ADVERTISEMENT

ಸಾಗರ: ಪ್ರವಾಸಿ ಮಂದಿರದ ಎದುರಿನ ಪಾರ್ಕ್ ಅಭಿವೃದ್ಧಿಗೆ ₹80 ಲಕ್ಷ ಮಂಜೂರು

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 12:59 IST
Last Updated 11 ಜುಲೈ 2024, 12:59 IST
ಸಾಗರದ ನಗರಸಭೆ ಕಚೇರಿ ಹಿಂಭಾಗದಲ್ಲಿ ಕಾರು ನಿಲ್ದಾಣ ಕಾಮಗಾರಿಗೆ ಬುಧವಾರ ಶಾಸಕ ಗೋಪಾಲಕೃಷ್ಣ ಬೇಳೂರು ಶಂಕುಸ್ಥಾಪನೆ ನೆರವೇರಿಸಿದರು
ಸಾಗರದ ನಗರಸಭೆ ಕಚೇರಿ ಹಿಂಭಾಗದಲ್ಲಿ ಕಾರು ನಿಲ್ದಾಣ ಕಾಮಗಾರಿಗೆ ಬುಧವಾರ ಶಾಸಕ ಗೋಪಾಲಕೃಷ್ಣ ಬೇಳೂರು ಶಂಕುಸ್ಥಾಪನೆ ನೆರವೇರಿಸಿದರು   

ಸಾಗರ: ನಗರದ ಪ್ರವಾಸಿ ಮಂದಿರದ ಎದುರಿನ ಪಾರ್ಕ್ ಅಭಿವೃದ್ಧಿಗೆ ₹80 ಲಕ್ಷ ಮಂಜೂರಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.

ಇಲ್ಲಿನ ನಗರಸಭೆ ಕಚೇರಿ ಹಿಂಭಾಗದಲ್ಲಿ ಕಾರು ನಿಲ್ದಾಣ ಕಾಮಗಾರಿಗೆ ಬುಧವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ನಗರವ್ಯಾಪ್ತಿಯ ಹಲವು ಬಡಾವಣೆಗಳಲ್ಲಿ ಪಾರ್ಕ್‌ಗಳು ದುಃಸ್ಥಿತಿಗೆ ತಲುಪಿವೆ. ಇವುಗಳ ಪುನಶ್ಚೇತನಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ನೆಹರೂ ಮೈದಾನದಲ್ಲಿ ಸುಸಜ್ಜಿತ ರಂಗಮಂದಿರ ನಿರ್ಮಿಸಲು ಸಿದ್ಧತೆ ನಡೆದಿದೆ. ನಗರದ ಮೂರು ದಿಕ್ಕುಗಳಲ್ಲಿ ಸುಸಜ್ಜಿತವಾದ ಫುಡ್ ಕೋರ್ಟ್ ನಿರ್ಮಿಸಲಾಗುವುದು. ಮೀನು ಮಾರುಕಟ್ಟೆ ಅಭಿವೃದ್ಧಿ ಕಾರ್ಯ ಅಂತಿಮ ಹಂತ ತಲುಪಿದ್ದು, ಮುಂದಿನ ದಿನಗಳಲ್ಲಿ ನಿಗದಿಪಡಿಸಿದ ಕಟ್ಟಡದಲ್ಲಿ ಮಾತ್ರ ಮೀನು ಮಾರಾಟಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ADVERTISEMENT

‘ನಗರದ ಅಭಿವೃದ್ಧಿ ದೃಷ್ಟಿಯಿಂದ ನನೆಗುದಿಗೆ ಬಿದ್ದಿರುವ ಒಳಚರಂಡಿ ಕಾಮಗಾರಿಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಬೇಕಿದೆ. ಆದರೆ ಈ ಕಾಮಗಾರಿಯಿಂದ ಸ್ವತ್ತು ಕಳೆದುಕೊಳ್ಳುವವರಿಗೆ ನಗರಸಭೆ ಎಂಟರ್ ಪ್ರೈಸಸ್ ನಿಧಿಯಿಂದ ಪರಿಹಾರ ನೀಡಲು ನಗರಸಭೆಯ ಬಿಜೆಪಿ ಸದಸ್ಯರು ಲಿಖಿತವಾಗಿ ತಕರಾರು ನೀಡಿದ್ದಾರೆ. ಅಭಿವೃದ್ಧಿ ಕಾರ್ಯದಲ್ಲಿ ರಾಜಕೀಯ ಮಾಡುವುದಿಲ್ಲ ಎಂದು ವೇದಿಕೆಯ ಮೇಲೆ ಹೇಳುವ ಸ್ಥಳೀಯ ಬಿಜೆಪಿ ಪ್ರಮುಖರು ಒಳಚರಂಡಿ ಕಾಮಗಾರಿಗೆ ಅಡ್ಡಗಾಲು ಹಾಕಿದ್ದಾರೆ’ ಎಂದು ಅವರು ಆರೋಪಿಸಿದರು.

ಕಾರು ಚಾಲಕರು ಮತ್ತು ಮಾಲಿಕರ ಸಂಘದ ಅಧ್ಯಕ್ಷ ಗಿರೀಶ್ ಕೋವಿ, ನಗರಸಭೆ ಸದಸ್ಯ ಗಣಪತಿ ಮಂಡಗಳಲೆ, ಪ್ರಮುಖರಾದ ಸೋಮಶೇಖರ್ ಲ್ಯಾವಿಗೆರೆ, ಐ.ಎನ್.ಸುರೇಶ್ ಬಾಬು, ರಾಮಣ್ಣ, ವಿನಯ್ ಕೆಂಬಾವಿ, ಪ್ರದೀಪ್, ಕೃಷ್ಣಮೂರ್ತಿ, ಪ್ರವೀಣ್ ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.