ಶಿವಮೊಗ್ಗ: ‘ವಿಧಾನಪರಿಷತ್‌ಗೆ ನೈರುತ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಸಿಗದೇ ಪಕ್ಷೇತರ ಅಭ್ಯರ್ಥಿ ಆಗಿ ಸ್ಪರ್ಧಿಸಿರುವ ರಘುಪತಿ ಭಟ್ ಅವರಿಗೆ ರಾಷ್ಟ್ರಭಕ್ತರ ಬಳಗದಿಂದ ಬೆಂಬಲಿಸುತ್ತಿದ್ದೇವೆ’ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಇಲ್ಲಿನ ಮಲ್ಲೇಶ್ವರ ನಗರದಲ್ಲಿನ ಕೆ.ಎಸ್. ಈಶ್ವರಪ್ಪ ಅವರ ಮನೆಯಲ್ಲಿ ರಾಷ್ಟ್ರಭಕ್ತರ ಬಳಗದ ಸದಸ್ಯರೊಂದಿಗೆ ಸಭೆ ನಡೆಸಿದ ಅವರು, ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರಘುಪತಿಭಟ್ ಅವರು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ಅಭಿವೃದ್ಧಿಶೀಲ ಮತ್ತು ಕ್ರಿಯಾಶೀಲ ರಾಜಕಾರಣಿ. ಜಾತಿ ಇಲ್ಲದ ವ್ಯಕ್ತಿ. ಅವರಿಗೂ ಕೆಲವು ವ್ಯಕ್ತಿಗಳು ಮೋಸ ಮಾಡಿದ್ದಾರೆ. ಪಕ್ಷದ ಸಾವಿರಾರು ಕಾರ್ಯಕರ್ತರ ಆಶಯದಂತೆ ಬಿಜೆಪಿ ಶುದ್ಧೀಕರಣವಾಗಬೇಕು. ಹೀಗಾಗಿ ಅವರನ್ನು ಬೆಂಬಲಿಸುವ ನಿರ್ಧಾರ ಕೈಗೊಂಡಿದ್ದೇವೆ ಎಂದರು.
ಬ್ರಹ್ಮ ಅಡ್ಡಬಂದರೂ ರಘುಪತಿ ಭಟ್‌ರ ಗೆಲುವು ತಪ್ಪಿಸಲು ಸಾಧ್ಯವಿಲ್ಲ. ಇನ್ನೊಬ್ಬ ಅಭ್ಯರ್ಥಿ ಆಯನೂರು ಮಂಜುನಾಥ್ ಅವರ ಪಕ್ಷ ನಿಷ್ಠೆ ಎಲ್ಲರಿಗೂ ಗೊತ್ತಿದೆ. ರಾಷ್ಟ್ರಭಕ್ತರ ಬಳಗದ ಸದಸ್ಯರು ನೈರುತ್ಯ ಪದವೀಧರ ಕ್ಷೇತ್ರದ ಎಲ್ಲಾ ಮತದಾರರನ್ನು ವೈಯುಕ್ತಿಕವಾಗಿ ಸಂಪರ್ಕಿಸಿ ರಘುಪತಿ ಭಟ್‌ಗೆ ಮತಹಾಕುವ ಹಾಗೆ ಮನವೊಲಿಸಬೇಕು ಎಂದು ಮನವಿ ಮಾಡಿದರು.
ಎ.ಶಂಕರ್ ಮಾತನಾಡಿ, ನನ್ನ ತಂದೆ ಆನಂದರಾವ್ ಗೆಲ್ಲಲು ನಾನು ಎರಡು ಬಾರಿ ನಗರಸಭೆ ಸದಸ್ಯನಾಗಿ ಅಧ್ಯಕ್ಷ ಆಗಲು ಈಶ್ವರಪ್ಪನವರೇ ಕಾರಣ. ಈ ಚುನಾವಣೆಯಲ್ಲಿ ರಘುಪತಿಭಟ್ ಮೊದಲ ಸ್ಥಾನದಲ್ಲಿದ್ದಾರೆ. ಎಲ್ಲೆಡೆ ಒಳ್ಳೆಯ ವಾತಾವರಣ ಇದೆ. ಅವರದ್ದು ಬಂಡಾಯ ಸ್ಪರ್ಧೆಯಲ್ಲ ಎಂದರು.
