ADVERTISEMENT

ಶಿವಮೊಗ್ಗ | ಪುನರ್ವಸು ಅಬ್ಬರ; ಮೌನ ಹೊದ್ದ ಮಲೆನಾಡು

ಮುಂದುವರಿದ ಮಳೆ ಹಾಡು; ತುಂಗೆಯ ಮುನಿಸು, ಜಿಲ್ಲಾಡಳಿತದ ಮುನ್ನೆಚ್ಚರ

ವೆಂಕಟೇಶ್ ಜಿ.ಎಚ್
Published 17 ಜುಲೈ 2024, 5:27 IST
Last Updated 17 ಜುಲೈ 2024, 5:27 IST
ಶಿವಮೊಗ್ಗದಲ್ಲಿ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಕೋರ್ಪಾಲಯ್ಯನ ಛತ್ರದ ಮಂಟಪದ ಬಳಿ ಮಂಗಳವಾರ ಸಾರ್ವಜನಿಕರು ಪೂಜೆ ಸಲ್ಲಿಸಿದರು
ಶಿವಮೊಗ್ಗದಲ್ಲಿ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಕೋರ್ಪಾಲಯ್ಯನ ಛತ್ರದ ಮಂಟಪದ ಬಳಿ ಮಂಗಳವಾರ ಸಾರ್ವಜನಿಕರು ಪೂಜೆ ಸಲ್ಲಿಸಿದರು   

ಶಿವಮೊಗ್ಗ: ಮಲೆನಾಡಿನಲ್ಲಿ ಪುನರ್ವಸು ಮಳೆ ಹಾಡು ತಾರಕಕ್ಕೇರಿದೆ. ಮಳೆಯ ರಾಗದ ಅಬ್ಬರಕ್ಕೆ ಗಿಡ, ಮರ, ಬಳ್ಳಿ, ರಸ್ತೆ, ಕಟ್ಟಡ, ಕಾನು, ಪ್ರಾಣಿ, ಪಕ್ಷಿ, ಘಟ್ಟ, ಕಣಿವೆ, ಜನ, ಮನ ಎಲ್ಲವೂ ಮೌನಕ್ಕೆ ಜಾರಿವೆ. ಹಗಲು–ಇರುಳ ಬೆಳಕಿನಾಟವ ಮರೆತು ಮಳೆಯ ಮಜ್ಜನದ ಸುಖ ಅನುಭವಿಸುತ್ತಿವೆ.

ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಲ್ಲಿ ಸೋಮವಾರ ರಾತ್ರಿಯಿಡೀ ಕುಂಭದ್ರೋಣ ಮಳೆ ಆರ್ಭಟಿಸಿತು. ಮಂಗಳವಾರ ಹಗಲು ಕೂಡ ಮಳೆರಾಯ ಅದೇ ಧೋರಣೆ ಮುಂದುವರೆಸಿದ. ಈ ಬಾರಿ ಮುಂಗಾರು ತಡವಾಗಿದ್ದಕ್ಕೆ ಇಳೆಯ ಮುನಿಸು ಮರೆಸುವಂತೆ ತಬ್ಬಿನಿಂತ. ಇದರಿಂದ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು.

ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಪ್ರಮುಖ ನದಿಗಳು ತುಂಬಿ ಹರಿಯತೊಡಗಿವೆ. ತುಂಗೆ ಅಪಾಯದ ಮಟ್ಟ ಮೀರುವ ತವಕದಲ್ಲಿದ್ದಾಳೆ. ಭದ್ರೆ, ಶರಾವತಿ, ಮಾಲತಿ, ಕುಮದ್ವತಿ ಸೇರಿದಂತೆ ಬಹುತೇಕ ಎಲ್ಲ ನದಿಗಳು ಮೈದುಂಬಿವೆ. ಅಗಾಧ ಜಲರಾಶಿ ಜಲಾಶಯಗಳ ಒಡಲು ತಬ್ಬುತ್ತಿದೆ.

ADVERTISEMENT

ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ: ಗಾಜನೂರಿನ ತುಂಗಾ ಜಲಾಶಯ ಭರ್ತಿ ಆಗಿ, 61,757 ಕ್ಯುಸೆಕ್ ದಾಖಲೆಯ ಪ್ರಮಾಣದ ನೀರು ನದಿಗೆ ಹರಿಯುತ್ತಿದೆ. ಇದರಿಂದ ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಸೃಷ್ಟಿಯಾಗಿದೆ. ವಾಸ್ತವ ಸ್ಥಿತಿ ಅರಿಯಲು ಮಂಗಳವಾರ ಬೆಳಿಗ್ಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನೀರಿನ ಹರಿವು, ಮಳೆಯ ಪ್ರಮಾಣ, ನದಿ ಪಾತ್ರದ ಜನರ ಸುರಕ್ಷತೆಯ ಬಗ್ಗೆ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳಿಂದ ಮಾಹಿತಿ ಪಡೆದರು. ಜಲಾಶಯಕ್ಕೆ ಹರಿದುಬರುತ್ತಿರುವ ನೀರಿನ ಅಗಾಧತೆ ಹಾಗೂ 21 ಕ್ರಸ್ಟ್‌ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಯುತ್ತಿರುವುದನ್ನು ಜಿಲ್ಲಾಧಿಕಾರಿ ಕಣ್ತುಂಬಿಕೊಂಡರು.

