ADVERTISEMENT

ಆನಂದಪುರ: ಮರಗಳ ನಡುವೆಯೇ ಡಾಂಬರೀಕರಣ

​ಪ್ರಜಾವಾಣಿ ವಾರ್ತೆ
Published 4 ಜನವರಿ 2024, 5:26 IST
Last Updated 4 ಜನವರಿ 2024, 5:26 IST
ಆನಂದಪುರ ಸಮೀಪದ ರಾಷ್ಟ್ರೀಯ ಹೆದ್ದಾರಿ 766 ‘ಸಿ’ ಬಟ್ಟೆಮಲ್ಲಪ್ಪ ಬಳಿ ಮರಗಳ ನಡುವೆಯೇ ಡಾಂಬರೀಕರಣ ಮಾಡಿರುವುದು
ಆನಂದಪುರ ಸಮೀಪದ ರಾಷ್ಟ್ರೀಯ ಹೆದ್ದಾರಿ 766 ‘ಸಿ’ ಬಟ್ಟೆಮಲ್ಲಪ್ಪ ಬಳಿ ಮರಗಳ ನಡುವೆಯೇ ಡಾಂಬರೀಕರಣ ಮಾಡಿರುವುದು   

ಆನಂದಪುರ: ಬೈಂದೂರು ಹಾಗೂ ರಾಣೆಬೆನ್ನೂರು ನಡುವೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಈ ಮಾರ್ಗದಲ್ಲಿರುವ ಮರಗಳನ್ನು ಕಟಾವು ಮಾಡಲು ಅರಣ್ಯ ಇಲಾಖೆಯ ಅನುಮತಿ ಸಿಕ್ಕಿಲ್ಲ. ಅನುಮತಿ ದೊರಕದಿದ್ದರೂ  ತೊಂದರೆ ಇಲ್ಲ, ಕಾಮಗಾರಿ ಮಾಡುತ್ತೇವೆ ಎಂದು ಹಠಕ್ಕೆ ಬಿದ್ದಿರುವ ಗುತ್ತಿಗೆದಾರರು, ಮರಗಳ ನಡುವೆಯೇ ರಸ್ತೆಗೆ ಡಾಂಬರೀಕರಣ ಮಾಡಿದ್ದಾರೆ. ಈ ನಡೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಮರಗಳನ್ನು ಗುರುತಿಸಿ ಕಟಾವು ಆದ ಮೇಲೆ ಕಾಮಗಾರಿ ಆರಂಭ ಮಾಡಬೇಕಾಗಿತ್ತು. ಆದರೆ ಇಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಮರಗಳ ನಡುವೆ ಕಾಮಗಾರಿ ನಡೆಸಲಾಗಿದೆ. ಹೀಗೆ ಮಾಡುವುದರದಿಂದ ಅಪಘಾತಗಳು ಸಂಭವಿಸುವ ಸಾಧ್ಯತೆಯಿದೆ. ಇದರಿಂದ ಸಾರ್ವಜನಿಕ ಹಣ ಸಹ ಪೋಲಾಗುತ್ತದೆ. ಸಂಬಂಧಪಟ್ಟ ಇಲಾಖೆ ಗಮನಿಸಿ ಕ್ರಮತೆಗೆದುಕೊಳ್ಳಬೇಕು ಎಂಬುದು ಸಾರ್ವಜನಿಕರು ಒತ್ತಾಯಿಸಿದ್ದಾರೆ. 

ಕೇಂದ್ರ ಸರ್ಕಾರವು ಬೈಂದೂರು–ರಾಣೇಬೆನ್ನೂರು ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಗೆ ಮೇಲ್ದರ್ಜೆಗೇರಿಸಿ, ಆನಂದಪುರದಿಂದ ಬಟ್ಟೆಮಲ್ಲಪ್ಪ ಮಾರ್ಗದ ರಸ್ತೆ ಅಭಿವೃದ್ಧಿಗೆ ₹218 ಕೋಟಿ ಬಿಡುಗಡೆ ಮಾಡಿದೆ. ಕೆಲವಡೆ ರಸ್ತೆ ಕಾಮಗಾರಿ ಮುಗಿದಿದ್ದು, ಇನ್ನು ಕೆಲವೆಡೆ ಪ್ರಗತಿಯಲ್ಲಿದೆ. ಹೆದ್ದಾರಿ ಹಾದುಹೊಗುವ ಆನಂದಪುರದಿಂದ ಬಟ್ಟೆಮಲ್ಲಪ್ಪದವರೆಗೆ ಸಾಕಷ್ಟು ಮರಗಳು ಇವೆ. ಆನಂದಪುರದಿಂದ ಇರುವಕ್ಕಿ ಗ್ರಾಮದವರೆಗೆ ಮರ ತೆರವುಗೊಳಿಸಲು ಅನುಮತಿ ದೊರಕಿದ್ದು, ಹೊಸನಗರ ಅರಣ್ಯ ವ್ಯಾಪ್ತಿಗೆ ಬರುವ ಇರುವಕ್ಕಿಯಿಂದ ಬಟ್ಟೆಮಲ್ಲಪ್ಪ ವರೆಗೆ ತೆರವಿಗೆ ಅನುಮತಿ ದೊರಕಿಲ್ಲ. ಹೀಗಿದ್ದರೂ ಮರಗಳ ನಡುವೆಯೇ ತರಾತುರಿಯಲ್ಲಿ ಡಾಂಬರೀಕರಣ ಮಾಡುತ್ತಿರುವುದು ಏಕೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ADVERTISEMENT