ರಘುಪತಿ ಭಟ್ ಮಾತನಾಡಿ, ಈಶ್ವರಪ್ಪನವರ ಬೆಂಬಲ ನನಗೆ ಶಕ್ತಿ ತುಂಬಿದೆ. ಉಡುಪಿಯ ಕನಕ ಗೋಪುರ ವಿವಾದ ಆದಾಗ ಈಶ್ವರಪ್ಪನವರು ಜಾತಿ ಮೀರಿ ಸಮಸ್ಯೆ ಬಗೆಹರಿಸಿದ್ದರು. ನನ್ನ ಸ್ಪರ್ಧೆ ಒಂದು ದಿನದ ನಿರ್ಧಾರವಲ್ಲ. ನನ್ನ ಗೆಲುವು ಬಿಜೆಪಿ ಕೇಂದ್ರ ನಾಯಕರಿಗೆ ಸ್ಪಷ್ಟ ಸಂದೇಶ ನೀಡಲಿದೆ. ವ್ಯವಸ್ಥೆ ಸರಿಮಾಡಬೇಕು ಎಂದಾಗ ಕೆಲವೊಂದು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ನಾನು ಬಿಜೆಪಿ ಕಾರ್ಯಕರ್ತರ ಬೆಂಬಲಿತ ಅಭ್ಯರ್ಥಿ ಎಂದರು.
ಡಾ. ಸರ್ಜಿ ಇದುವರೆಗೂ ನನ್ನನ್ನು ಒಂದು ಬಾರಿಯೂ ಸಂಪರ್ಕಿಸಲಿಲ್ಲ. ಯಾರೂ ನಿಂತರೂ ಬಿಜೆಪಿಯಲ್ಲಿ ಗೆಲ್ಲುತ್ತಾರೆ ಎಂಬ ಭಾವನೆ ಅವರಿಗೆ ಇದೆ. ಶಿವಮೊಗ್ಗದ ಪದವೀಧರರ ಬೆಂಬಲ ನನಗೆ ಬೇಕು. ನಾನು ಸದಾ ಕಾರ್ಯಕರ್ತರ ಜೊತೆಯಲ್ಲಿಯೇ ಇದ್ದವನು ನಿಮ್ಮ ಮತಕ್ಕೆ ನ್ಯಾಯ ಕೊಡುವ ಕೆಲಸ ಮಾಡುತ್ತೇನೆ ಎಂದರು
ಬಳಿಕ ರಾಷ್ಟ್ರಭಕ್ತರ ಬಳಗದಿಂದ ರಘುಪತಿ ಭಟ್ ಬೆಂಬಲಿಸಿ ಕರಪತ್ರ ಬಿಡುಗಡೆ ಮಾಡಲಾಯಿತು. ತೀರ್ಥಹಳ್ಳಿಯ ಬಿಜೆಪಿ ಪ್ರಮುಖರಾದ ಮದನ್, ಸಾಗರದ ವಾಟಗೋಡು ಸುರೇಶ್, ಭದ್ರಾವತಿಯ ಮಂಜುನಾಥ್ ಮಾತನಾಡಿ, ರಘುಪತಿ ಭಟ್ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೆ.ಇ.ಕಾಂತೇಶ್, ಕಾಚಿನಕಟ್ಟೆ ಸತ್ಯನಾರಾಯಣ್, ರಾಜಾರಾಮ್ ಭಟ್, ಸತ್ಯನಾರಾಯಣ್, ಗಂಗಾಧರ್, ಶ್ರೀಕಾಂತ್, ಜಾಧವ್, ರಾಜು, ಮೋಹನ್, ಲಿಂಗರಾಜ್ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.