ತುಂಗಾ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದುಬರುತ್ತಿರುವುದರಿಂದ ಶಿವಮೊಗ್ಗದ ಕೋರ್ಪಲಯ್ಯ ಛತ್ರ ಸಮೀಪದ ಕಲ್ಲಿನ ಮಂಟಪ ಸಂಪೂರ್ಣ ನೀರಿನಲ್ಲಿ ಮುಳುಗಡೆ ಆಗಿದೆ. ಉಕ್ಕಿ ಹರಿಯುತ್ತಿರುವ ತುಂಗಾ ನದಿಯ ಮನಮೋಹಕ ದೃಶ್ಯ ಕಣ್ತುಂಬಿಕೊಳ್ಳಲು ನೂರಾರು ಸಂಖ್ಯೆಯಲ್ಲಿ ಜನರು ನದಿ ದಂಡೆಯಲ್ಲಿ ಜಮಾಯಿಸಿದ್ದರು. ಕೆಲವರು ಕುಟುಂಬ ಸಮೇತ ತುಂಗೆಗೆ ಭಾಗೀರಥಿ ಪೂಜೆ ಸಲ್ಲಿಸಿದರು.

ಲಿಂಗನಮಕ್ಕಿಗೆ 24 ಗಂಟೆಯಲ್ಲಿ 4 ಅಡಿ ನೀರು: ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರ ಲಿಂಗನಮಕ್ಕಿ ಜಲಾಶಯದ ಒಳಹರಿವು 77,911 ಕ್ಯುಸೆಕ್‌ಗೆ ಹೆಚ್ಚಳವಾಗಿದೆ. ಇದು ಈಚಿನ ವರ್ಷಗಳಲ್ಲಿ ಅತಿಹೆಚ್ಚಿನ ಪ್ರಮಾಣದ ಒಳಹರಿವು. ಕಳೆದ ವರ್ಷ ಮಳೆಯ ಕೊರತೆಯಿಂದ ಸೊರಗಿ ಸುಣ್ಣವಾಗಿದ್ದ ಲಿಂಗನಮಕ್ಕಿಗೆ ಹೊಸ ಕಳೆ ತರುತ್ತಿದೆ. ಗರಿಷ್ಠ 1,819 ಗರಿಷ್ಠ ಸಾಮರ್ಥ್ಯದ ಜಲಾಶಯದಲ್ಲಿ ನೀರಿನ ಮಟ್ಟ 1,782. 15 ಅಡಿಗೆ ತಲುಪಿದೆ. ಕಳೆದ 24 ಗಂಟೆಯಲ್ಲಿ 4 ಅಡಿ ನೀರು ಸಂಗ್ರಹವಾಗಿದೆ. ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಲಿಂಗನಮಕ್ಕಿ ಜಲಾನಯನ ಪ್ರದೇಶದ ಯಡೂರು, ಮಾಸ್ತಿಕಟ್ಟೆ, ಹುಲಿಕಲ್ ಘಾಟ್, ನಗರ, ಸಂಪೇಕಟ್ಟೆ ಸೇರಿದಂತೆ ಹೊಸನಗರ ತಾಲ್ಲೂಕಿನಲ್ಲಿ ಮಳೆ ಒಂದೇ ಸಮನೆ ಅರ್ಭಟಿಸಿದೆ. ಮಾಣಿಯಲ್ಲಿ 24 ಸೆಂ.ಮೀ, ಯಡೂರು 22.9 ಸೆಂ.ಮೀ , ಸಾವೇಹಕ್ಲುವಿನಲ್ಲಿ 21 ಸೆಂ.ಮೀ ಮಳೆಯಾಗಿದೆ.

ರಸ್ತೆಗೆ ಅಡ್ಡಲಾಗಿ ಬಿದ್ದ ಮರ: ಧಾರಾಕಾರ ಮಳೆಯಿಂದಾಗಿ ಹೊಸನಗರ ತಾಲ್ಲೂಕಿನ ಹಳಗುಂದ ಗ್ರಾಮದಲ್ಲಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದ ಪರಿಣಾಮ ತೀರ್ಥಹಳ್ಳಿ, ಮಾಸ್ತಿಕಟ್ಟೆ, ಕುಂದಾಪುರ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಇದರಿಂದಾಗಿ ಮಂಗಳೂರು, ಉಡುಪಿ, ಕುಂದಾಪುರ, ಮಣಿಪಾಲ್‌ಗೆ ಹೋಗುವ ಪ್ರಯಾಣಿಕರು ಪರದಾಡಿದರು. ಅರಣ್ಯ ಸಿಬ್ಬಂದಿ ಮರ ತೆರವುಗೊಳಿಸಿ ರಸ್ತೆಯನ್ನು ಸಂಚಾರ ಮುಕ್ತಗೊಳಿಸಿದರು.