‘ಬೈಂದೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸಂಸದ ಬಿ.ವೈ ರಾಘವೇಂದ್ರ ವಿಶೇಷ ಆಸಕ್ತಿಯಿಂದ ಕೇಂದ್ರದಿಂದ ಅನುದಾನ ತಂದಿದ್ದಾರೆ. ಕಳೆದ 2 ವರ್ಷಗಳಿಂದ ಈ ಕಾಮಗಾರಿ ನಡೆಯುತ್ತಿದ್ದು, ಅರಣ್ಯ ಇಲಾಖೆ ನಡೆಯಿಂದಾಗಿ  ಹಿನ್ನಡೆಯಾಗಿದೆ. ಊರು ಅಭಿವೃದ್ದಿಯಾಗಬೇಕಾದರೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿಯಾಗಬೇಕು. ಪರಿಸರವಾದಿಗಳ ನೆಪದಲ್ಲಿ ಮರ ಕಡಿತಲೆಗೆ ಅನುಮತಿ ದೊರಕದಿರುವುದು ಅಭಿವೃದ್ಧಿಗೆ ಹಿನ್ನಡೆಯಾಗಿದೆ’ ಎಂದು ಸ್ಥಳೀಯರಾದ ತಿರ್ಥೇಶ್ ಆಕ್ರೋಶ ವ್ಯಕ್ತಪಡಿಸಿದರು.

ಆನಂದಪುರ ಸಮೀಪದ ರಾಷ್ಟ್ರೀಯ ಹೆದ್ದಾರಿ 766 ‘ಸಿ’ ಬಟ್ಟೆಮಲ್ಲಪ್ಪ ಬಳಿ ಮರಗಳ ನಡುವೆಯೇ ಡಾಂಬರೀಕರಣ ಮಾಡಿರುವುದು
ಮರ ತೆರವಿಗೆ ಸಂಬಂಧಿಸಿದಂತೆ ಅರ್ಜಿಯು ಫಾರೆಸ್ಟ್ ಕ್ಲಿಯರೆನ್ಸ್ ಡಿಪಾರ್ಟ್ಮೆಂಟಿಗೆ (ಎಫ್.ಸಿ) ಹೋಗಿದೆ. ಹೊಸ ನಿಯಮದ ಪ್ರಕಾರ ಪರ್ಯಾಯ ಭೂಮಿಯನ್ನು ನೀಡಬೇಕಾಗುತ್ತದೆ. ಎರಡು ಹಂತದ ಅನುಮತಿಯ ನಂತರ ಮರ ತೆರವಿಗೆ ಅವಕಾಶ ನೀಡಲಾಗುವುದು
- ರಾಘವೇಂದ್ರ,  ವಲಯ ಅರಣ್ಯಾಧಿಕಾರಿ ಹೊಸನಗರ

‘ಹೆದ್ದಾರಿ ನಡುವೆ ಸುಮಾರು 250 ಮರಗಳಿದ್ದು ತೆರವಿಗೆ ಅರಣ್ಯ ಇಲಾಖೆ ಅನುಮತಿ ನೀಡದ ಕಾರಣ ಕಾಮಗಾರಿ ನಿಧಾನವಾಗಿ ನಡೆಯುತ್ತಿದೆ. ಅರಣ್ಯ ಇಲಾಖೆ ಸೂಚಿಸಿದ ಎಲ್ಲ ನಿಯಮಗಳನ್ನು ಪಾಲನೆ ಮಾಡಲಾಗಿದ್ದರೂ ಅನುಮತಿ ನೀಡುತ್ತಿಲ್ಲ. ಈಗ ಬದಲಿ ಜಾಗ ಕೇಳುತ್ತಿದ್ದಾರೆ. ಇದು ಸಾಧ್ಯವಾಗುವುದಿಲ್ಲ. ಅಪಘಾತವಾದರೆ ಅರಣ್ಯ ಇಲಾಖೆ ಹಾಗೂ ಪರಿಸರವಾದಿಗಳೇ ಕಾರಣರಾಗುತ್ತಾರೆ. ರಸ್ತೆ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ಅರಣ್ಯ ಇಲಾಖೆಯ ಅನುಮತಿಯ ನಂತರ ಕಾಮಗಾರಿ ತ್ವರಿತಗೊಳಿಸಲಾಗುವುದು’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಪೀರ್ ಪಾಷಾ ಮಾಹಿತಿ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.