ADVERTISEMENT

ಸಕ್ರೆಬೈಲು: ಆನೆ ಸವಾರಿಗೆ ಪ್ರಾಣಿಪ್ರಿಯರ ವಿರೋಧ

ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ ಉಲ್ಲಂಘನೆ ಆರೋಪ

ವೆಂಕಟೇಶ ಜಿ.ಎಚ್.
Published 27 ಅಕ್ಟೋಬರ್ 2024, 5:40 IST
Last Updated 27 ಅಕ್ಟೋಬರ್ 2024, 5:40 IST
ಶಿವಮೊಗ್ಗದ ಸಕ್ರೆಬೈಲಿನ ಅರಣ್ಯ ಇಲಾಖೆ ಶಿಬಿರದಲ್ಲಿ ನಡೆಯುತ್ತಿದ್ದ ಆನೆ ಸವಾರಿಯ ನೋಟ
ಶಿವಮೊಗ್ಗದ ಸಕ್ರೆಬೈಲಿನ ಅರಣ್ಯ ಇಲಾಖೆ ಶಿಬಿರದಲ್ಲಿ ನಡೆಯುತ್ತಿದ್ದ ಆನೆ ಸವಾರಿಯ ನೋಟ   

ಶಿವಮೊಗ್ಗ: ಇಲ್ಲಿನ ಸಕ್ರೆಬೈಲು ತುಂಗಾ ಹಿನ್ನೀರ ದಂಡೆಯಲ್ಲಿನ ಅರಣ್ಯ ಇಲಾಖೆಯ ಬಿಡಾರದಲ್ಲಿ ಪ್ರವಾಸಿಗರಿಗೆ ಆನೆ ಸವಾರಿ ಆಯೋಜಿಸುತ್ತಿರುವುದು ಪ್ರಾಣಿಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ.

ಇದು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ 1960ರ ಅಡಿಯಲ್ಲಿ ರಚಿಸಲಾದ ಪ್ರದರ್ಶನ ಪ್ರಾಣಿಗಳ (ನೋಂದಣಿ) ನಿಯಮಗಳು 2001ರ ಸ್ಪಷ್ಟ ಉಲ್ಲಂಘನೆ ಎಂದು ಅವರು ಆರೋಪಿಸಿದ್ದಾರೆ.

‘ಅರಣ್ಯ ಇಲಾಖೆ ಇರುವುದು ಆನೆಗಳಿಗೆ ರಕ್ಷಣೆ ಕೊಡುವುದಕ್ಕೇ ಹೊರತು, ಅವುಗಳನ್ನು ಪ್ರವಾಸಿಗರ ಮನರಂಜನೆಗೆ ಬಳಸಿ ಹಣ ಮಾಡುವುದಕ್ಕಲ್ಲ. ಈ ಕುರಿತು ಧ್ವನಿ ಎತ್ತಿದ್ದಕ್ಕೆ ಕೊಡಗು ಜಿಲ್ಲೆಯ ದುಬಾರೆಯಲ್ಲಿ ನಾಲ್ಕು ವರ್ಷಗಳ ಹಿಂದೆಯೇ ಆನೆ ಸವಾರಿ ನಿಲ್ಲಿಸಲಾಗಿದೆ’ ಎಂದು ವನ್ಯಜೀವಿ ಪರ ಹೋರಾಟಗಾರ, ಬೆಂಗಳೂರಿನ ಜೋಸೆಫ್ ಹೂವರ್ ಹೇಳುತ್ತಾರೆ.

ADVERTISEMENT

‘ಆನೆಯ ದೇಹದ ರಚನೆ ಗಮನಿಸಿದರೆ ಸವಾರಿ ಮಾಡುವಾಗ ನೇರವಾಗಿ ಅದರ ಬೆನ್ನುಹುರಿಯ ಮೇಲೆ ಭಾರ ಬೀಳುತ್ತದೆ. ಇದರಿಂದ ಆನೆಗೂ ಕಿರಿಕಿರಿ ಆಗುತ್ತದೆ. ದೀರ್ಘಾವಧಿಯಲ್ಲಿ ಅದರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಆನೆ ಬಹಳ ಸೂಕ್ಷ್ಮ ಪ್ರಾಣಿ. ಜನರೊಂದಿಗೆ ಅತಿಯಾದ ಪಾಲ್ಗೊಳ್ಳುವಿಕೆ ಅದಕ್ಕೆ ಒತ್ತಡ ಉಂಟು ಮಾಡುತ್ತದೆ’ ಎಂದು ಅವರು ತಿಳಿಸಿದ್ದಾರೆ. 