ಭದ್ರಾ ಜಲಾನಯನ ವ್ಯಾಪ್ತಿಯ ಕುದುರೆಮುಖ, ಕೊಪ್ಪ, ಕಳಸ, ಜಯಪುರ, ಬಾಳೆಹೊನ್ನೂರು ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಕೊಪ್ಪ–ಹೊರನಾಡು ಸಂಪರ್ಕ ತಪ್ಪಿದೆ. ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ (27,389 ಕ್ಯುಸೆಕ್) ಒಳಹರಿವು ಇದ್ದು, ಗರಿಷ್ಠ ಮಟ್ಟ 186 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ನೀರಿನ ಮಟ್ಟ 144.7 ಅಡಿಗೆ ತಲುಪಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಸರಿಸುಮಾರು 3.6 ಅಡಿಯಷ್ಟು ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನದಂದು ಭದ್ರಾ ಡ್ಯಾಂನಲ್ಲಿ 141.3 ಅಡಿಯಷ್ಟು ನೀರು ಸಂಗ್ರಹವಾಗಿತ್ತು.

ಜಿಲ್ಲೆಯಲ್ಲಿ ಸತತ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಅಲ್ಲದೆ, ತಗ್ಗು ಪ್ರದೇಶಗಳ ಜನತೆಗೆ ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ. 

ಶಿವಮೊಗ್ಗದಲ್ಲಿ ಮಂಗಳವಾರ ಮಳೆಯ ನಡುವೆ ಮಕ್ಕಳ ನಡಿಗೆ..

Highlights - ತುಂಗಾ ಜಲಾಶಯ;80,000 ಕ್ಯುಸೆಕ್‌ಗಿಂತ ಹೆಚ್ಚು ನೀರು ಬಿಟ್ಟರೆ ಶಿವಮೊಗ್ಗದಲ್ಲಿ ಪ್ರವಾಹ ಸ್ಥಿತಿ ಎರಡು ವರ್ಷಗಳ ನಂತರ 70,000 ಕ್ಯುಸೆಕ್ ದಾಟಿದ ಒಳಹರಿವು 2019ರಲ್ಲಿ 1.50 ಲಕ್ಷ ಕ್ಯುಸೆಕ್ ಒಳಹರಿವು ದಾಖಲಿಸಿದ್ದ ಜಲಾಶಯ

Quote - ತುಂಗೆಯ ಮುನಿಸು ಸೇರಿದಂತೆ ಜಿಲ್ಲೆಯಲ್ಲಿ ಮಳೆಯಿಂದ ಆಗುವ ಹಾನಿ ಎದುರಿಸಲು ಸಿಬ್ಬಂದಿ ಸನ್ನದ್ಧವಾಗಿಟ್ಟಿದ್ದೇವೆ. ತೊಂದರೆಗೀಡಾದವರು ಆಯಾ ತಾಲ್ಲೂಕು ಅಧಿಕಾರಿಗಳನ್ನು ಶಿವಮೊಗ್ಗದಲ್ಲಿ ಪಾಲಿಕೆಯನ್ನು ಸಂಪರ್ಕಿಸಬಹುದು. ಗುರುದತ್ತ ಹೆಗಡೆ ಶಿವಮೊಗ್ಗ ಜಿಲ್ಲಾಧಿಕಾರಿ

Cut-off box - ಜಲಾಶಯ ಮಟ್ಟ ಜಲಾಶಯ;ನೀರಿನಮಟ್ಟ ಗರಿಷ್ಠ (ಅಡಿ);ಕಳೆದ ವರ್ಷ;ಹಾಲಿ;ನೀರಿನ ಒಳಹರಿವು (ಕ್ಯು);ಹೊರಹರಿವು ತುಂಗಾ;588.24;588.24;588.24;70038;70038 ಅಂಜನಾಪುರ ಜಲಾಶಯ;154.4;137.54;153.04;4513;ಶೂನ್ಯ ಅಂಬ್ಲಿಗೊಳ;193.5;173.28;187.78;462;ಶೂನ್ಯ ಚಕ್ರ;580.6;568.58;575.2;4006;ಶೂನ್ಯ

