ADVERTISEMENT

ಸಾಗರ | ನಾಲ್ಕು ದಿಕ್ಕುಗಳಲ್ಲೂ ಲೇಔಟ್ ನಿರ್ಮಾಣ: ಶಾಸಕ ಗೋಪಾಲಕೃಷ್ಣ

ನಗರ ಯೋಜನಾ ಪ್ರಾಧಿಕಾರದ ಸಭೆಯಲ್ಲಿ ಶಾಸಕ ಬೇಳೂರು

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2024, 13:27 IST
Last Updated 16 ನವೆಂಬರ್ 2024, 13:27 IST
ಸಾಗರದ ನಗರಸಭೆ ಕಚೇರಿಯಲ್ಲಿ ಶನಿವಾರ ಶಾಸಕ ಗೋಪಾಲಕೃಷ್ಣ ಬೇಳೂರು ಅಧ್ಯಕ್ಷತೆಯಲ್ಲಿ ನಗರ ಯೋಜನಾ ಪ್ರಾಧಿಕಾರದ ಸಭೆ ನಡೆಯಿತು
ಸಾಗರದ ನಗರಸಭೆ ಕಚೇರಿಯಲ್ಲಿ ಶನಿವಾರ ಶಾಸಕ ಗೋಪಾಲಕೃಷ್ಣ ಬೇಳೂರು ಅಧ್ಯಕ್ಷತೆಯಲ್ಲಿ ನಗರ ಯೋಜನಾ ಪ್ರಾಧಿಕಾರದ ಸಭೆ ನಡೆಯಿತು   

ಸಾಗರ: ನಿವೇಶನರಹಿತ ಅರ್ಹ ಫಲಾನುಭವಿಗಳಿಗೆ ನಿವೇಶನ ಒದಗಿಸುವ ಸಂಬಂಧ ನಗರದ ನಾಲ್ಕು ದಿಕ್ಕುಗಳಲ್ಲೂ ಲೇಔಟ್ ನಿರ್ಮಿಸಿ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಇಲ್ಲಿನ ನಗರಸಭೆ ಕಚೇರಿಯಲ್ಲಿ ಶನಿವಾರ ನಡೆದ ಸಾಗರ ನಗರ ಯೋಜನಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನಿಷ್ಠ 10 ಎಕರೆ ಪ್ರದೇಶದಲ್ಲಿ ನಿವೇಶನ ವಿತರಣೆ ಸಂಬಂಧ ಲೇಔಟ್ ನಿರ್ಮಿಸುವ ಯೋಜನೆ ಇದೆ. ಆಶ್ರಯ ಯೋಜನೆಯಡಿ ನಿವೇಶನ ಕೋರಿ 4 ಸಾವಿರ ಅರ್ಜಿಗಳು ಬಂದಿವೆ. ಅರ್ಜಿ ಸಲ್ಲಿಸಿರುವ ಎಲ್ಲರಿಗೂ ನಿವೇಶನ ಕೊಡಲು ಸಾಧ್ಯವಿಲ್ಲ. ಕನಿಷ್ಠ 2 ಸಾವಿರದಿಂದ 3 ಸಾವಿರ ಅರ್ಜಿದಾರರಿಗೆ ನಿವೇಶನ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ADVERTISEMENT

ಈ ಹಿಂದೆ ನಗರವ್ಯಾಪ್ತಿಯಲ್ಲಿ ಕೆಲವು ಲೇಔಟ್‌ಗಳನ್ನು ನಿಯಮಗಳನ್ನು ಉಲ್ಲಂಘಿಸಿ ಬೇಕಾಬಿಟ್ಟಿಯಾಗಿ ನಿರ್ಮಿಸಲಾಗಿದೆ. ಈ ಕಾರಣ ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗುತ್ತಿದೆ. ಇಂತಹ ಪರಿಸ್ಥಿತಿ ಬಾರದಂತೆ ನೋಡಿಕೊಳ್ಳುವ ಜವಾಬ್ದಾ‌ರಿ ಪ್ರಾಧಿಕಾರದ ಮೇಲಿದೆ ಎಂದರು.

ನಗರವ್ಯಾಪ್ತಿಯಲ್ಲಿ ಕೆರೆ, ಪಾರ್ಕ್‌ಗೆ ಮೀಸಲಿಟ್ಟ ಪ್ರದೇಶವನ್ನು ಕೆಲವರು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ದೂರುಗಳಿವೆ. ಇವುಗಳನ್ನು ತೆರವುಗೊಳಿಸಿ ಭೂ ಕಬಳಿಕೆದಾರರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಖಾಸಗಿ ಲೇಔಟ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಂದ ಅರ್ಜಿಗಳನ್ನು ಪರಿಶೀಲಿಸಿ ಅವುಗಳಿಗೆ ಅನುಮೋದನೆ ನೀಡುವುದಷ್ಟೇ ಯೋಜನಾ ಪ್ರಾಧಿಕಾರದ ಕೆಲಸವಲ್ಲ. ನಿವೇಶನರಹಿತರಿಗೆ ನಿವೇಶನ ನೀಡಲು ಅಗತ್ಯ ಸ್ಥಳ ಗುರುತಿಸಿ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವುದಕ್ಕೆ ಆದ್ಯತೆ ನೀಡಬೇಕಿದೆ ಎಂದು ತಾಕೀತು ಮಾಡಿದರು.

ನಗರಸಭೆ ಪೌರಾಯುಕ್ತ ಎಚ್.ಕೆ. ನಾಗಪ್ಪ, ಪ್ರಾಧಿಕಾರದ ಸದಸ್ಯರಾದ ಐ.ಎನ್. ಸುರೇಶ್ ಬಾಬು, ಸೋಮಶೇಖರ್ ಲ್ಯಾವಿಗೆರೆ, ಮರಿಯಾ ಲೀಮಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.