ಹೊಸನಗರ: ಹಣ ಬಲದಿಂದಲೋ, ಜನ ಬಲದಿಂದಲೋ ಅಥವಾ ಅಧಿಕಾರ ಬಲದಿಂದಲೋ ದೊಡ್ಡವರಾಗುವುದಿಲ್ಲ. ಹಾಗಾಗುವುದು ಶಾಶ್ವತವೂ ಅಲ್ಲ. ಆದರೆ, ಸೇವೆ ಎನ್ನುವ ನಿಸ್ವಾರ್ಥ ಕಾರ್ಯಕ್ಕಿರುವ ಶಕ್ತಿ ಶಾಶ್ವತ ಮತ್ತು ಅದಕ್ಕಿಂತ ದೊಡ್ಡದು ಯಾವುದೂ ಇಲ್ಲ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀಸ್ವಾಮೀಜಿ ಹೇಳಿದರು.
ರಾಮಚಂದ್ರಾಪುರ ಮಠದಲ್ಲಿ ಸೋಮವಾರ ರಾಮೋತ್ಸವದ ಅಂಗವಾಗಿ ಆಂಜನೇಯೋತ್ಸವದ ಧರ್ಮಸಭೆಯಲ್ಲಿ ಸಾಮಾಜಿಕ ಸೇವೆ ಗುರುತಿಸಿ ಸಾಗರ ತಾಲ್ಲೂಕಿನ ಹೆಗ್ಗೋಡಿನ ಸತ್ಯನಾರಾಯಣ ಭಾಗಿ ಅವರಿಗೆ ‘ಧನ್ಯ ಸೇವಕ’ ಪ್ರಶಸ್ತಿ ಹಾಗೂ ಮಧು ಹೆಬ್ಬಾರ್ ಅವರಿಗೆ ಮರಣೋತ್ತರ ‘ಧನ್ಯ ಸೇವಕ’ ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವಚನ ನೀಡಿದರು.
ಜಗತ್ತಿನಲ್ಲಿ ಸೇವೆ ಎನ್ನುವ ಭಕ್ತಿಗೆ ಶಕ್ತಿ ತಂದುಕೊಟ್ಟವ ಹನುಮಂತ. ಸರ್ವಸ್ವವನ್ನು ಪ್ರಭು ರಾಮನಿಗಾಗಿ ಅರ್ಪಿಸಿಕೊಂಡ ಆತ ರಾಮನ ನಾಮವನ್ನು ಜೀವನದ ಉಸಿರಾಗಿಸಿಕೊಂಡವ. ವಿಶ್ವದಲ್ಲಿ ರಾಮನ ಗುಡಿ ಎಷ್ಟಿದೆಯೋ ಅದೇ ಪ್ರಮಾಣದಲ್ಲಿ ಹನುಮನ ಗುಡಿಯೂ ಇದೆ ಎನ್ನುವುದರ ಹಿಂದೆ ಸೇವಕನೊಬ್ಬನನ್ನು ಶ್ರೇಷ್ಠನನ್ನಾಗಿಸಿದ ವ್ಯಕ್ತಿ ರಾಮನಾಗಿಯೂ ಮತ್ತು ಸೇವೆಯೊಂದೇ ಜೀವನದ ಸಾರ್ಥಕತೆ ಎಂದು ನಂಬಿದ ಹನುಮನ ಆದರ್ಶವೂ ಗಮನಾರ್ಹ ಅಂಶ ಎಂದರು.
‘ನಮ್ಮ ಮನಃಸ್ಥಿತಿ ಹಾಗೂ ಹೆಸರಿಗಾಗಿ ಬೇರೆಲ್ಲ ಕಾರ್ಯವನ್ನು ಮಾಡುವ ಕೆಟ್ಟ ಕ್ರಮ ಅಳಿಸಿ ಹೋಗುವುದಕ್ಕೆ ಆಂಜನೇಯೋತ್ಸವ
ದಂತಹ ಕಾರ್ಯಕ್ರಮ ಸೂಕ್ತ. ರಾಮನ ಭಜನೆ ಮಾಡಿದರೆ, ರಾಮ ಪಟ್ಟಾಭಿಷೇಕದಂತಹ ಕಾರ್ಯ ಮಾಡಿದರೆ ಅದೇ ಹನುಮನಿಗೆ ಆನಂದ ಎಂದಾದ ಮೇಲೆ ಅದಕ್ಕಿಂತ ದೊಡ್ಡ ಶ್ರೇಷ್ಠತೆ ಈ ಜಗತ್ತಿನಲ್ಲಿ ಬೇರೇನಿದೆ’ ಎಂದರು.
ಮಠದಲ್ಲಿ ಸೇವೆ ಸಲ್ಲಿಸಿದ ಹಿರಿಯರಾದ ಟಿ.ಜಿ. ರಾವ್ ಅವರನ್ನು ಅಭಿನಂದಿಸಿದರು. ಇದಕ್ಕೂ ಮುನ್ನ ಶ್ರೀರಾಮ ಪಟ್ಟಾಭಿಷೇಕ ಧಾರ್ಮಿಕ ಕಾರ್ಯಕ್ರಮವನ್ನು ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮಕರ್ತ ಭೀಮೇಶ್ವರ ಜೋಷಿ ದಂಪತಿ ನೆರವೇರಿಸಿದರು.
ನಾಲ್ಕು ದಿನಗಳ ಅಖಂಡ ಭಜನ ಮಂಗಲವನ್ನು ವಿದುಷಿ ವಸುಧಾಶರ್ಮಾ ನಡೆಸಿಕೊಟ್ಟರು. ಸಂಧ್ಯಾ ಮಂಗಲ, ಗುರಿಕಾರ ಸಮಾವೇಶಗಳು ನಡೆದವು.
ಭೀಮೇಶ್ವರ ಜೋಷಿ, ರಾಜಲಕ್ಷ್ಮೀ ಜೋಷಿ, ಗಾಯಕ ಗರ್ತಿಕೆರೆ ರಾಘಣ್ಣ, ಪ್ರಭಾಕರ್ ಗುರುಶಕ್ತಿ, ಹವ್ಯಕ ಮಂಡಲದ ಅಧ್ಯಕ್ಷ ಆರ್.ಎಸ್. ಹೆಗಡೆ, ಗಣಪತಿ ಶಿವಯ್ಯ ಹೆಬ್ಬಾರ್ ಗೋಕರ್ಣ, ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು, ಬಿಜೆಪಿ ಜಿಲ್ಲಾ ಘಟಕದ ಅಧ್ಯಲ್ಷ ಟಿ.ಡಿ. ಮೇಘರಾಜ್, ಕೆ.ಆರ್. ಗಣೇಶ್ ಪ್ರಸಾದ್, ಸತೀಶ್ ಮೊಗವೀರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.