‘ಆನೆ ಸವಾರಿ ಆಯೋಜನೆಗೆ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ (ಎಡಬ್ಲ್ಯುಬಿಐ) ಅನುಮತಿ ಪಡೆಯಬೇಕು. ಆದರೆ, ಸಕ್ರೆಬೈಲು ಶಿಬಿರದಲ್ಲಿ ಅನುಮತಿ ಪಡೆಯದೇ ಈ ಚಟುವಟಿಕೆ ನಡೆಸಲಾಗುತ್ತಿದೆ. ಪ್ರಾಜೆಕ್ಟ್ ಎಲಿಫೆಂಟ್, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಸೆರೆಯಲ್ಲಿರುವ ಆನೆಗಳ ಕಲ್ಯಾಣಕ್ಕಾಗಿ ನಿಯಮಗಳನ್ನು ನಿಗದಿಪಡಿಸಿದೆ. ಇಲ್ಲಿ ಆ ನಿಯಮಗಳ ಉಲ್ಲಂಘನೆಯೂ ಆಗಿದೆ’ ಎಂದೂ ಅವರು ಹೇಳಿದ್ದಾರೆ.

ಸರ್ಕಾರಕ್ಕೆ ದೂರು: ಸಕ್ರೆಬೈಲಿನಲ್ಲಿ ಆನೆ ಸವಾರಿಗೆ ವಿರೋಧ ವ್ಯಕ್ತಪಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಜೋಸೆಫ್ ಹೂವರ್ ದೂರು ನೀಡಿದ್ದಾರೆ. 

ಸಕ್ರೆಬೈಲಿನಲ್ಲಿ ಸದ್ಯ ಆನೆ ಸವಾರಿ ನಿಲ್ಲಿಸಿದ್ದೇವೆ. ಮತ್ತೆ ಆರಂಭಿಸುವ ವಿಚಾರ ಇಲಾಖೆಯ ಮುಂದಿನ ಆದೇಶದನ್ವಯ ನಿರ್ಧಾರವಾಗಲಿದೆ
ಪ್ರಸನ್ನ ಕೃಷ್ಣ ಪಟಗಾರ ಡಿಸಿಎಫ್ ಶಿವಮೊಗ್ಗ ವನ್ಯಜೀವಿ ವಿಭಾಗ

ಆನೆ ಸವಾರಿ ಸ್ಥಗಿತ

 ಅರಣ್ಯ ಇಲಾಖೆಯು ಶನಿವಾರದಿಂದ ಆನೆ ಸವಾರಿ ಸ್ಥಗಿತಗೊಳಿಸಿದೆ. ಈಗ ಸಕ್ರೆಬೈಲಿನಲ್ಲಿ ಸಾರ್ವಜನಿಕರಿಗೆ ಆನೆಗಳ ವೀಕ್ಷಣೆಗೆ ಮಾತ್ರ ಅವಕಾಶವಿದೆ. ‘ಮಲೆನಾಡಿನಲ್ಲಿ ಪ್ರವಾಸೋದ್ಯಮ ಉತ್ತೇಜಿಸುವ ಉದ್ದೇಶದಿಂದ ಇಲ್ಲಿ ಆನೆ ಸವಾರಿ ಆಯೋಜಿಸಲಾಗುತ್ತಿತ್ತು. ಇದು ಮೊದಲಿನಿಂದಲೂ ಸಂಪ್ರದಾಯದಂತೆ ನಡೆದು ಬಂದಿತ್ತು. ಅದನ್ನೇ ಮುಂದುವರಿಸಿದ್ದೆವು. ಆನೆ ಸವಾರಿಗೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯ (ಪಿಸಿಸಿಎಫ್) ಅನುಮತಿ ಪಡೆಯಲಾಗಿತ್ತು’ ಎಂದು ಸಕ್ರೆಬೈಲು ಬಿಡಾರದ ಅಧಿಕಾರಿಯೊಬ್ಬರು ಹೇಳಿದರು. ‘ಪ್ರವಾಸೋದ್ಯಮವನ್ನು ಉತ್ತೇಜಿಸುವುದಷ್ಟೇ ನಮ್ಮ ಉದ್ದೇಶವಾಗಿತ್ತು. ಇದರ ಹಿಂದೆ ಯಾವುದೇ ವಾಣಿಜ್ಯ ಹಿತಾಸಕ್ತಿ ಅಡಕವಾಗಿರಲಿಲ್ಲ. ವಿರೋಧ ವ್ಯಕ್ತವಾದ ಕಾರಣ ಆನೆ ಸವಾರಿ ನಿಲ್ಲಿಸಿದ್ದೇವೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.