ಶಿವಮೊಗ್ಗ: ಇಲ್ಲಿನ ಗಾಂಧಿಬಜಾರ್‌ನ ತಿರುಪಳಯ್ಯನ ಕೇರಿಯ ಸಂಪತ್ ಜ್ಯವೆಲರಿ ಶಾಪ್‌ನಲ್ಲಿ ಗ್ರಾಹಕರಂತೆ ನಟಿಸಿ ₹3.51 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ.
ಉಂಗುರ ಹಾಗೂ ಬೆಳ್ಳಿ ದೀಪ ಖರೀದಿಯ ನೆಪದಲ್ಲಿ ಜ್ಯುವೆಲ್ಲರಿ ಶಾಪ್‌ಗೆ ಬಂದಿದ್ದ ಮೂವರು ಮಹಿಳೆಯರು ಹಾಗೂ ಒಬ್ಬ ಪುರುಷ ಅಂಗಡಿಯವರ ಕಣ್ತಪ್ಪಿಸಿ ಒಡವೆಗಳ ಬಾಕ್ಸ್ ದೋಚಿದ್ದಾರೆ.
ಅಂಗಡಿಗೆ ಬಂದವರಲ್ಲಿ ಇಬ್ಬರು ಯುವತಿಯರು ಮದುವೆಗೆ ಉಡುಗೊರೆ ಕೊಡಲು ಬಂಗಾರದ ಉಂಗುರ ತೋರಿಸುವಂತೆ ಕೇಳಿದ್ದಾರೆ. ಆಗ ಅಂಗಡಿ ಮಾಲೀಕರು ಡಿಸ್‌ಪ್ಲೇ ಬಾಕ್ಸ್‌ನಲ್ಲಿದ್ದ ಉಂಗುರ ತೋರಿಸಿದ್ದಾರೆ. ಅದಕ್ಕಿಂತ ಕಡಿಮೆ ತೂಕದ ಉಂಗುರ ತೋರಿಸಲು ಕೇಳಿದ್ದಾರೆ. ಆಗ ಮಾಲೀಕರು ಲಾಕರ್ ರೂಂಗೆ ಹೋಗಿ ಬೇರೆ ಉಂಗುರ ತಂದು ತೋರಿಸಿದಾಗ ಇದು ಬೇಕಿದೆ. ಮನೆಯವರನ್ನು ಕರೆದುಕೊಂಡು ಬಂದು ಖರೀದಿಸುತ್ತೇನೆ ಎಂದು ಹೇಳಿ ಹೊರಟು ಹೋಗಿದ್ದಾರೆ.
ಆ ತಂಡದಲ್ಲಿದ್ದ ಪುರುಷ ಹಾಗೂ ಮಹಿಳೆ ಕಡಿಮೆ ಬೆಲೆಯ ಬೆಳ್ಳಿ ದೀಪ ತೋರಿಸಿ ಎಂದು ಹೇಳಿ ನಂತರ ಬರುತ್ತೇವೆ ಎಂದು ಅವರೂ ವಾಪಸ್ ಹೋಗಿದ್ದಾರೆ. ಡಿಸ್‌ಪ್ಲೇ ಬಾಕ್ಸ್‌ನಲ್ಲಿದ್ದ ಉಂಗುರ ಕಾಣದೇ ಇದ್ದಾಗ ಸಿ.ಸಿ ಟಿವಿ ಕ್ಯಾಮೆರಾ ಪರಿಶೀಲಿಸಿದ್ದು, ಆಗ ಕಳ್ಳತನದ ಸಂಗತಿ ಗೊತ್ತಾಗಿದೆ. ಅಂಗಡಿ ಮಾಲೀಕರು ಲಾಕರ್ ರೂಂಗೆ ಹೋದಾಗ ಚಿನ್ನದ ಒಡವೆಗಳಿದ್ದ ಪ್ಲಾಸ್ಟಿಕ್ ಬಾಕ್ಸ್ ನ್ನು ಯುವತಿ ಒಳ ಉಡುಪಿನಲ್ಲಿ ಹಾಕಿಕೊಂಡಿರುವುದು ಕಂಡುಬಂದಿದೆ. ಈ ಬಗ್ಗೆ ಅಂಗಡಿ ಮಾಲೀಕ ಬಿ.ಹರ್ಷ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ಲಾಸ್ಟಿಕ್ ಒಡವೆಗಳ ಬಾಕ್ಸ್‌ನಲ್ಲಿದ್ದ ₹84 ಸಾವಿರ ಬೆಲೆಯ 16 ಗ್ರಾಂ ತೂಕದ ಮಾಂಟಿಕಾ, ₹ 73 ಸಾವಿರ ಮೌಲ್ಯದ 14 ಗ್ರಾಂ ತೂಕದ 10 ಲಕ್ಷ್ಮಿ ಕಾಸುಗಳು, ₹1.10 ಲಕ್ಷ ಮೌಲ್ಯದ 9 ಚಿನ್ನದ ತಾಳಿಗಳು, ₹63 ಸಾವಿರ ಬೆಲೆಯ 7 ಜೊತೆ ಬುಗಡಿ, ₹21 ಸಾವಿರ ಬೆಲೆಯ ಮೂಗುಬೊಟ್ಟುಗಳು ಸೇರಿದಂತೆ ₹3,51 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.