ADVERTISEMENT

ರೈತರ ‌ನೋವು–ನಲಿವಿಗೆ ಸಂಘಟನೆ ಸ್ಪಂದಿಸಲಿ

ರೈತ ಸಂಘದ ಸ್ಥಾಪಕರಲ್ಲೊಬ್ಬರಾದ ಎಚ್.ಎಸ್.ರುದ್ರಪ್ಪ ಸ್ಮರಣೆ; ಸಾಣೇಹಳ್ಳಿ ಶ್ರೀ ಅಭಿಮತ

​ಪ್ರಜಾವಾಣಿ ವಾರ್ತೆ
Published 19 ಜುಲೈ 2023, 15:17 IST
Last Updated 19 ಜುಲೈ 2023, 15:17 IST
ಶಿವಮೊಗ್ಗದಲ್ಲಿ ಬುಧವಾರ ನಡೆದ ದಿವಂಗತ ಎಚ್‌.ಎಸ್.ರುದ್ರಪ್ಪ ಸಂಸ್ಮರಣೆ ಕಾರ್ಯಕ್ರಮಕ್ಕೂ ಮುನ್ನ ರೈತ ಸಂಘದ ಮುಖಂಡರೊಂದಿಗೆ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೆಜ್ಜೆ ಹಾಕಿದರು
ಶಿವಮೊಗ್ಗದಲ್ಲಿ ಬುಧವಾರ ನಡೆದ ದಿವಂಗತ ಎಚ್‌.ಎಸ್.ರುದ್ರಪ್ಪ ಸಂಸ್ಮರಣೆ ಕಾರ್ಯಕ್ರಮಕ್ಕೂ ಮುನ್ನ ರೈತ ಸಂಘದ ಮುಖಂಡರೊಂದಿಗೆ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೆಜ್ಜೆ ಹಾಕಿದರು   

ಶಿವಮೊಗ್ಗ: ‘ರಾಜ್ಯದಲ್ಲಿ ರೈತ ಸಂಘ ಹುಟ್ಟಿದ್ದೇ ಎಚ್.ಎಸ್.ರುದ್ರಪ್ಪ ಅವರಿಂದ. ರೈತರ ನೋವು‌ ನಲಿವುಗಳಿಗೆ ಸ್ಪಂದಿಸುವುದೇ ಅವರು ಸ್ಥಾಪಿಸಿದ ರೈತ ಸಂಘಟನೆಯ ಪ್ರಮುಖ ಆಶಯ’ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಶಿವಮೊಗ್ಗ ನಗರದ ಮತ್ತೂರು ರಸ್ತೆಯಲ್ಲಿರುವ ತೀರ್ಥಪ್ಪ ಕ್ಯಾಂಪ್‌ನಲ್ಲಿ ಬುಧವಾರ ಆಯೋಜಿಸಿದ್ದ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷ ದಿವಂಗತ ಎಚ್.ಎಸ್.ರುದ್ರಪ್ಪ ಅವರ ನೆನಪಿನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ರೈತರಿಗೆ ಹೋರಾಟ ಹಾಗೂ‌ ಸಂಘಟನೆಯ ಅರಿವು ಮೂಡಿಸಿದವರು ಎಚ್.ಎಸ್.ರುದ್ರಪ್ಪ. ಅಂತಹ ನಾಯಕರನ್ನು ಮರೆತಿರುವುದು ದುಖಃದ ಸಂಗತಿ. ರೈತ ಹೋರಾಟ ಹಾಗೂ ಸಂಘಟನೆಯ ಅರಿವು ಮೂಡಿಸಬೇಕಾದರೆ ರುದ್ರಪ್ಪ‌ ಅವರ ಜೀವನ ಪರಿಚಯ‌ ಅತ್ಯಂತ ಮುಖ್ಯ’ ಎಂದು ತಿಳಿಸಿದರು.

ADVERTISEMENT

‘ಕೃಷಿಕರ ಪರ ಹೋರಾಟ ನಡೆಸುವ, ಅವರ ಸಂಕಷ್ಟಗಳಿಗೆ ಸ್ಪಂದಿಸುವ ರೈತ ಸಂಘಟನೆಗಳು ಕಡಿಮೆ ಆಗುತ್ತಿವೆ. ರೈತ ಸಂಘಟನೆಗಳು ವಿಭಜನೆಯಾಗುತ್ತಿವೆ. ರೈತರ ನೋವುಗಳಿಗೆ ಸ್ಪಂದಿಸಲು‌‌‌ ಎಲ್ಲರೂ ಹೋರಾಟ ನಡೆಸಬೇಕಿದೆ ಎಂದರು.