Cut-off box - ಹೊಸನಗರ ತಾಲ್ಲೂಕಿನಲ್ಲಿ ಅತಿಹೆಚ್ಚು ಮಳೆ ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಸರಾಸರಿ 8.26 ಸೆಂ.ಮೀ ಮಳೆ ಸುರಿದಿದೆ. ಹೊಸನಗರ ತಾಲ್ಲೂಕಿನಲ್ಲಿ ಅತಿಹೆಚ್ಚು ಸರಾಸರಿ 13.36 ಸೆಂ.ಮೀ ಸಾಗರ 12.91 ತೀರ್ಥಹಳ್ಳಿ 12.09 ಸೆಂ.ಮೀ ಸೊರಬ 5.85 ಶಿಕಾರಿಪುರ 5.79 ಶಿವಮೊಗ್ಗ 5.20 ಹಾಗೂ ಭದ್ರಾವತಿ ತಾಲ್ಲೂಕಿನಲ್ಲಿ 2.64 ಸೆಂ.ಮೀ ಮಳೆ ಸುರಿದಿದೆ.

Cut-off box - ಆಶ್ರಯ ಕೇಂದ್ರ ಹೆಲ್ಪ್‌ಲೈನ್ ಆರಂಭ ಗಾಜನೂರಿನ ತುಂಗಾ ಜಲಾಶಯದಿಂದ 80000 ಕ್ಯುಸೆಕ್‌ಗೂ ಹೆಚ್ಚು ನೀರು ಹೊರಗೆ ಬಿಟ್ಟರೆ ಶಿವಮೊಗ್ಗದ ಇಮಾಮ್ ಬಾಡ ಕುಂಬಾರಗುಂಡಿ ಬಾಪೂಜಿ ನಗರ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಲಿದೆ. ತುಂಗಾ ಜಲಾಶಯಕ್ಕೆ ಒಳಹರಿವು ಹೆಚ್ಚುತ್ತಿದ್ದು ಮಂಗಳವಾರ ಮಧ್ಯಾಹ್ನ 73399 ಕ್ಯುಸೆಕ್‌ಗೆ ಏರಿಕೆಯಾಗಿತ್ತು. ಸಂಜೆ 70038 ಕ್ಯುಸೆಕ್‌ ಇತ್ತು. ಹೀಗಾಗಿ ಪ್ರವಾಹದ ಮುನ್ನೆಚ್ಚರಿಗೆ ಶಿವಮೊಗ್ಗ ಮಹಾನಗರ ಪಾಲಿಕೆಯಿಂದ ಸೀಗೆಹಟ್ಟಿಯ ಸರ್ಕಾರಿ ಶಾಲೆ ರಾಮಣ್ಣ ಶೆಟ್ಟಿ ಪಾರ್ಕ್‌ನ ಸಮುದಾಯ ಭವನ ಹಾಗೂ ಬಾಪೂಜಿ ನಗರದ ಸರ್ಕಾರಿ ಶಾಲೆಯಲ್ಲಿ ಆಶ್ರಯ ಕೇಂದ್ರಗಳನ್ನು ತೆರೆಯಲಾಗಿದೆ. ಪ್ರವಾಹ ಪರಿಸ್ಥಿತಿಯಿಂದ ತೊಂದರೆಗೀಡಾದವರು ದಿನದ 24 ಗಂಟೆಯೂ ಹೆಲ್ಪ್‌ಲೈನ್ ಸಂಖ್ಯೆ: 18004257677 ಕರೆ ಮಾಡಬಹುದು ಎಂದು ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ ಮಾಹಿತಿ ನೀಡಿದರು.

Cut-off box - ಮಳೆಯಿಂದ 9 ಮನೆಗಳಿಗೆ ಹಾನಿ: ಡಿ.ಸಿ ಗಾಜನೂರು ಜಲಾಶಯದಿಂದ ಹೊರಹರಿವು ಹೆಚ್ಚಿರುವುದರಿಂದ ಶಿವಮೊಗ್ಗ ನಗರದಲ್ಲಿ ಅಲರ್ಟ್‌ ಘೋಷಿಸಲಾಗಿದೆ. ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೇ ರಾತ್ರಿ ವೇಳೆ ಜಲಾಶಯದಿಂದ ಹೊರಹರಿವು ಹೆಚ್ಚಿಸದಂತೆ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳಿಗೆ ಹೇಳಿದ್ದೇವೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ‘ಪ್ರಜಾವಾಣಿ’ಗೆ ತಿಳಿಸಿದರು. ಕಳೆದ ಮೂರು ದಿನಗಳಲ್ಲಿ 9 ಮನೆಗಳು ಬಿದ್ದಿವೆ. ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಪರಿಹಾರ ನೀಡಲಿದ್ದೇವೆ. ಮುಂದಿನ ಮೂರು ದಿನ ತಹಶೀಲ್ದಾರ್ ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗೆ ಜಾಗೃತವಾಗಿರಲು ಸೂಚಿಸಲಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.