ADVERTISEMENT

ಹಾಲಪ್ಪ ಅವಧಿಯಲ್ಲಿ ಯೋಜನೆ ಮಂಜೂರಾಗಿತ್ತೇ ಹೊರತು ಹಣ ಬಿಡುಗಡೆಯಾಗಿಲ್ಲ: ಬೇಳೂರು

ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2024, 15:28 IST
Last Updated 4 ಜುಲೈ 2024, 15:28 IST
ಸಾಗರ ನಗರವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಗುರುವಾರ ವೀಕ್ಷಿಸಿದರು
ಸಾಗರ ನಗರವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಗುರುವಾರ ವೀಕ್ಷಿಸಿದರು   

ಸಾಗರ: ಹಾಲಪ್ಪ ಹರತಾಳು ಅವರು ಸಾಗರ ಕ್ಷೇತ್ರದ ಶಾಸಕರಾಗಿದ್ದ ಅವಧಿಯಲ್ಲಿ ಕೆಲವು ಹೊಸ ಯೋಜನೆಗಳು ಮಂಜೂರಾಗಿದ್ದವೇ ಹೊರತು ಯಾವ ಯೋಜನೆಗಳಿಗೂ ಹಣ ಬಿಡುಗಡೆ ಮಾಡಿಸಲು ಅವರಿಗೆ ಸಾಧ್ಯವಾಗಲಿಲ್ಲ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ನಗರವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಗುರುವಾರ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎಪಿಎಂಸಿ ರಸ್ತೆ ಅಭಿವೃದ್ಧಿ, ಉಪ ಕಾರಾಗೃಹ ಕಟ್ಟಡ ಅಭಿವೃದ್ಧಿ, ಮೀನು ಮಾರುಕಟ್ಟೆ, ತಾಯಿ-ಮಗು ಆಸ್ಪತ್ರೆ ಕಟ್ಟಡ ಅಭಿವೃದ್ಧಿ ಹೀಗೆ ಹಲವು ಕಾಮಗಾರಿಗಳಿಗೆ ನಾನು ಶಾಸಕನಾದ ನಂತರ ಹಣ ಬಿಡುಗಡೆಯಾಗಿದೆ’ ಎಂದು ಅವರು ತಿಳಿಸಿದರು.

‘ನಗರದ ಒಳಚರಂಡಿ ಯೋಜನೆ ಕಾಮಗಾರಿಗೆ ಈ ಹಿಂದೆ ನಾನು ಶಾಸಕನಾಗಿದ್ದಾಗ 2008ರಲ್ಲಿ ಮಂಜೂರಾತಿ ದೊರಕಿದ್ದು ₹70 ಕೋಟಿ ಅನುದಾನ ತಂದಿದ್ದೆ. ತದನಂತರ ಬೇರೆ ಬೇರೆ ಕಾರಣಗಳಿಗಾಗಿ ಈ ಯೋಜನೆ ನನೆಗುದಿಗೆ ಬಿದ್ದಿದ್ದು, ಇಂದಿಗೂ ಅದು ಪೂರ್ಣಗೊಂಡಿಲ್ಲ. ಯೋಜನೆ ಅನುಷ್ಠಾನಕ್ಕೆ ಹೆಚ್ಚುವರಿಯಾಗಿ ₹34 ಕೋಟಿ ಮಂಜೂರು ಮಾಡಿಸಿದ್ದೇನೆ’ ಎಂದು ಅವರು ಹೇಳಿದರು.

ADVERTISEMENT

ಪ್ರಮುಖರಾದ ಕೆ.ಹೊಳಿಯಪ್ಪ, ಸೋಮಶೇಖರ್ ಲ್ಯಾವಿಗೆರೆ, ತಾರಾಮೂರ್ತಿ, ಗಿರೀಶ್ ಕೋವಿ, ಕಲಸೆ ಚಂದ್ರಪ್ಪ, ಚೇತನ್ ರಾಜ್ ಕಣ್ಣೂರು , ರವಿ ವಿಜಯನಗರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.