ಶಿವಮೊಗ್ಗ: ‘ಕಾನೂನು ಸೇವೆ ವಿಭಾಗದಂದ ಲೈಂಗಿಕ ಅಲ್ಪಸಂಖ್ಯಾತರಿಗೆ ಸದಾ ಅಗತ್ಯ ನೆರವು ನೀಡಲು ಸಿದ್ಧವಿದ್ದೇವೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮುಸ್ತಫಾ ಹುಸೇನ್ ಎಸ್.ಎ ಅಭಯ ನೀಡಿದರು.
ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಮಂಗಳವಾರ ಅಕ್ಕಯ್ ಪದ್ಮಶಾಲಿ ಜೀವನ ಆಧಾರಿತ ನಾಟಕ ‘ಅಕ್ಕಯ್ ಕರುಣೆಗೊಂದು ಸವಾಲು’ ಪ್ರದರ್ಶನ ಉದ್ಘಾಟಿಸಿ ಹಾಗೂ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಲೈಂಗಿಕ ಅಲ್ಪಸಂಖ್ಯಾತರ ಸಮುದಾಯದವರ ನೆರವಿಗೆ ನಾವು (ನ್ಯಾಯಾಂಗ) ಇದ್ದೇವೆ. ಅವರ ಸಮಸ್ಯೆಗಳನ್ನು ತಿಳಿದುಕೊಂಡಿದ್ದೇವೆ. ಅವರ ಭಾವನೆಗಳು ಏನಿವೆ ಎಂಬುದು ಗೊತ್ತಿದೆ. ಅವರಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ ನೆರವು ಕಲ್ಪಿಸಲು ಸರ್ಕಾರಕ್ಕೆ ಈ ಹಿಂದೆ ಸಲಹೆ ನೀಡಿದ್ದೇವೆ. ನ್ಯಾಯಾಲಯಗಳಲ್ಲೂ ಅವರಿಗೆ ಉದ್ಯೋಗ ನೀಡಿದ್ದೇವೆ’ ಎಂದರು.
ಮುಂದಿನ ದಿನಗಳಲ್ಲಿ ಹಕ್ಕುಗಳ ಬಗ್ಗೆ ರಾಜ್ಯಮಟ್ಟದಲ್ಲಿ ಜನಜಾಗೃತಿ ಮೂಡಿಸಬೇಕು, ಅವರ ತೊಂದರೆಗಳನ್ನು ಪರಿಹರಿಸಲು ಸಭೆಗಳ ಮಾಡಬೇಕಿದೆ ಎಂದು ಹೇಳಿದರು.
ಶಿವಮೊಗ್ಗದ ಸಹೃದಯರ ಋಣ ಹೇಗೆ ತೀರಿಸಬೇಕು ಎಂಬುದು ಗೊತ್ತಿಲ್ಲ. ಸಂವಿಧಾನದ ನೈತಿಕತೆ ಎತ್ತಿ ಹಿಡಿಯಲು ಇಂತಹ ಕಾರ್ಯಕ್ರಮಗಳಿಂದ ಸಾಧ್ಯ ಎಂದು ಅಕ್ಕಯ್ ಪದ್ಮಶಾಲಿ ಕೃತಜ್ಞತೆ ಸಲ್ಲಿಸಿದರು.
ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಶ್ರೀಕಾಂತ್ ಮಾತನಾಡಿ, ಇಂತಹ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಿ ಈ ಸಮುದಾಯಕ್ಕೆ ಬೆನ್ನೆಲುಬಾಗಿ ನಿಲ್ಲೋಣ ಎಂದು ಸಲಹೆ ನೀಡಿದರು.
ವಕೀಲ ಕೆ.ಪಿ.ಶ್ರೀಪಾಲ್ ಕಾರ್ಯಕ್ರಮ ನಿರ್ವಹಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ನಾಗೇಂದ್ರ ಎಫ್.ಹೊನ್ನಳ್ಳಿ ಮಾತನಾಡಿದರು. ಡಾ.ಬೇಲೂರು ರಘುನಂದನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.