ADVERTISEMENT

ಶರಾವತಿ ಹಿನ್ನೀರಿನಲ್ಲಿ ಮುಳುಗುತ್ತಿದೆ ‘ಜನಜೀವನ’

ಪಟ್ಟಣ ಪಂಚಾಯಿತಿಯಲ್ಲಿದ್ದರೂ ಮೂಲಸೌಕರ್ಯ ವಂಚಿತ ಗ್ರಾಮಗಳು

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2022, 7:28 IST
Last Updated 24 ಏಪ್ರಿಲ್ 2022, 7:28 IST
ಗ್ರಾಮಗಳಿಗೆ ಸಂಪರ್ಕ ಸಾಧಿಸಲು ಶರಾವತಿ ಹಿನ್ನೀರಿನಲ್ಲಿ ಬೋಟ್ ಪಯಣ
ಗ್ರಾಮಗಳಿಗೆ ಸಂಪರ್ಕ ಸಾಧಿಸಲು ಶರಾವತಿ ಹಿನ್ನೀರಿನಲ್ಲಿ ಬೋಟ್ ಪಯಣ   

ಕಾರ್ಗಲ್: ಹೆಸರಿಗೆ ಪಟ್ಟಣ ಪಂಚಾಯಿತಿಯ ಕಟ್ಟ ಕಡೆಯ ವಾರ್ಡ್, ಸಾಗರ ತಾಲ್ಲೂಕು ಚುನಾವಣಾ ಮತ ಕ್ಷೇತ್ರದ ಮೊಟ್ಟ ಮೊದಲ ಮತಗಟ್ಟೆ ಬೂತ್, ಆದರೂ ವ್ಯವಸ್ಥಿತ ರಸ್ತೆ, ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ಶಾಲಾ ಕಟ್ಟಡವಿಲ್ಲದೇ ಮೂಲಸೌಕರ್ಯಗಳಿಂದ ವಂಚಿತವಾದ ಊರು ಸುಂಕವಿಲ್ಲದ ಸುಂಕದಮನೆ.

ನಾಡಿಗೆ ಬೆಳಕು ನೀಡಲು ತಮ್ಮ ಸರ್ವಸ್ವವನ್ನು ಕಳೆದುಕೊಂಡು ಮುಳುಗಡೆ ಗುಡ್ಡಗಳಲ್ಲಿ ಬದುಕನ್ನು ಸವಾಲಾಗಿ ಸ್ವೀಕರಿಸಿ ದಿನ ದೂಡುತ್ತಿದ್ದಾರೆ ಇಲ್ಲಿನ ಹಲವು ಗ್ರಾಮಗಳು ಜನರು. ದಶಕ ಕಳೆದರೂ ಸೌಲಭ್ಯ ಮಾತ್ರ ಸಿಕ್ಕಿಲ್ಲ.

ಶರಾವತಿ ಹಿನ್ನೀರಿನ ಪ್ರದೇಶದಲ್ಲಿ ಮನೆಗಳನ್ನು ಕಟ್ಟಿದ ಆದಿವಾಸಿ ‘ಗೊಂಡ’ ಜನಾಂಗದವರು ಇಲ್ಲಿ ವಾಸಿಸುತ್ತಿದ್ದಾರೆ. ಹೀಗಾಗಿ ಗ್ರಾಮ ‘ಗೊಂಡರ ಹಾಡಿ’ ಎಂದೇ ಹೆಸರು ಪಡೆದಿದೆ. ಇಲ್ಲಿನ ‌ಜನರ ಬವಣೆ ಕೇಳುವವರಿಲ್ಲ.

