ಶಿವಮೊಗ್ಗ: ಇಲ್ಲಿನ ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದ ನೂತನ ಕುಲಪತಿ ಆಗಿ ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಡಾ. ಶರತ್ ಅನಂತಮೂರ್ತಿ ಗುರುವಾರ ಅಧಿಕಾರ ಸ್ವೀಕರಿಸಿದರು.
ರಾಜ್ಯಪಾಲ ಥ್ಯಾವರ್ ಚಂದ್ ಗೆಹ್ಲೋಟ್ ಫೆಬ್ರುವರಿ 5ರಂದು ಶರತ್ ಅವರನ್ನು ಕುಲಪತಿಯಾಗಿ ನಿಯುಕ್ತಿಗೊಳಿಸಿ ಆದೇಶ ಹೊರಡಿಸಿದ್ದರು.
ಪ್ರೊ. ಶರತ್ ಅನಂತಮೂರ್ತಿ ಸಾಹಿತಿ, ದಿವಂಗತ ಯು. ಆರ್ ಅನಂತಮೂರ್ತಿ ಅವರ ಪುತ್ರ. ಅಮೆರಿಕದ ಅಯೋವಾ ಸ್ಟೇಟ್ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆದಿದ್ದಾರೆ.
ಶರತ್ ಬೆಂಗಳೂರು ವಿವಿಯಲ್ಲಿ 2017ರವರೆಗೆ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ನಂತರ ಹೈದರಾಬಾದ್ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ನೇಮಕಗೊಂಡಿದ್ದರು.
ಶರತ್ ಅವರು 35ಕ್ಕೂ ಅಧಿಕ ಸಂಶೋಧನಾ ಲೇಖನಗಳನ್ನು ವಿವಿಧ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಶೋಧನಾ ಜರ್ನಲ್ ಗಳಲ್ಲಿ ಪ್ರಕಟಿಸಿದ್ದಾರೆ. 2006ರಲ್ಲಿ ಇವರ ಶೈಕ್ಷಣಿಕ ಸಾಧನೆಗಾಗಿ ಕಾಮನ್‌ವೆಲ್ತ್ ವಿಶ್ವವಿದ್ಯಾಲಯಗಳ ಒಕ್ಕೂಟದ ವತಿಯಿಂದ 'ಕಾಮನ್‌ವೆಲ್ತ್ ಶೈಕ್ಷಣಿಕ ಸಿಬ್ಬಂದಿ ಫೆಲೋಶಿಪ್' ಗೌರವ ನೀಡಲಾಗಿದೆ.
ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ವೈಚಾರಿಕತೆ, ಆದರ್ಶಗಳೇ ನನಗೆ ಮಾರ್ಗದರ್ಶಿ. ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕ ವಾತಾವರಣವನ್ನು ಬಲಪಡಿಸುವ ನಿಟ್ಟಿನಲ್ಲಿ ಚರ್ಚೆ, ಸಂವಾದಗಳು ನಡೆಯಬೇಕು. ವಿವಿಯನ್ನು ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ಕೇಂದ್ರಿತವನ್ನಾಗಿಸಿ ಮುಕ್ತ ಮತ್ತು ನಿರ್ಭಿಡೆಯ ವಾತಾವರಣ ನಿರ್ಮಿಸುವುದರತ್ತ ಗಮನಹರಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ವಿವಿಯ ನಿಕಟಪೂರ್ವ ಪ್ರಭಾರ ಕುಲಪತಿ ಪ್ರೊ. ಎಸ್.ವಿ ಕೃಷ್ಣಮೂರ್ತಿ, ಕುಲಸಚಿವ ಎ. ಎಲ್ ಮಂಜುನಾಥ್, ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್.ಎಂ ಗೋಪಿನಾಥ್, ಹಣಕಾಸು ಅಧಿಕಾರಿ ಜಿ. ಬಂಗಾರಪ್ಪ, ಪ್ರೊ. ಗುರುಲಿಂಗಯ್ಯ, ಪ್ರೊ. ಸತ್ಯಪ್ರಕಾಶ್. ಎಂ. ಆರ್ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.