ADVERTISEMENT

ಮಹಾತ್ಮರ ಸತ್ಸಂಗದಿಂದ ಪಾಪಕರ್ಮ ದೂರ: ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2024, 14:29 IST
Last Updated 12 ನವೆಂಬರ್ 2024, 14:29 IST
ಶಿವಮೊಗ್ಗದ ರಾಷ್ಟ್ರೀಯ ಬಸವದಳ ಟ್ರಸ್ಟ್‌ ವತಿಯಿಂದ ಇಲ್ಲಿನ ವಿನೋಬನಗರ ಕಲ್ಲಳ್ಳಿಯ ಬಸವಮಂಟಪದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರನ್ನು ಮಾತೆ ಗಂಗಾದೇವಿ ಸನ್ಮಾನಿಸಿದರು
ಶಿವಮೊಗ್ಗದ ರಾಷ್ಟ್ರೀಯ ಬಸವದಳ ಟ್ರಸ್ಟ್‌ ವತಿಯಿಂದ ಇಲ್ಲಿನ ವಿನೋಬನಗರ ಕಲ್ಲಳ್ಳಿಯ ಬಸವಮಂಟಪದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರನ್ನು ಮಾತೆ ಗಂಗಾದೇವಿ ಸನ್ಮಾನಿಸಿದರು   

ಶಿವಮೊಗ್ಗ: ಮಹಾತ್ಮರ ದಿವ್ಯಸತ್ಸಂಗದಿಂದ ನಮ್ಮ ಪಾಪ ಕರ್ಮಗಳನ್ನು ಸುಲಭವಾಗಿ ಕಳೆದುಕೊಳ್ಳಬಹುದು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.

ರಾಷ್ಟ್ರೀಯ ಬಸವದಳ ಟ್ರಸ್ಟ್‌ ವತಿಯಿಂದ ಇಲ್ಲಿನ ವಿನೋಬನಗರ ಕಲ್ಲಳ್ಳಿಯ ಬಸವಮಂಟಪದಲ್ಲಿ ಸೋಮವಾರ ಕೂಡಲ ಸಂಗಮದಲ್ಲಿ ನಡೆಯುವ ಶರಣ ಮೇಳ ಪ್ರಚಾರಾರ್ಥವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಸವಣ್ಣನವರು ಲಿಂಗೈಕ್ಯಗೊಂಡ ಸುಕ್ಷೇತ್ರದಲ್ಲಿ ನಡೆಸಿಕೊಂಡು ಬರುತ್ತಿರುವ ಶರಣಮೇಳ ಒಂದು ಪವಿತ್ರ ಮೇಳವಾಗಿದೆ. ಅದು ನಮ್ಮ ಜನ್ಮಾಂತರಗಳ ಪಾಪಕರ್ಮಗಳನ್ನು ಶುದ್ಧೀಕರಿಸುತ್ತದೆ. ನಮ್ಮ ಭಾರತೀಯ ಸಂಸ್ಕೃತಿ, ಆಧ್ಯಾತ್ಮಪೂರ್ಣ ಸಂದೇಶಗಳನ್ನು ನಮ್ಮ ಯುವಜನಾಂಗಕ್ಕೆ ತಿಳಿಸುವುದರ ಮೂಲಕ ಭಾರತೀಯ ಸಂಸ್ಕೃತಿಯನ್ನು ಸುಭದ್ರಗೊಳಿಸುವ ಕಾರ್ಯ ಮಾಡುತ್ತಿದೆ’ ಎಂದರು.

ADVERTISEMENT

ಕೂಡಲಸಂಗಮ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಮಾತನಾಡಿ, ‘ಗುರುಬಸವಣ್ಣನವರ ತಪೋಸ್ಥಾನ, ವಿದ್ಯಾಭೂಮಿ ಹಾಗೂ ಲಿಂಗೈಕ್ಯ ಸುಕ್ಷೇತ್ರವಾದ ಕೂಡಲಸಂಗಮದಲ್ಲಿ 73 ವರ್ಷಗಳಿಂದ ಸತತವಾಗಿ ನಡೆಸಿಕೊಂಡು ಬರುತ್ತಿರುವ ಶರಣಮೇಳವು ಭಕ್ತಿ ಹಾಗೂ ಜ್ಞಾನವನ್ನು ಪ್ರಧಾನವಾಗಿ ಪ್ರಸರಿಸುವ ಕಾರ್ಯ ಮಾಡುತ್ತಿದೆ ಎಂದರು.

ದೇಶದ ಗಮನ ಸೆಳೆದಿರುವ ಶರಣಮೇಳ ಜನಸಮುದಾಯದಲ್ಲಿ ಬಸವತತ್ವದ ಜ್ಯೋತಿ ಬೆಳಗಿಸುವ ಮೂಲಕ ಸುಸಂಸ್ಕೃತ ಸಮಾಜ ನಿರ್ಮಾಣ ಕಾರ್ಯದಲ್ಲಿ ತನ್ನದೇ ಆದ ಕೊಡುಗೆ ನೀಡಿದೆ. ಬಸವಣ್ಣನವರು ಲಿಂಗೈಕ್ಯಗೊಂಡ ಕ್ಷೇತ್ರ ಕೂಡಲಸಂಗಮ ಅವಿಮುಕ್ತ ಕ್ಷೇತ್ರವಾಗಿ ನಮ್ಮೆಲ್ಲರ ಬದುಕನ್ನು ಪಾವನಗೊಳಿಸುವುದರ ಮೂಲಕ ಪರಮಾತ್ಮನ ಸಾಕ್ಷಾತ್ಕಾರದತ್ತ ಕೊಂಡೊಯ್ಯುತ್ತಿದೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಕೆ.ಈ. ಕಾಂತೇಶ್, ಮುಖಂಡ ಕಾಚಿನಕಟ್ಟೆ ಸತ್ಯನಾರಾಯಣ್, ರಾಷ್ಟ್ರೀಯ ಬಸವದಳ ಟ್ರಸ್ಟ್ ಗೌರವಾಧ್ಯಕ್ಷ ಹಾಲಪ್ಪ, ಅಧ್ಯಕ್ಷ ರಾಮಪ್ಪ, ಉಪಾಧ್ಯಕ್ಷ ಮೂಲಿಮನಿ, ಶರಣ ಬಾಳಾನಂದ ಮುಂತಾದವರಿದ್ದರು.

ಟ್ರಸ್ಟ್‌ ಕಾರ್ಯದರ್ಶಿ ಯೋಗೀಶ್ ನಿರ್ವಿಕಲ್ಪ ಪ್ರಾಸ್ತಾವಿಕ ಮಾತನಾಡಿದರು. ಕುಮಾರಿ ಸಾನ್ವಿ ವಚನ ನುಡಿನಮನ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.