ADVERTISEMENT

ತಳಕಳಲೆ ಕಂದಾಯ ಗ್ರಾಮ ಮತ್ತು ಜೋಗ–ಕಾರ್ಗಲ್ ಪಟ್ಟಣ ಪಂಚಾಯಿತಿಗೆ ಸೇರಿರುವ ಪರ್ಯಾಯ ದ್ವೀಪಗಳ ಸಾಲಿನಲ್ಲಿ ಬರುವ ಮಜಿರೆ ಗ್ರಾಮಗಳಾದ ಕಲ್ಲೋಟ್ಟಿ, ಸುಂಕದಮನೆ, ತಾಸೊಳ್ಳಿ, ಜಬ್ಬುಗದ್ದೆ, ಹೆರ್ಕಣಿ, ಬರಗದ್ದೆ, ವಟ್ಟಕ್ಕಿ, ಮಸೆಕಲ್ಲು ಗೊಂಡ ಸಮುದಾಯದ ಆಶ್ರಯ ತಾಣಗಳು. 70 ಕುಟುಂಬಗಳು ಇಲ್ಲಿ ವಾಸವಿದ್ದು, 350 ಜನಸಂಖ್ಯೆ ಇದೆ.

ತಳಕಳಲೆ ಹಿನ್ನೀರಿನ ಕುಗ್ರಾಮ ವಾಸಿಗಳಲ್ಲಿ ಮಹಿಳೆಯರು ಅತಿ ಹೆಚ್ಚು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅವುಗಳಲ್ಲಿ ಪ್ರಮುಖವಾಗಿ ಆರೋಗ್ಯ ಸಮಸ್ಯೆ ಎದುರಾದಾಗ ಬದುಕು ಸಾಗಿಸುವುದು ಬಲು ಕಠಿಣವಾದ ಕೆಲಸ.

ಇಲ್ಲಿನ ಕುಗ್ರಾಮಗಳಲ್ಲಿ ಎಲ್ಲಿಯೂ ಆರೋಗ್ಯ ಕೇಂದ್ರಗಳಿಲ್ಲ. ದೂರದ ಕಾರ್ಗಲ್ ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೇ ಆಶ್ರಯಿಸಬೇಕಾದ ಅನಿವಾರ್ಯ ಸ್ಥಿತಿ ಇದೆ. ಆರೋಗ್ಯದಲ್ಲಿ ಏರುಪೇರು ಅಥವಾ ಅಪಘಾತಗಳು ಸಂಭವಿಸಿದರೆ ತುರ್ತು ಚಿಕಿತ್ಸೆಗೆ 28 ಕಿ.ಮೀ. ದೂರವಿರುವ ಕಾರ್ಗಲ್ ಸರ್ಕಾರಿ ಆಸ್ಪತ್ರೆಗೆ ಹೋಗಬೇಕು.

ಜಲಮಾರ್ಗದ ದಾರಿ:

ಅಲ್ಲಿಗೆ ಹೋಗಲು ಸಮರ್ಪಕ ಸಂಪರ್ಕ ವ್ಯವಸ್ಥೆ ಇಲ್ಲ.ಜಲಮಾರ್ಗದ ಹಾಯಿದೋಣಿ ಮತ್ತು ಸರ್ಕಾರದ ಜಲಸಾರಿಗೆ ಮೂಲಕವೇ ಬರಬೇಕು. ಐದಾರು ಕಿ.ಮೀ. ಸುತ್ತಲಿನ ರೋಗಿಗಳು, ಬಾಣಂತಿಯರನ್ನು ಕಂಬಳಿಯಲ್ಲಿ ಹೊತ್ತು ಕಾಡಿನ ನಡುವೆ ಸಾಗಿ ಕಾರ್ಗಲ್ ಕೇಂದ್ರ ಪ್ರದೇಶವನ್ನು ಸೇರಿಕೊಳ್ಳಬೇಕಾದ ಸ್ಥಿತಿ ಇಲ್ಲಿನ ಜನರದ್ದು. ಅದೂ 8 ಕಿ.ಮೀ. ದೂರ ನದಿಯಲ್ಲಿ ಪ್ರಯಾಣ ಮಾಡಬೇಕಾಗಿದೆ.

