆಕ್ಟೆರ್‌ನಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಸಾಗರ ತಾಲ್ಲೂಕಿನಲ್ಲಿ 14,326 ಹೆಕ್ಟೆರ್ ಬಿತ್ತನೆ ಗುರಿ ಹೊಂದಲಾಗಿದೆ. ಇಲ್ಲಿಯವರೆಗೆ 860 ಹೆಕ್ಟೆರ್‌ನಲ್ಲಿ ಆಗಿದೆ. ಹೊಸನಗರ ತಾಲ್ಲೂಕಿನಲ್ಲಿ 8,795 ಹೆಕ್ಟೆರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಅದರಲ್ಲಿ 245 ಹೆಕ್ಟೆರ್ ಪೂರ್ಣಗೊಂಡಿದೆ. ಸೊರಬ ತಾಲ್ಲೂಕಿನಲ್ಲಿ 29,826 ಹೆಕ್ಟರ್‌ನಲ್ಲಿ ಬಿತ್ತನೆ ಆಗಬೇಕಿತ್ತು. ಅಲ್ಲಿ 5,362 ಹೆಕ್ಟೆರ್‌ನಲ್ಲಿ ಆಗಿದೆ.

ಮಳೆ ಕೊರತೆಯಿಂದ ಬಿತ್ತನೆಗೆ ಹಿನ್ನಡೆ ಆಗಿದೆ. ಮುಂಗಾರು ಹಂಗಾಮಿನಲ್ಲಿ 123580 ಹೆಕ್ಟೆರ್ ಬಿತ್ತನೆಯ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಬರೀ 32517 ಹೆಕ್ಟೆರ್ ಮಾತ್ರ ಬಿತ್ತನೆ ಆಗಿದೆ

- ಎಚ್.ಎಸ್‌. ಪೂರ್ಣಿಮಾ ಜಂಟಿ ನಿರ್ದೇಶಕಿ ಕೃಷಿ ಇಲಾಖೆ

ಜಲಾಶಯಗಳಿಗೂ ನೀರಿನ ಕೊರತೆ.. ಮಳೆಯ ಕೊರತೆಯಿಂದ ಜಿಲ್ಲೆಯಲ್ಲಿ ಜಲಾಶಯಗಳ ನೀರಿನಮಟ್ಟವೂ ಏರಿಕೆ ಆಗುತ್ತಿಲ್ಲ. ಗಾಜನೂರಿನ ತುಂಗಾ ಜಲಾಶಯ ವಾರದ ಹಿಂದೆ ತುಂಬುವ ಹಂತದಲ್ಲಿತ್ತು. ಆದರೆ ಮಳೆ ಕೊರತೆ ಜಲಾಶಯ ಪೂರ್ತಿಯಾಗಲು ಅನುವು ಮಾಡಿಲ್ಲ. ಭದ್ರಾ ಜಲಾಶಯದಲ್ಲಿ ಒಳಹರಿವು ಕಡಿಮೆ ಇದ್ದು ಜೂನ್‌ ಆರಂಭದಲ್ಲಿ 3000 ಕ್ಯುಸೆಕ್‌ಗೆ ಏರಿಕೆಯಾಗಿದ್ದ ಒಳಹರಿವು ಶುಕ್ರವಾರ 343 ಕ್ಯುಸೆಕ್‌ಗೆ ಇಳಿಕೆಯಾಗಿದೆ. ಇದು ನೀರಾವರಿ ಆಶ್ರಿತ ರೈತರ ಚಿಂತೆ ಹೆಚ್ಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.