ಭಾಯಾಗಡ್ (ನ್ಯಾಮತಿ): ಬಣಜಾರ ಸಮುದಾಯದ ಏಕೈಕ ಜಗದ್ಗುರು ಸಂತ ಸೇವಾಲಾಲ್ ಅವರ 283ನೇ ಜಯಂತಿ ಆಚರಣೆ ಕೋವಿಡ್ ನಿಮಿತ್ತ ಮಂಗಳವಾರ ಸರಳವಾಗಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಿತು. ಹೋಮ ಕುಂಡ (ಭೋಗ್) ಪೂಜೆ, ಪೂರ್ಣಾಹುತಿಯೊಂದಿಗೆ ಜಯಂತಿ ಆಚರಣೆಗೆ ತೆರೆ ಎಳೆಯಲಾಯಿತು.
ಬೆಳಿಗ್ಗೆ ಗಂಗಾಪೂಜೆಯೊಂದಿಗೆ ಸೇವಾಲಾಲ್ ಅವರ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು. ನಂತರ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಹೋಮ ಕುಂಡವನ್ನು ಸಿದ್ಧಗೊಳಿಸಿ ನಂತರ ಹೋಮವನ್ನು ಕರ್ಪೂರದಿಂದ ಬೆಳಗಿಸಲಾಯಿತು. ನೆರೆದಿದ್ದ ಕೆಲವೇ ಭಕ್ತರ ಮತ್ತು ಮಾಲಾಧಾರಿಗಳ ಜಯಘೋಷದೊಂದಿಗೆ ಸೇವಾಲಾಲ್ ಮತ್ತು ಮರಿಯಮ್ಮ ಆರ್ಚಕರು ಪೂಜೆ ನೆರವೇರಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಯ ಅಧ್ಯಕ್ಷ ರುದ್ರಪ್ಪ ಲಮಾಣಿ ಮಾತನಾಡಿ, ‘ಕೋವಿಡ್ ಕಾರಣದಿಂದ ಸರ್ಕಾರ, ಜಿಲ್ಲಾಡಳಿತ ಹಾಗೂ ಮಹಾಮಠ ಸಮಿತಿಯವರು ಸಾರ್ವಜನಿಕರ ಹಿತದೃಷ್ಟಿಯಿಂದ ಸೇವಾಲಾಲ್ ಅವರ ಜಯಂತಿಯ ಆಚರಣೆಯನ್ನು ರದ್ದುಪಡಿಸುವ ತೀರ್ಮಾನ ಕೈಗೊಂಡಿದ್ದರಿಂದ ಮಂಗಳವಾರ ಸರಳವಾಗಿ ಆಚರಣೆ ಮಾಡಿದ್ದೇವೆ. ಆದರೂ ದೂರದಿಂದ ಭಕ್ತರು ಬರುತ್ತಿದ್ದು, ಅವರಿಗೆ ದೇವರ ದರ್ಶನಕ್ಕ ಮಾತ್ರ ಅವಕಾಶ ಕಲ್ಪಿಸಲಾಗಿದೆ’ ಎಂದರು.
ಭೋಗ್ ಕಾರ್ಯಕ್ರಮದಲ್ಲಿ ಮಠ ಸಮಿತಿಯ ಅಧ್ಯಕ್ಷ ಡಾ. ಈಶ್ವರ ನಾಯ್ಕ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ, ಖಜಾಂಚಿ ತಾವರ ನಾಯ್ಕ, ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕ ಮಾರುತಿ ನಾಯ್ಕ, ಮುಖಂಡರಾದ ಹೀರಾ ನಾಯ್ಕ, ಡಾ.ರಾಜ ನಾಯ್ಕ, ಸುರೇಂದ್ರ ನಾಯ್ಕ, ಓಂಕಾರ ನಾಯ್ಕ, ಜುಂಜ್ಯಾ ನಾಯ್ಕ ಇದ್ದರು.
ಪ್ರತಿ ವರ್ಷ ಮೂರು ದಿನ ಸೇವಾಲಾಲ್ ಜಯಂತಿ ಆಚರಣೆ ನಡೆಯುತ್ತಿತ್ತು. ತಿಂಡಿ ಅಂಗಡಿ ಜಾಗವನ್ನು ಹರಾಜಿನಲ್ಲಿ ಪಡೆದು ವ್ಯಾಪಾರ ಮಾಡುತ್ತಿದ್ದೆವು. ಜಯಂತಿ ರದ್ದಾಗಿದ್ದ ಕಾರಣ ಅಂಗಡಿ ಹಾಕಲು ಅವಕಾಶ ಕೊಡಲಿಲ್ಲ. ಆದರೂ ಅಂಗಡಿ ಹಾಕಿದ್ದೇವೆ. ಸಾಧಾರಣ ವ್ಯಾಪಾರ ಆಗಿದೆ.
ಕೋಡಿಕೊಪ್ಪ ಚಂದ್ರಪ್ಪ, ತಿಂಡಿ ವ್ಯಾಪಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.