ಎರಡು ವರ್ಷಗಳ ಹಿಂದೆ ಕೆಪಿಸಿ ಇಲಾಖೆಯ ಸಾಮಾಜಿಕ ಕಲ್ಯಾಣ ನಿಧಿಯಿಂದ ₹ 3 ಕೋಟಿ ವೆಚ್ಚದಲ್ಲಿರಸ್ತೆಯನ್ನೇನೋ ನಿರ್ಮಾಣ ಮಾಡಲಾಗಿದೆ. ಆದರೆ ದೂರ ಪ್ರದೇಶಕ್ಕೆ ಹೋಗುವ ಪರದಾಟ ತಪ್ಪಿಲ್ಲ.

ಕಾಯಂ ಉದ್ಯೋಗವಿಲ್ಲದೇ ನಿರುದ್ಯೋಗದಿಂದ ಬಳಲುವ ಇಲ್ಲಿನ ಆದಿವಾಸಿ ಗೊಂಡ ಜನಾಂಗ ಬಹು ಮುಖ್ಯವಾಗಿ ಕೃಷಿ ಚಟುವಟಿಕೆಯ ಜೊತೆಗೆ ಅರಣ್ಯೋತ್ಪನ್ನ ಪದಾರ್ಥಗಳಾದ ಜೇನು, ಕಾಳುಮೆಣಸು, ಸೀಗೆಕಾಯಿ, ಪತ್ರೆ, ದಾಲ್ಚಿನ್ನಿ, ಸಾಂಬ್ರಾಣಿ, ಉಪ್ಪರಿಗೆ ಹುಳಿ ಹೀಗೆ ಮುಂತಾದ ವನಸಂಪತ್ತನ್ನು ಸಂಗ್ರಹಿಸಿ ಬದುಕಿನ ಹಾದಿ ಕಂಡುಕೊಂಡಿದೆ.

ಅರಣ್ಯ ಇಲಾಖೆಯ ತೀವ್ರ ಕಿರುಕುಳ ಹಾಗೂ ಈಚೆಗೆ ಕೇಂದ್ರ ಸರ್ಕಾರದಿಂದ ಘೋಷಣೆಯಾದ ಶರಾವತಿ ಕಣಿವೆ ಸಿಂಗಳೀಕ ಅಭಯಾರಣ್ಯದ ಸವಾಲುಗಳ ನಡುವೆ ಈ ಜನಾಂಗದ ಬದುಕಿನ ದಾರಿ ಕಷ್ಟಕರವಾಗಿದೆ. ಬದಲೀ ಮಾರ್ಗಗಳ ಅನ್ವೇಷಣೆಯತ್ತ ಹೊರಟ ಹೊಸ ಪೀಳಿಗೆ ಕಾನೂನು ಕುಣಿಕೆಗೆ ಬಲಿಯಾಗುತ್ತಿರುವುದು ವ್ಯವಸ್ಥೆಯ ದುರವಸ್ಥೆಗೆ ಹಿಡಿದ ಕೈಗನ್ನಡಿ.

ಆದಿವಾಸಿ ಗೊಂಡ ಜನಾಂಗದ ಮಕ್ಕಳಿಗಾಗಿ ಆರಂಭಗೊಂಡ ಸರ್ಕಾರಿ ಶಾಲೆ 3 ವರ್ಷಗಳಿಂದ ಬಿದ್ದು ಹೋಗಿದ್ದರೂ ಕೇಳುವವರು ಯಾರು ಇಲ್ಲ. ಕ್ಷೇತ್ರದ ಶಾಸಕರು ಅನುದಾನವನ್ನು ಕಲ್ಪಿಸಿದ್ದರೂ ಸ್ಥಳೀಯ ಆಡಳಿತ ವ್ಯವಸ್ಥೆ ಈ ಬಗ್ಗೆ ಮುತುವರ್ಜಿ ವಹಿಸಲು ಹಿಂದು ಮುಂದು ನೋಡುತ್ತಿದೆ ಎಂದು ದೂರುತ್ತಾರೆಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆಶ್ರೀಮತಿ ಸುಂಕದಮನೆ.

