ADVERTISEMENT

ಮಕ್ಕಳಿಗಾಗಿ ಪ್ರತ್ಯೇಕ ಚಿಕಿತ್ಸಾ ಘಟಕ

ಕೋವಿಡ್ ಮೂರನೇ ಅಲೆ ಎದುರಿಸಲು ಸಜ್ಜಾದ ತಾಲ್ಲೂಕು ಸರ್ಕಾರಿ ಆಸ್ಪತ್ರೆ

ಎಚ್.ಎಸ್.ರಘು
Published 30 ಸೆಪ್ಟೆಂಬರ್ 2021, 3:27 IST
Last Updated 30 ಸೆಪ್ಟೆಂಬರ್ 2021, 3:27 IST
ಶಿಕಾರಿಪುರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿರುವ ಆಮ್ಲಜನಕ ಉತ್ಪಾದನಾ ಘಟಕ
ಶಿಕಾರಿಪುರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿರುವ ಆಮ್ಲಜನಕ ಉತ್ಪಾದನಾ ಘಟಕ   

ಶಿಕಾರಿಪುರ:ಆಮ್ಲಜನಕ ಉತ್ಪಾದನಾ ಘಟಕ ಹೊಂದುವ ಮೂಲಕಕೋವಿಡ್ ಮೂರನೇ ಅಲೆ ಎದುರಿಸಲುಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಜ್ಜಾಗಿದೆ.

ತಾಲ್ಲೂಕಿನಲ್ಲಿ ಕೋವಿಡ್ ಒಂದನೇ ಅಲೆ ಹಾಗೂ ಎರಡನೇ ಅಲೆ ಸಂದರ್ಭದಲ್ಲಿ ಹಲವು ಸಾವು–ನೋವುಗಳಾಗಿ ಜನರು ಸಂಕಷ್ಟ ಎದುರಿಸಿದ್ದರು. ಮೂರನೇ ಅಲೆ ಆರಂಭಕ್ಕೂ ಮುನ್ನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.

ತಜ್ಞರ ಅಭಿಪ್ರಾಯದಂತೆ ಕೋವಿಡ್ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಬಹುದು ಎನ್ನುವುದನ್ನು ಗಂಭೀರವಾಗಿ ತೆಗೆದುಕೊಂಡಿರುವ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿಗಳು ಮಕ್ಕಳ ಚಿಕಿತ್ಸೆಗಾಗಿ ಪ್ರತ್ಯೇಕ ವಾರ್ಡ್ ಹಾಗೂ ಮಕ್ಕಳ ತೀವ್ರ ನಿಗಾ ಘಟಕ ಆರಂಭಿಸಿದ್ದಾರೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅಗತ್ಯವಾದ ಆಹಾರ ವಸ್ತುಗಳನ್ನು ವಿತರಿಸುವ ಕಾರ್ಯ ಅಂಗನವಾಡಿಗಳ ಮೂಲಕ ನಡೆಯುತ್ತಿದೆ.

ADVERTISEMENT

ಸರ್ಕಾರಿ ಆಸ್ಪತ್ರೆಯ ಕೋವಿಡ್ ಚಿಕಿತ್ಸಾ ಘಟಕದಲ್ಲಿ ಪ್ರಸ್ತುತ 90 ಬೆಡ್‌ಗಳಿವೆ. 10 ಐಸಿಯು ಬೆಡ್‌ಗಳಿವೆ. ಆಸ್ಪತ್ರೆಯಲ್ಲಿರುವ ಅಮ್ಲಜನಕ ಉತ್ಪಾದನಾ ಘಟಕದಿಂದ ಪ್ರತಿ ನಿಮಿಷಕ್ಕೆ 100 ಲೀ. ಅಮ್ಲಜನಕ ಉತ್ಪಾನೆಯಾಗುತ್ತಿದೆ. ಒಬ್ಬ ಸೋಂಕಿತರಿಗೆ 5 ಲೀ. ನೀಡಿದರೂ ಸುಮಾರು 20 ಸೋಂಕಿತರಿಗೆ ಅಮ್ಲಜನಕ ಪೂರೈಕೆ ಮಾಡಬಹುದು. ತೀವ್ರ ನಿಗಾ ಘಟಕದಲ್ಲಿ 24 ಗಂಟೆಗಳ ಕಾಲ 10 ಸೋಂಕಿತರಿಗೆ ಆಮ್ಲಜನಕ ಒದಗಿಸಬಹುದಾಗಿದೆ. 25 ಆಮ್ಲಜನಕದ ಸಾಂದ್ರಕಗಳನ್ನು ಹೊಂದಿದೆ. ಆಮ್ಲಜನಕ ಕೊರತೆ ಉಂಟಾಗಿ ಸಾವು ಸಂಭವಿಸುವುದನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಸಮರ್ಪಕ ಲಸಿಕಾ ಅಭಿಯಾನ:

