ADVERTISEMENT

ಹೊಸನಗರ | ಪ್ರವಾಸಿಗರ ಸೆಳೆಯುತ್ತಿದೆ ಕೊರಟುಗಲ್ಲು ಸೇತುವೆ

60 ವರ್ಷಗಳ ಹಿಂದೆ ಶರಾವತಿ ಹಿನ್ನೀರಿನಲ್ಲಿ ಜಲಸಮಾಧಿ

ರವಿ ನಾಗರಕೊಡಿಗೆ
Published 23 ಜೂನ್ 2024, 5:55 IST
Last Updated 23 ಜೂನ್ 2024, 5:55 IST
ಹೊಸನಗರ ತಾಲ್ಲೂಕಿನ ಬೆನ್ನಟ್ಟೆ ಬಳಿ ಶರಾವತಿ ಮುಳುಗಡೆ ಹಿನ್ನೀರು ಪ್ರದೇಶದಲ್ಲಿ ಕಾಣ ಸಿಗುವ ಕೊರಟುಗಲ್ಲು ಕಮಾನು ಸೇತುವೆಯ ನೋಟ
ಹೊಸನಗರ ತಾಲ್ಲೂಕಿನ ಬೆನ್ನಟ್ಟೆ ಬಳಿ ಶರಾವತಿ ಮುಳುಗಡೆ ಹಿನ್ನೀರು ಪ್ರದೇಶದಲ್ಲಿ ಕಾಣ ಸಿಗುವ ಕೊರಟುಗಲ್ಲು ಕಮಾನು ಸೇತುವೆಯ ನೋಟ   

ಹೊಸನಗರ: 60 ವರ್ಷಗಳ ಹಿಂದೆ ಶರಾವತಿ ಹಿನ್ನೀರಿನಲ್ಲಿ ಜಲಸಮಾಧಿಯಾಗಿದ್ದ ಕೊರಟುಗಲ್ಲು ಸೇತುವೆ ಇಂದಿಗೂ ಸದೃಢವಾಗಿದ್ದು, ತನ್ನ ನೈಜ ಸೌಂದರ್ಯದಿಂದ ಪ್ರವಾಸಿಗರನ್ನು ಸೆಳೆಯುತ್ತಿದೆ.

ಆಧುನಿಕ ಆಲದ ಯಾವ ತಾಂತ್ರಿಕತೆಯೂ ಇಲ್ಲದೆ ಕೇವಲ ಕಲ್ಲು, ಸುಣ್ಣ, ಬೆಲ್ಲ, ಇಟ್ಟಿಗೆ, ಮಣ್ಣಿನ ಗಾರೆಯಿಂದ ನಿರ್ಮಿಸಿದ ಈ ಸೇತುವೆ ಮನ ಮೋಹಕವಾಗಿದೆ.

ತಾಲ್ಲೂಕಿನ ನಿಟ್ಟೂರು ಸಮೀಪದ ಬೆನ್ನಟ್ಟೆ ಬಳಿಯ ಶರಾವತಿ ಮುಳುಗಡೆ ಪ್ರದೇಶದಲ್ಲಿ ಈ ಕೊರಟುಗಲ್ಲು ಸೇತುವೆ ಕಾಣಬಹುದಾಗಿದೆ. ತಾಲ್ಲೂಕಿನ ಹೆಬ್ಬಿಗೆಯಿಂದ ಕುದುರೆ ಬೀರಪ್ಪ ಸರ್ಕಲ್ ಮಾರ್ಗವಾಗಿ ಹೊಸನಗರ ಸಂಪರ್ಕಿಸುವ ರಸ್ತೆ ಮಾರ್ಗ ಮಧ್ಯದ ಕೊರಟುಗಲ್ಲು ಬಳಿ ಹಿಂದೆ ಈ ಸೇತುವೆ ನಿರ್ಮಾಣ ಮಾಡಲಾಗಿತ್ತು. ನಿಟ್ಟೂರು ಸುತ್ತ ಮುತ್ತ ಜನರು ಹೊಸನಗರ ಸಂಪರ್ಕಿಸಲು ಈ ಮಾರ್ಗ ಅನುಸರಿಸುತ್ತಿದ್ದರು.