ಸುಂಕದಮನೆಯಲ್ಲಿ ಕೇವಲ ಐದನೇ ತರಗತಿವರೆಗೆ ಮಾತ್ರ ಶಾಲೆಯಿದ್ದು, ಅದರ ನಂತರ ಓದುವ ವಿದ್ಯಾರ್ಥಿಗಳ ಪಾಡು ಕಷ್ಟಕರವಾಗಿದೆ. ತಾತ್ಕಾಲಿಕವಾಗಿ ಬೇರೊಂದು ಕಟ್ಟಡದ ಸಭಾಂಗಣದಲ್ಲಿ ಇರುವ ಒಂದೇ ಕೋಣೆಯಲ್ಲಿ ಶಾಲೆಯನ್ನು ನಡೆಸಲಾಗುತ್ತಿದೆ. ಶಾಲೆಗೆ ಅತಿಥಿ ಶಿಕ್ಷಕ ಹಾಗೂ ವಾರಕ್ಕೆ ಎರಡು ದಿನ ನಿಯೋಜನೆಗೊಂಡ ಸರ್ಕಾರಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.

‘5ನೇ ತರಗತಿ ನಂತರ ಜೋಗ ಅಥವಾ ಕಾರ್ಗಲ್‍ ಶಾಲೆಗೆ ಬರಬೇಕಾಗಿದ್ದು, ಇದು ಕಷ್ಟಕರವಾದ ಕಾರಣ ಗ್ರಾಮಸ್ಥರು ತಾಳಗುಪ್ಪ ಅಥವಾ ಸಾಗರದ ಹಾಸ್ಟೆಲ್‍ಗೆ ತಮ್ಮ ಮಕ್ಕಳನ್ನು ಸೇರಿಸಿದ್ದಾರೆ. ಇಲ್ಲವೇ ದೂರದ ಊರಿನಲ್ಲಿನರುವ ತಮ್ಮ ಸಂಬಂಧಿಕರ ಮನೆಯಲ್ಲಿ ಬಿಟ್ಟು ಓದಿಸುತ್ತಿದ್ದಾರೆ. ನಮ್ಮ ಸಮಸ್ಯೆ ಕೇಳುವವರಿಲ್ಲ’ ಎಂದು ಅಳಲು ತೋಡಿಕೊಂಡರು ಹೆರ್ಕಣಿ ಗ್ರಾಮಸ್ಥದಾನಪ್ಪ.

ಇಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿದ್ದ ಗೊಂಡ ಸಮುದಾಯದ ಕುಟುಂಬಗಳಿಗೆ ಮನೆಯ ಹಕ್ಕುಪತ್ರವು ದೊರೆತಿದೆ. ಆದರೆ ಉಳುವವನೇ ಹೊಲದೊಡೆಯ ಕಾನೂನಿನ ಅಡಿಯಲ್ಲಿ ದೊರಕಿದ ಜಮೀನಿಗೆ ಈವರೆಗೂ ಸಾಗುವಳಿ ಚೀಟಿ ದೊರೆತಿಲ್ಲ. ತಾಂತ್ರಿಕವಾದ ತೊಡಕುಗಳ ನಡುವೆ ಭೂಮಿಯ ಒಡೆತನ ಕೆಪಿಸಿ, ಕಂದಾಯ, ಅರಣ್ಯ, ಪ್ರವಾಸೋದ್ಯಮ ಪಟ್ಟಣ ಪಂಚಾಯಿತಿ ಹೀಗೆ ಹಲವು ಆಡಳಿತದ ತಿಕ್ಕಾಟಗಳ ನಡುವೆ ರೈತರಿಗೆ ಭೂಮಿ ಹಕ್ಕು ಗಗನ ಕುಸುಮವಾಗಿದೆ.

