ADVERTISEMENT

ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ: ಅಹೋರಾತ್ರಿ ಧರಣಿ

ಕಾಂಗ್ರೆಸ್, ಬಿಜೆಪಿ ವಿರುದ್ಧ ಮೊಳಗಿದ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 14:51 IST
Last Updated 21 ಅಕ್ಟೋಬರ್ 2024, 14:51 IST
ಸಾಗರದಲ್ಲಿ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಸೋಮವಾರ ಆರಂಭಗೊಂಡ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಚಾಲನೆ ನೀಡಿದರು
ಸಾಗರದಲ್ಲಿ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಸೋಮವಾರ ಆರಂಭಗೊಂಡ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಚಾಲನೆ ನೀಡಿದರು   

ಸಾಗರ: ಮುಳುಗಡೆ ಸಂತ್ರಸ್ತರಿಗೆ, ಅರಣ್ಯ ಭೂಮಿ ಸಾಗುವಳಿದಾರರಿಗೆ ಭೂಮಿಯ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಸೋಮವಾರ ಅನಿರ್ದಿಷ್ಟಾವಧಿಯ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಗೊಂಡಿತು.

ಎಚ್.ಗಣಪತಿಯಪ್ಪ ಸ್ಥಾಪಿತ ಶಿವಮೊಗ್ಗ ಜಿಲ್ಲಾ ರೈತ ಸಂಘ, ಮಲೆನಾಡು ರೈತರ ಹೋರಾಟ ಸಮಿತಿ, ಮುಳುಗಡೆ ಸಂತ್ರಸ್ತರ ಹಾಗೂ ಭೂ ಹಕ್ಕು ವಂಚಿತರ ಸಂಯುಕ್ತ ವೇದಿಕೆ ಆಶ್ರಯದಲ್ಲಿ ಆರಂಭಗೊಂಡಿರುವ ಸತ್ಯಾಗ್ರಹಕ್ಕೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಚಾಲನೆ ನೀಡಿದರು.

ಇಲ್ಲಿನ ಮಹಾಗಣಪತಿ ದೇವಸ್ಥಾನದಿಂದ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ರೈತರು ಉಪ ವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ಜಮಾಯಿಸಿದರು.

ADVERTISEMENT

ಸಾಗರ, ಸೊರಬ, ಹೊಸನಗರ, ಶಿವಮೊಗ್ಗ ತಾಲ್ಲೂಕಿನ ಗ್ರಾಮಾಂತರ ಭಾಗಗಳಿಂದ ಟ್ರ್ಯಾಕ್ಟರ್‌ಗಳೊಂದಿಗೆ ಬಂದಿದ್ದ ರೈತರು ಹಕ್ಕುಪತ್ರ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಉಪವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಮುಖಂಡ ತೀ.ನ. ಶ್ರೀನಿವಾಸ್, ‘ಮುಳುಗಡೆ ಸಂತ್ರಸ್ತರ ತ್ಯಾಗದ ಕಾರಣಕ್ಕೆ ಕರ್ನಾಟಕ ರಾಜ್ಯಕ್ಕೆ ದೊಡ್ಡ ಪ್ರಮಾಣದ ಪ್ರಯೋಜನವಾಗಿದೆ. ಇಂತಹ ರೈತರಿಗೆ ಹಕ್ಕುಪತ್ರ ನೀಡಲು ಸಾಧ್ಯವಾಗದಿದ್ದರೆ ಮಲೆನಾಡು ಭಾಗದ ಎಲ್ಲಾ ಶಾಸಕರು ತಮ್ಮ ಸ್ಥಾನಕ್ಕೆ ಸಾಮೂಹಿಕವಾಗಿ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

‘ಅರಣ್ಯಭೂಮಿ ಹಕ್ಕು ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಅರಣ್ಯಭೂಮಿ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ಅನುಕೂಲವಾಗುವ ವಾತಾವರಣ ಕಲ್ಪಿಸಬೇಕು ಎಂದು ಕೇಂದ್ರ ಸರ್ಕಾರದ ಮೇಲೆ ರಾಜ್ಯದ ಎಲ್ಲಾ ಪಕ್ಷಗಳ ಮುಖಂಡರು ಒತ್ತಾಯ ಹೇರಬೇಕು’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಿನೇಶ್ ಶಿರವಾಳ ಒತ್ತಾಯಿಸಿದರು.

