ADVERTISEMENT

ಎಂಜಿನಿಯರಿಂಗ್ ಹುದ್ದೆಗೆ ತಿಲಾಂಜಲಿ: ಕೈಹಿಡಿದ ನರ್ಸರಿ

ಎಂಜಿನಿಯರಿಂಗ್‌ ಹುದ್ದೆಗೆ ತಿಲಾಂಜಲಿ ಇಟ್ಟು ನರ್ಸರಿಯತ್ತ ಮುಖ ಮಾಡಿದ ಅನಂತಮೂರ್ತಿ

ರಿ.ರಾ.ರವಿಶಂಕರ್
Published 8 ಡಿಸೆಂಬರ್ 2021, 4:01 IST
Last Updated 8 ಡಿಸೆಂಬರ್ 2021, 4:01 IST
ಅಂಕುರ್ ಫಾರ್ಮ ಮತ್ತು ನರ್ಸರಿಯಲ್ಲಿ ಸಸಿಗಳ ಆರೈಕೆ.
ಅಂಕುರ್ ಫಾರ್ಮ ಮತ್ತು ನರ್ಸರಿಯಲ್ಲಿ ಸಸಿಗಳ ಆರೈಕೆ.   

ರಿಪ್ಪನ್‌ಪೇಟೆ: ಅಂದಿನ ಕೆಇಬಿಯಲ್ಲಿಸಹಾಯಕ ಎಂಜಿನಿಯರಾಗಿ 18 ವರ್ಷಗಳು ಸೇವೆ ಸಲ್ಲಿಸಿದ್ದರಿಪ್ಪನ್‌ಪೇಟೆಯಅಂಕುರ್ ಫಾರ್ಮ ಮತ್ತು ನರ್ಸರಿ ಮಾಲೀಕ ಅನಂತಮೂರ್ತಿ ಕೃಷಿ ಮೇಲಿನ ಪ್ರೀತಿಗೆ ಹುದ್ದೆ ತೊರೆದು ನರ್ಸರಿಯಲ್ಲೇ ಉನ್ನತ ಬದುಕು ಕಟ್ಟಿಕೊಂಡಿದ್ದಾರೆ.

ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ಊರಿಗೆ ಮರಳಿದ ಬಳಿಕ ಎಂಟು ವರ್ಷಗಳು ಎಲೆಕ್ಟ್ರಿಕಲ್ ವರ್ಕ್‌ಶಾಪ್ ಆರಂಭಿಸಿ, ಗ್ರಾಮೀಣ ಯುವಕರಿಗೆ ಉದ್ಯೋಗ ಕಲ್ಪಿಸಿಕೊಟ್ಟರು. ಜತೆಗೆ ನರ್ಸರಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು. ಇಂದು ಅದನ್ನೇ ವಾಣಿಜ್ಯ ಉದ್ಯಮವಾಗಿ ಪರಿವರ್ತಿಸಿದ್ದಾರೆ.

ಮಲೆನಾಡು ಭಾಗದ ಉತ್ತಮ ಗುಣಮಟ್ಟದ, ಬಹುಬೇಡಿಕೆಯ ಹಲಸು ಮತ್ತು ಅಪ್ಪೆಮಿಡಿ ತಳಿಗಳನ್ನು ಗುರುತಿಸಿ, ಸಂಗ್ರಹಿಸಿ, ಕಸಿ ಮಾಡಿ ಅಭಿವೃದ್ಧಿಗೊಳಿಸಿದ ಕರ್ನಾಟಕದ ಮೊದಲಿಗರಲ್ಲಿ ಒಬ್ಬರು. ಅರಸಾಳು ಹೊಳೆ ಸಾಲಿನ ಅಪ್ಪೆಮಿಡಿಗೆ ಜನ ಮುಗಿಬಿದ್ದು ಕೊಳ್ಳುವುದನ್ನ ಗಮನಿಸಿದ್ದ ಅವರು ಕುಮದ್ವತಿ ನದಿ ತಟದಲ್ಲಿ ಬೆಳೆದ ಸಾಲು ಮರಗಳ ಮಿಡಿ ಮಾವಿನ ಗೋಟುಗಳನ್ನ ಅಯ್ದು ತಂದು ಕ್ರಮೇಣ ಕಸಿ ಕಟ್ಟಿ ಮಾರುಕಟ್ಟೆಗೆ ಪರಿಚಯಿಸಿದರು. ಈ ಕಸಿ ಮಾಡಿದ ಸಸಿಗಳಿಗೆ ಅಗಾಧ ಬೇಡಿಕೆ ಇದೆ. 2003ರಿಂದ ಪೂರ್ಣ ಪ್ರಮಾಣದಲ್ಲಿ ನರ್ಸರಿ ಚಟುವಟಿಕೆಗಳಲ್ಲೇ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ADVERTISEMENT