ADVERTISEMENT

ಶರಾವತಿ ನದಿಗೆ ಅಡ್ಡಲಾಗಿ ಲಿಂಗನಮಕ್ಕಿ ಅಣೆಕಟ್ಟು ನಿರ್ಮಿಸಿದ ನಂತರ ಹಿನ್ನೀರು ಪ್ರದೇಶದಲ್ಲಿ ಕೊರಟುಗಲ್ಲು ಸೇತುವೆ ಮುಳುಗಡೆಯಾಯಿತು. ಬೇಸಿಗೆಯ ದಿನಗಳಲ್ಲಿ ಹಿನ್ನೀರು ಭಾರಿ ಪ್ರಮಾಣದಲ್ಲಿ ಇಳಿದರೆ ಮಾತ್ರ ಈ ಸೇತುವೆಯ ದರ್ಶನವಾಗುತ್ತದೆ. ಈ ವರ್ಷ ಮೇ ತಿಂಗಳಿನಲ್ಲೇ ಹಿನ್ನೀರು ಗಣನೀಯವಾಗಿ ಇಳಿಮುಖ ಕಂಡ ಕಾರಣ ಸೇತುವೆ ಕಾಣಿಸುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಶರಾವತಿ ನದಿಗೆ ಅಡ್ಡಲಾಗಿ ಮಡೆನೂರು ಅಣೆಕಟ್ಟು ಕಟ್ಟಿದ ಕಾಲದಲ್ಲಿ ಈ ಕೊರಟಗಲ್ಲು ಸೇತುವೆ ನಿರ್ಮಾಣ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ.  60 ವರ್ಷಗಳಿಗೂ ಹೆಚ್ಚು ಕಾಲದಿಂದ ಮುಳುಗಡೆಯಾಗಿದ್ದರೂ ಸೇತುವೆಯ ಯಾವುದೇ ಭಾಗ ಕುಸಿದಿಲ್ಲ. ಅದರ ಅಂದಕ್ಕೆ ಕಿಂಚಿತ್ತೂ ಧಕ್ಕೆಯಾಗಿಲ್ಲ. ವಿನ್ಯಾಸದ ಮಾದರಿಗೂ ಹಾನಿಯಾಗದಿರುವುದು ವಿಶೇಷ.

ಸೇತುವೆಯ ಅನತಿ ದೂರದಲ್ಲಿ ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಗಡಿಭಾಗ ಗುರುತಿಸಿರುವ ಕಲ್ಲುಗಳು ಕೂಡ ಕಂಡು ಬರುತ್ತವೆ. ಅಲ್ಲದೇ ಇಲ್ಲಿನ ಬೆನ್ನಟ್ಟೆ ಕ್ಷೇತ್ರದ ಗೌರಿ ತೀರ್ಥದಿಂದ ಹರಿದು ಬರುವ ಮತ್ತು ಮಡೋಡಿಯಿಂದ ಸಾಗಿ ಬರುವ ಸಣ್ಣ ನದಿಗಳ ಸಂಗಮ ಸ್ಥಳ ಇದಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ಬಾರಿ ಹಿನ್ನೀರು ಪ್ರದೇಶದಲ್ಲಿ ಮೇ ಮೊದಲ ವಾರದಲ್ಲಿಯೇ ನೀರು ಕಡಿಮೆಯಾಗಿ ಮೈದಾನದಂತಾಗಿರುವ ಕಾರಣ ಸೇತುವೆಯೂ ಸೇರಿ ಈ ಭಾಗದ ಐತಿಹಾಸಿಕ ಕುರುಹುಗಳು ಗೋಚರವಾಗಿವೆ.

ವಿಸ್ಮಯವೇ ಸರಿ: ಶರಾವತಿ ಮುಳುಗಡೆ ಪ್ರದೇಶದಲ್ಲಿನ ಕೊರಟುಗಲ್ಲು ಸೇತುವೆ ಈ ಬಾರಿ ಮೇ ತಿಂಗಳಿನಲ್ಲಿಯೇ ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದು ಖುಷಿಯ ವಿಷಯ. ಕೇವಲ ಕಲ್ಲು, ಮಣ್ಣು, ಸುಣ್ಣ, ಬೆಲ್ಲ ಮಿಶ್ರಣದಲ್ಲಿ ಕಟ್ಟಿರುವ ಸೇತುವೆಯ ವಿನ್ಯಾಸ ಮನಮೋಹಕ ಅಷ್ಟೇ ಅಲ್ಲ ವಿಸ್ಮಯವೈ ಹೌದು. ಶರಾವತಿಯ ಮುಳುಗಡೆ  ಒಡಲಾಳದಲ್ಲಿ ಅದೆಷ್ಟು ಅದ್ಭುತಗಳು ಮುಳುಗಿ ಹೋಗಿವೆಯೋ ಹೇಳಲಾಗದು ಎಂದು ಅತ್ರಳ್ಳಿ ನಿವಾಸಿ  ಎ.ಆರ್. ಕುಮಾರಸ್ವಾಮಿ ಅಚ್ಚರಿ ವ್ಯಕ್ತಪಡಿಸಿದರು.

ಹೊಸನಗರ ತಾಲ್ಲೂಕಿನ ಬೆನ್ನಟ್ಟೆ ಬಳಿ ಶರಾವತಿ ಮುಳುಗಡೆ ಹಿನ್ನೀರು ಪ್ರದೇಶದಲ್ಲಿ ಕಾಣ ಸಿಗುವ ಕೊರಟುಗಲ್ಲು ಕಮಾನು ಸೇತುವೆಯ ನೋಟ
ಹೊಸನಗರ ತಾಲ್ಲೂಕಿನ ಬೆನ್ನಟ್ಟೆ ಬಳಿ ಶರಾವತಿ ಮುಳುಗಡೆ ಹಿನ್ನೀರು ಪ್ರದೇಶದಲ್ಲಿ ಕಾಣ ಸಿಗುವ ಕೊರಟುಗಲ್ಲು ಕಮಾನು ಸೇತುವೆಯ ನೋಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.