ಹಲವು ತಲೆಮಾರುಗಳಿಂದ ಭೂಮಿಯ ಉಳುಮೆ ಮಾಡುತ್ತಿರುವ ರೈತರಿಗೆ ಆ ಪ್ರದೇಶ ಅರಣ್ಯ, ಗೋಮಾಳ ಅಥವಾ ಕೆಪಿಸಿಗೆ ಸೇರಿದ್ದು ಎನ್ನುವ ಕಾರಣಕ್ಕೆ ಹಕ್ಕನ್ನು ನಿರಾಕರಿಸುವುದು ಅಮಾನವೀಯ ನಡೆ. ಮುಳುಗಡೆ ಸಂತ್ರಸ್ತರಿಗೆ ಭೂಮಿಯ ಹಕ್ಕು ಕೊಡಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ನಿಂದ ಅಗತ್ಯವಿರುವ ಅನುಮತಿಯನ್ನು ಪಡೆಯುತ್ತ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎಚ್. ಹಾಲಪ್ಪ ಹರತಾಳು ಆಗ್ರಹಿಸಿದರು.

ಅರಣ್ಯಭೂಮಿ ಹಕ್ಕು ಕಾಯ್ದೆಯಡಿ ಹಕ್ಕುಪತ್ರ ನೀಡಲು 75 ವರ್ಷಗಳ ದಾಖಲೆ ನೀಡಬೇಕು ಎಂದಿದೆ. ಕಾಯ್ದೆಯನ್ನು ತಿದ್ದುಪಡಿ ಮಾಡಿ ಈ ನಿಬಂಧನೆಯನ್ನು 75ರಿಂದ 25ಕ್ಕೆ ಇಳಿಸುವಂತೆ ಶಿವಮೊಗ್ಗ ಕ್ಷೇತ್ರದ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ತುಮರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಟಿ. ಸತ್ಯನಾರಾಯಣ ಒತ್ತಾಯಿಸಿದರು.

‘ಯಡಿಯೂರಪ್ಪ ಮುಖ್ಯಮಂತ್ರಿಯಂತಹ ಪ್ರಭಾವಿ ಸ್ಥಾನದಲ್ಲಿದ್ದವರು. ಅವರು ಇಚ್ಛಾಶಕ್ತಿ ತೋರಿದರೆ ಸಂತ್ರಸ್ತರ ಸಮಸ್ಯೆಗೆ ಪರಿಹಾರ ದೊರಕುವುದು ಕಷ್ಟವಲ್ಲ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮೂಡಾ ಹಗರಣದ ಕುರಿತು ಪಾದಯಾತ್ರೆ ಮಾಡುವ ಬದಲು ಸಂತ್ರಸ್ತರಿಗೆ ಹಕ್ಕುಪತ್ರ ನೀಡುವಂತೆ ಪಾದಯಾತ್ರೆ ಮಾಡಿದ್ದರೆ ಸೂಕ್ತವಿತ್ತು’ ಎಂದು ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಚೂನಪ್ಪ ಪೂಜಾರಿ ಹೇಳಿದರು.

ಸಿಗಂದೂರು ಕ್ಷೇತ್ರದ ಧರ್ಮದರ್ಶಿ ರಾಮಪ್ಪ, ಪ್ರಮುಖರಾದ ರಾಜು ಪವಾರ್, ಪ್ರಕಾಶ್ ನಾಯ್ಕ್, ಕರಿಬಸಪ್ಪ ಗೌಡ, ಟಿ.ಡಿ. ಮೇಘರಾಜ್, ಡಾ. ರಾಜನಂದಿನಿ ಕಾಗೋಡು, ಮಲ್ಲಿಕಾರ್ಜುನ ಹಕ್ರೆ, ರತ್ನಾಕರ ಹೊನಗೋಡು, ರವಿ ಕುಗ್ವೆ, ಕನ್ನಪ್ಪ ಬೆಳಲಮಕ್ಕಿ, ಶಿವಾನಂದ ಕುಗ್ವೆ, ಎನ್.ಡಿ.ವಸಂತಕುಮಾರ್, ಟಿ.ಆರ್.ಕೃಷ್ಣಪ್ಪ, ಶ್ರೀಕರ ಸಂಪೆಕಟ್ಟೆ, ರಾಮಚಂದ್ರಪ್ಪ ಮನೆಘಟ್ಟ, ರಮೇಶ್ ಕೆಳದಿ, ಹೊಯ್ಸಳ ಗಣಪತಿಯಪ್ಪ, ಭರ್ಮಪ್ಪ ಅಂದಾಸುರ ಇದ್ದರು.

ಉಪವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ಬಹಿರಂಗ ಸಭೆ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.