13 ಎಕರೆ ತೋಟದಲ್ಲಿ ಈ ಎಲ್ಲ ಗಿಡಗಳ ಮೂಲ ಮರ (ತಾಯಿ ಮರ) ಗಳನ್ನು ಬೆಳೆಸಿರುವುದು ವಿಶೇಷ. ಬಯಲು ಸೀಮೆಯ ಬರದ ನಾಡಿನಿಂದ ಮಲೆನಾಡಿಗೆಗುಳೆ ಬರುತ್ತಿದ್ದ ಕೂಲಿ ಕಾರ್ಮಿಕರಿಗೆ ವರ್ಷಪೂರ್ತಿ ಕೈತುಂಬ ಕೆಲಸ ನೀಡಿ, ನಿತ್ಯ70–80 ಕೂಲಿ ಆಳುಗಳನ್ನ ಬಳಸಿಕೊಂಡು ನರ್ಸರಿ ಉದ್ಯಮಕ್ಕೆ ಹೆಚ್ಚಿನ ಒತ್ತು ನೀಡಿದವರು.ರಾಜ್ಯದ ಉದ್ದಗಲಕ್ಕೂಸಂಚರಿಸಿ, ವೆನಿಲ್ಲಾ, ಮಾವು, ಹಲಸು, ಅಲಂಕಾರಿಕ ಗಿಡಗಳು ಸೇರಿದಂತೆ ಹೊಸ ಹೊಸ ತಳಿಗಳ ಬಗ್ಗೆ ಅನ್ವೇಷಣೆ ನಡೆಸುತ್ತ, ಹತ್ತು ಹಲವು ಗಿಡ ಮೂಲಿಕೆ ಸಸ್ಯ ಸಂಪತ್ತನ್ನು ಸಂಗ್ರಹಿಸಿ ತಮ್ಮ ನರ್ಸರಿಯಲ್ಲಿ ಬೆಳೆಸಿದ್ದಾರೆ.

ಕುಟುಂಬದ ಸದಸ್ಯರೇ ಕಾರ್ಮಿಕರೊಂದಿಗೆ ನರ್ಸರಿ ಸಂಪೂರ್ಣ ನಿರ್ವಹಣೆ ಮಾಡುತ್ತಿದ್ದಾರೆ. ತಾವೇ ಮಾರುಕಟ್ಟೆಗೆ ಮೊದಲು ಪರಿಚಯಿಸಿದ ಮಾವು– ಹಲಸು ತಳಿಗಳಿಗೆ ಹೆಚ್ಚಿನ ಆದ್ಯತೆ ನೀಡಿ, ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ಕಸಿ ಮಾಡಿ ಅಭಿವೃದ್ಧಿಗೊಳಿಸಿ ಮಾರಾಟಕ್ಕೆ ಸಿದ್ಧಪಡಿಸಿದ್ದಾರೆ. ಪ್ರತಿಯೊಂದು ತಳಿಗಳಫಸಲಿನ ಗುಣಮಟ್ಟ ಖಾತ್ರಿಯಾದ ಬಳಿಕವೇ ಸಸ್ಯಾಭಿವೃದ್ಧಿ ಮಾಡುತ್ತಾರೆ. ಎರಡು ವರ್ಷಕ್ಕೆಫಲ ನೀಡುವ ಕಡಿಮೆ ಜಾಗದಲ್ಲಿ ಹೆಚ್ಚುಇಳುವರಿ ನೀಡುವ ವಿದೇಶಿ ಮೂಲದ ಹಲಸು ಸಹ ಇಲ್ಲಿವೆ.

ಎಂಜಿನಿಯರಿಂಗ್‌ ಪದವೀಧರರಾದ ಪತ್ನಿ ಅರ್ಚನಾ ಜವಳಿ, ಪುತ್ರ ಅಮೋಘ ಜವಳಿ, ಸೊಸೆ ಕೀರ್ತಿ ನರ್ಸರಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.ಕಿರಿಯ ಮಗ ಅಲೋಕ್ ಜವಳಿ ಆಸ್ಟ್ರಿಯಾ ದೇಶದ ರಾಜಧಾನಿ ವಿಯೆನ್ನಾದ ವಿಶ್ವವಿದ್ಯಾಲಯದ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಾಹಿತಿಗೆ 9449311761 ಸಂಪರ್ಕಿಸಬಹುದು.

ಸಸ್ಯ ವೈವಿಧ್ಯ

ಥಾಯ್ಲೆಂಡ್ ಪಿಂಕ್ (ತಿಳಿ ಕಿತ್ತಳೆ ಬಣ್ಣದ ತೊಳೆ, ವರ್ಷಕ್ಕೆ ಎರಡು ಬೆಳೆ), ಸಿಂಗಾಪುರ್ ಸರ್ವಋತು ಹಲಸು (ಕೆಂಪು ಮಿಶ್ರಿತ ಕಿತ್ತಳೆ ಬಣ್ಣದ ತೊಳೆ, ವರ್ಷಕ್ಕೆ ಎರಡರಿಂದ ಮೂರು ಬೆಳೆ), ಪ್ರಕಾಶ್ ಚಂದ್ರ, ಮಲೇಶಿಯನ್ ಆಫ್ಸೀಸನ್/ಅಕಾಲ ಹಲಸು (ಕಿತ್ತಳೆ ಬಣ್ಣದ ಮೇಣರಹಿತ ತೊಳೆ, ಅಕ್ಟೋಬರ್‌ನಿಂದ ಮೇ ತಿಂಗಳವರೆಗೆ ಫಸಲು ನೀಡುವ ತಳಿ) ಸೇರಿದಂತೆ ವೈವಿಧ್ಯಮಯ ತಳಿಗಳು ಅಲ್ಲಿವೆ.

ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಬಿಡುಗಡೆಗೊಳಿಸಿದ ತುಮಕೂರು ಜಿಲ್ಲೆಯ ಚೇಳೂರಿನ ಪ್ರಸಿದ್ಧ ಕೆಂಪು ತೊಳೆಯ ಹಲಸು ಹಾಗೂ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯಿಂದ ಬಿಡುಗಡೆಗೊಳಿಸಿದ ತುಮಕೂರು ಜಿಲ್ಲೆಯ ಚೌಡಲಾಪುರ ಗ್ರಾಮದ ಪ್ರಸಿದ್ಧ ಕೆಂಪು ತೊಳೆಯ ಹಲಸು ತಳಿಗಳು ದೊರೆಯುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.