ಇರುವ ಅಂಗನವಾಡಿ ಕಟ್ಟಡ ಮುಚ್ಚಿಹೋಗದಂತೆ ಗ್ರಾಮಸ್ಥರು ಶ್ರಮ ವಹಿಸಿ ಪುಟಾಣಿ ಮಕ್ಕಳನ್ನು ದುರ್ಗಮ ಹಾದಿಯಲ್ಲಿ ಕರೆತಂದು ಅಂಗನವಾಡಿ ಕೇಂದ್ರವನ್ನು ಮುನ್ನಡೆಸುತ್ತಿದ್ದಾರೆ. ವಿದ್ಯುತ್ ಮಾರ್ಗಗಳು ಗ್ರಾಮವನ್ನು ತಲುಪಿದ್ದರೂ ಮೊಬೈಲ್ ನೆಟ್‌ವರ್ಕ್ ಲಭ್ಯವಿಲ್ಲ ಎಂಬುದು ಯುವಜನರ ಅಳಲು.

ಇಲ್ಲಿನ ಗ್ರಾಮದಲ್ಲಿ ವಾಸಿಸುತ್ತಿರುವ ಗೊಂಡ ಸಮುದಾಯವು ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದ ಜಿಲ್ಲೆಗಳಲ್ಲಿ ತಮ್ಮ ಬಂದುಬಳಗದವರು, ಕುಟುಂಬಸ್ಥರನ್ನು ಹೊಂದಿದ್ದರೂ ಅವರು ಯಾರೂ ಇಲ್ಲಿಗೆ ಬರಲು ಇಷ್ಟಪಡುವುದಿಲ್ಲ ಎಂದು ಬೇಸರಿಸಿದರು ದಾನಪ್ಪ.

ಕುಗ್ರಾಮದ ಎಸ್.ಟಿ. ಜನಾಂಗವನ್ನು ಶೈಕ್ಷಣಿಕವಾಗಿ ಮುಂದೆ ತರಬೇಕಾದ ಸರ್ಕಾರ ಈ ನಿಟ್ಟಿನಲ್ಲಿ ಪ್ರಾಮಾಣಿಕವಾದ ಪ್ರಯತ್ನವನ್ನು ಮಾಡಬೇಕು. ಇಲ್ಲಿನ ಜನರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷವಿಜಯಕುಮಾರ ಗೊಂಡ.

ಮೂರು ವರ್ಷಗಳ ಹಿಂದೆ ಮಳೆಗಾಲದಲ್ಲಿ ಬಿದ್ದು ಹೋಗಿರುವ ಶಾಲೆಗೆ ಸೂರು ಕಲ್ಪಿಸುವ ಕೆಲಸಕ್ಕೆ ಇನ್ನೂ ಜನಪ್ರತಿನಿಧಿಗಳು ಮುಂದಾಗದಿರುವುದು ಬೇಸರದ ವಿಷಯ.
–ವಿಜಯಕುಮಾರ ಗೊಂಡ, ಮಾಜಿ ಅಧ್ಯಕ್ಷ,ಶಾಲಾಭಿವೃದ್ಧಿ ಸಮಿತಿ

ಇಲ್ಲಿನ ಭೂಮಿಯ ಒಡೆತನದ ಬಗ್ಗೆ ಕೆಪಿಸಿ, ಕಂದಾಯ, ಅರಣ್ಯ, ಪ್ರವಾಸೋದ್ಯಮ ಹಾಗೂ ಪಟ್ಟಣ ಪಂಚಾಯಿತಿ ಸೇರಿ ಹಲವು ಆಡಳಿತದ ನಡುವೆ ತಿಕ್ಕಾಟ ಇದೆ. ಹೀಗಾಗಿ ಅರ್ಹರಿಗೆ ಸಾಗುವಳಿ ಪತ್ರ ಸಿಕ್ಕಿಲ್ಲ.
–ದಾನಪ್ಪ, ಹೆರ್ಕಣಿ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.