‘ಸರ್ಕಾರಗಳು ರೈತರನ್ನು ಹಾಗೂ ಅವರು ನಡೆಸುವ ಹೋರಾಟಗಳ ಬಗ್ಗೆ ಉದಾಸೀನ ಮಾಡುತ್ತವೆ. ಸಂಘದ ಶಕ್ತಿ ಕುಂಠಿತವಾದಾಗ ಹೋರಾಟ ಕೂಡ ಕಷ್ಟ ಆಗುತ್ತದೆ. ಆದ್ದರಿಂದ ರೈತರ ಹೋರಾಟ ಗಟ್ಟಿಗೊಳಿಸಬೇಕು’ ಎಂದು ಹೇಳಿದರು.

‘ರಾಜ್ಯದಲ್ಲಿರುವ ಎಲ್ಲ ರೈತ ಸಂಘಟನೆಗಳು ಒಟ್ಟಾಗಿ ರೈತಪರ ಹೋರಾಟ ನಡೆಸುವ, ಸಂಕಷ್ಟಗಳಿಗೆ ಸ್ಪಂದಿಸುವ ಅಂಶದ ಆಧಾರದಲ್ಲಿಯೇ ಕೆಲಸ ಮಾಡಬೇಕು. ರೈತರ ಹಿತಾಸಕ್ತಿಗಾಗಿ ಎಲ್ಲ ರೈತ ಸಂಘಟನೆಗಳು ಕೈಜೋಡಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ತಿಳಿಸಿದರು.

‘ರೈತರು ವಿಧಾನಸಭೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ, ರೈತರ ನೋವುಗಳಿಗೆ ಸ್ಪಂದಿಸುವ ರೈತ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಕೆಲಸ ಆಗಬೇಕು’ ಎಂದು ಎಚ್.ಎಸ್.ರುದ್ರಪ್ಪ‌ ಕುಟುಂಬದ ಸದಸ್ಯ ಎಚ್‌.ಟಿ.ರಮೇಶ್ ಹೇಳಿದರು. 

‘ಎಚ್.ಎಸ್.ರುದ್ರಪ್ಪ‌ ಅವರು ರೈತ ಚಳವಳಿಯ ಶಕ್ತಿ‌ ‌ಆಗಿದ್ದರು. ಅವರ ನೇತೃತ್ವದಲ್ಲಿ ರಾಜ್ಯಾದ್ಯಂತ ಮಿಂಚಿನ ರೀತಿಯಲ್ಲಿ ರೈತ ಸಂಘಟನೆ ಬೆಳೆಯಿತು. ಹೋರಾಟದ ಹಾದಿಯಲ್ಲಿ ಅನೇಕ ರೈತರು ಜೀವ ತ್ಯಾಗ ಮಾಡಿದ್ದಾರೆ. ರುದ್ರಪ್ಪನವರು ಯುವ ರೈತರಿಗೆ ಸ್ಫೂರ್ತಿ ಆಗಿದ್ದವರು ಹಾಗೂ ರೈತ ಚಳವಳಿಗೆ ಮಾರ್ಗದರ್ಶಕರಾಗಿದ್ದರು’ ಎಂದು ರಾಜ್ಯ ರೈತ ಸಂಘ, ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅಭಿಪ್ರಾಯಪಟ್ಟರು.

‘ರೈತ ಸಂಘಟನೆಗಳಲ್ಲಿ ಏನೇ ಭಿನ್ನಾಭಿಪ್ರಾಯ ಇರಲಿ, ರೈತ ಸಮುದಾಯದ ವಿಷಯ ಬಂದಾಗ ಪ್ರತಿಯೊಬ್ಬರು ಹಾಗೂ ಸಂಘಟನೆಗಳು ಜಾಗೃತರಾಗಿ ಒಂದಾಗಬೇಕು. ರೈತರಿಗಾಗಿ ಹೋರಾಟ ಮಾಡುವುದು ನಮ್ಮೆಲ್ಲರ ಕರ್ತವ್ಯ. ರೈತ ಸಂಘಟನೆಗಳನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕು’ ಎಂದು ತಿಳಿಸಿದರು.

ಎಚ್.ಎಸ್.ರುದ್ರಪ್ಪ‌ ಕುಟುಂಬ ಸದಸ್ಯರಾದ ಉಮೇಶ್, ಪರಮೇಶ್ವರಪ್ಪ, ಮಲ್ಲಪ್ಪ, ಚನ್ನಪ್ಪ, ಪುಷ್ಪಾ, ಪ್ರಮುಖರಾದ ಮಂಜುನಾಥ್ ಗೌಡ, ರೆಡ್ಡಿಹಳ್ಳಿ ವೀರಣ್ಣ, ಕೆಂಕೆರೆ ಸತೀಶ್, ಮಹಾದೇವಿ, ಭೀಮಸಿ ಗಡಾದಿ, ಬಸವಂತ ಕಾಂಬಳೆ, ಉಮಾದೇವಿ, ಕಮಲಮ್ಮ, ಸೈಯದ್ ಶಫಿವುಲ್ಲಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.