ತಾಲ್ಲೂಕಿನಲ್ಲಿ ಸಮರ್ಪಕವಾಗಿ ಕೋವಿಡ್ ಲಸಿಕಾ ಅಭಿಯಾನ ನಡೆಯುತ್ತಿದೆ. ಆರೋಗ್ಯ ಇಲಾಖೆಯಿಂದ 1,25,000 ಜನರಿಗೆ ಮೊದಲನೇ ಡೋಸ್ ಲಸಿಕೆಯನ್ನು ನೀಡಲಾಗಿದೆ. 45,000 ಜನರಿಗೆ ಎರಡನೇ ಡೋಸ್ ಲಸಿಕೆ ಹಾಕಿಸಲಾಗಿದೆ. ಲಸಿಕಾ ಕಾರ್ಯ ಯಶಸ್ವಿಗೊಳಿಸಲು ಅಭಿಯಾನ ಕಾರ್ಯಕ್ರಮಗಳನ್ನು ಆರೋಗ್ಯ ಇಲಾಖೆ ಆಯೋಜಿಸುತ್ತಿದೆ. ಹಲವಾರು ಸಂಘ ಸಂಸ್ಥೆಗಳು ಕೋವಿಡ್ ಲಸಿಕಾ ಕಾರ್ಯಕ್ಕೆ ಕೈಜೋಡಿಸಿವೆ.

ಆರೋಗ್ಯ ಇಲಾಖೆ ಹಾಗೂ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿಗಳು ಕೋವಿಡ್ ಮೂರನೇ ಅಲೆಯಿಂದ ಸಾವು ಸಂಭವಿಸಿದಂತೆ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಮೂರನೇ ಅಲೆ ಆರಂಭವಾದರೆ ಕೋವಿಡ್ ಆರೈಕೆ ಕೇಂದ್ರ ಆರಂಭಿಸಲು ಸಿದ್ಧತೆ ನಡೆದಿದೆ.

ಪ್ರತಿ ನಿಮಿಷಕ್ಕೆ 1000 ಲೀ. ಆಮ್ಲಜನಕ ಉತ್ಪಾದಿಸುವ ಘಟಕ ನಿರ್ಮಾಣ ಹಂತದಲ್ಲಿದೆ. ಆಕ್ಟೋಬರ್ ತಿಂಗಳಲ್ಲಿ ಉತ್ಪಾದನೆ ಆರಂಭಿಸುವ ನಿರೀಕ್ಷೆ ಇದೆ.

ಡಾ.ಶಿವಾನಂದ್,ಆಡಳಿತ ವೈದ್ಯಾಧಿಕಾರಿ, ಸರ್ಕಾರಿ ಆಸ್ಪತ್ರೆ , ಶಿಕಾರಿಪುರ

ತಾಲ್ಲೂಕಿನಲ್ಲಿ ಕೋವಿಡ್ ಲಸಿಕಾ ಕಾರ್ಯ ಸಮರ್ಪಕವಾಗಿ ಸಾಗುತ್ತಿದೆ. ಕೋವಿಡ್ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುವುದನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.

ಡಾ.ಚಂದ್ರಪ್ಪ, ತಾಲ್ಲೂಕು ವೈದ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.